ಕರ್ನಾಟಕ

ಗೃಹ ಸಚಿವ ಎಂ.ಬಿ. ಪಾಟೀಲ್ ಪ್ರತಿಮೆ ಸ್ಥಾಪನೆಗೆ ಮುಂದಾದ ಜೆಡಿಎಸ್ ಶಾಸಕ

Pinterest LinkedIn Tumblr


ವಿಜಯಪುರ(ಜೂನ್ 09): ಗೃಹ ಸಚಿವ ಎಂ.ಬಿ. ಪಾಟೀಲ್ ಅವರ ಪ್ರತಿಮೆ ಸ್ಥಾಪನೆಗೆ ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ ಮುಂದಾಗಿದ್ದಾರೆ. ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿಯೇ ಜೆಡಿಎಸ್ ಶಾಸಕರು ಈ ಘೋಷಣೆ ಮಾಡಿದ್ದು ಅಚ್ಚರಿ ತಂದಿತು.

ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರ ಪ್ರತಿಮೆ ಸ್ಧಾಪಿಸಲಾಗಿದೆ. ಎಚ್.ಡಿ. ದೇವೇಗೌಡರು ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಿರುವ ಕೊಡುಗೆಯ ಸ್ಮರಣೆಗಾಗಿ ಈ ಪ್ರತಿಮೆ ಸ್ಥಾಪಿಸಲಾಗಿದೆ. ಅದೇ ರೀತಿ ಗೃಹ ಸಚಿವ ಎಂ.ಬಿ. ಪಾಟೀಲ್ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಬರದ ಬೀಡಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ನಡೆದಾಡುವ ದೇವರು ಎಂದೇ ಹೆಸರಾಗಿರುವ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆಶಯದಂತೆ ಈ ಭಾಗದಲ್ಲಿ ಬಂಜರು ಭೂಮಿಗೆ ನೀರುಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ಗುರುಗಳೂ ಆಗಿರುವ ಎಂ.ಬಿ. ಪಾಟೀಲ ಅವರ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ ಹೇಳಿದ್ದಾರೆ.

ಎಂ.ಬಿ. ಪಾಟೀಲ್ ಕೂಡ ದೇವೇಗೌಡರ ರೀತಿಯಲ್ಲಿ ಓರ್ವ ಮುತ್ಸದ್ಧಿ ನಾಯಕ ಎಂದು ಹೊಗಳಿದ ಜೆಡಿಎಸ್ ಶಾಸಕ ಡಾ. ದೇವಾನಂದ ಎಫ್. ಚವ್ಹಾಣ, ವಿಜಯಪುರ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಎಂ.ಬಿ. ಪಾಟೀಲ ಅವರ ಪ್ರತಿಮೆಯನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ.

Comments are closed.