ಕರ್ನಾಟಕ

ಸೋಮೇಶ್ವರದಲ್ಲಿ ರಕ್ಕಸ ಅಲೆ – ಕಾರವಾರ, ಕೊಡಗಿನಲ್ಲಿ ಭಾರೀ ಮಳೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಮುಂಗಾರು ಮಳೆ ಮತ್ತೊಂದು ಕಡೆ ವಾಯು ಚಂಡಮಾರುತದ ಎಫೆಕ್ಟ್ ಜೋರಾಗಿದೆ. 3 ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಉಳ್ಳಾಲದ ಸೋಮೇಶ್ವರದಲ್ಲಿ ಹೆಚ್ಚಿದ ಕಡಲ್ಕೊರೆತದಿಂದ ರೆಸಾರ್ಟ್‍ನ ಶೌಚಾಲಯ ಕಟ್ಟಡ ಸಮುದ್ರ ಪಾಲಾಗಿದೆ.

ಉಡುಪಿ: ಉಡುಪಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಮಳೆ ಆಗಿದೆ. ಬೈಂದೂರು, ಕುಂದಾಪುರದಲ್ಲಿ ಗಾಳಿ ಸಹಿತ ರಾತ್ರಿ ಸುರಿದ ಮಳೆ ತಂಪೆರೆದಿದೆ. ಹವಾಮಾನ ಇಲಾಖೆ ಜೂನ್ 15ರವರೆಗೆ ಕರಾವಳಿಯಲ್ಲಿ ಸಾಧಾರಣ ಮಳೆ, ಜೂನ್ 20ರ ನಂತರ ಅಬ್ಬರದ ಮುಂಗಾರು ಮಳೆಯನ್ನು ನಿರೀಕ್ಷೆ ಮಾಡಬಹುದು ಎಂದಿದೆ. ಭಾರೀ ಮಳೆಯ ನಡುವೆಯೂ ರಾತ್ರಿ ಉಡುಪಿ ಕೃಷ್ಣನ ಉತ್ಸವ ನಡೆದಿದೆ.

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುರಿದ ಭಾರೀ ಮಳೆಗೆ ಶೇಜಾವಾಡದ ಗುಡ್ಡದ ಬಳಿ ಇರುವ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಇದರಿಂದಾಗಿ ಕಾರವಾರದ ಅರ್ಧ ಭಾಗ ವಿದ್ಯುತ್ ವ್ಯತ್ಯಯವಾಗಿದೆ. ನಿನ್ನೆಯಿಂದ ಕಂಬಗಳ ರಿಪೇರಿ ಕೆಲಸ ಸಾಗಿದ್ದರೂ ಪೂರ್ಣವಾಗಿಲ್ಲ. ಹಾಗಾಗಿ, 2 ದಿನದಿಂದ ಜನ ಕತ್ತಲಲ್ಲಿ ಇರುವಂತಾಗಿದೆ.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಕಾರ್ಮೋಡ ಕವಿದಿದ್ದು ಎಡೆಬಿಡದೆ ಮಳೆ ಸುರಿಯುತ್ತಿದೆ.

ಒಮ್ಮೆ ಜೋರು ಗಾಳಿ, ಮತ್ತೊಮ್ಮೆ ಭಾರೀ ಮಳೆಗೆ ಅಡಿಕೆ, ಕಾಫಿ, ಮೆಣಸು ಬೆಳೆಗಾರರು ಮಳೆಗಾಳಿಯಿಂದ ಕಂಗಾಲಾಗಿದ್ದಾರೆ. ಮರ, ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳು ನೆಲಕಚ್ಚಿವೆ.

ಕೊಡಗು: ಮಳೆ ಎಂದರೆ ಬೆಚ್ಚಿಬೀಳುವಂತಹ ಪರಿಸ್ಥಿತಿ ಇರುವ ಕೊಡಗಿನಲ್ಲೂ ವರುಣಾ ಅಬ್ಬರಿಸಿದ್ದಾನೆ. ಬೆಳಗ್ಗೆಯಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆ ಮಧ್ಯಾಹ್ನದ ವೇಳೆ ಶುರುವಾಗಿ ಕೆಲಗಂಟೆಗಳ ಕಾಲ ಸುರಿಯಿತು. ಇದರಿಂದಾಗಿ ವಾಹನ ಸಂಚಾರದಲ್ಲಿ ಕೆಲ ಕಾಲ ಅಸ್ತವ್ಯಸ್ತ ಉಂಟಾಯಿತು. ಮಣ್ಣಿನ ರಸ್ತೆಗಳು ಕೆಸರುಮಯವಾಗಿ ಸಂಚಾರಕ್ಕೆ ಅಡ್ಡಿಯಾಯ್ತು.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮುಂದಿನ 2ರಿಂದ 3 ದಿನ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ನಗರದ ಕೆಲವು ಕಡೆ ಈಗಾಗಲೇ ಸಾಧಾರಣ ಮಳೆ ಆಗುತ್ತಿದ್ದು, ಗಾಳಿ ಜೊತೆ ವರುಣನ ಸಿಂಚನ ಮಾಡುತ್ತಿದ್ದಾನೆ. ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು ರಾತ್ರಿ ವೇಳೆಗೆ ಮಳೆಯಾಗುವ ಸಂಭವ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

Comments are closed.