ಮದ್ದೂರು (ಜೂ. 9): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೊಲೀನ ನಂತರ ಜಿಲ್ಲೆಯ ಜೆಡಿಎಸ್ ನಾಯಕರು ಹತಾಶೆಗೊಂಡಿದ್ದಾರೆ. ಅದರಲ್ಲೂ ಜೆಡಿಎಸ್ ಹಿರಿಯ ನಾಯಕ ಎಚ್ಡಿ ದೇವೇಗೌಡರ ಬೀಗರಾಗಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತೀವ್ರ ಹತಾಶೆಗೊಂಡಿದ್ದಾರೆ. ಈಗ ಅವರು ಮತದಾರರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ವಿಪಕ್ಷ ನಾಯಕರು ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಚುನಾವಣೆಗೂ ಮೊದಲೂ ಸುಮಲತಾ ವಿರುದ್ಧ ತಮ್ಮ ನಾಲಿಗೆ ಹರಿಯ ಬಿಟ್ಟು ತಮ್ಮಣ್ಣ ಎಡವಟ್ಟು ಮಾಡಿಕೊಂಡಿದ್ದರು. ಈಗ ಚುನಾವಣೆ ಸೋಲಿನ ಬಳಿಕ ಮತದಾರರ ವಿರುದ್ಧ ಕೆಟ್ಟ ಶಬ್ದ ಪ್ರಯೋಗಿಸಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಮದ್ದೂರು ಕ್ಷೇತ್ರದಲ್ಲಿ ಹಲವೆಡೆ ವಿವಿಧ ಅಭಿವೃ್ದ್ಧಿ ಕಾಮಗಾರಿ ಶಂಕುಸ್ಥಾಪನೆಗೆ ತಮ್ಮಣ್ಣ ಶನಿವಾರ ತೆರಳಿದ್ದರು. ಈ ವೇಳೆ ಅನೇಕರು ಸಚಿವರ ಬಳಿ ತಮ್ಮೂರಿನ ಸಮಸ್ಯೆ ಹೇಳಿಕೊಂಡಿದ್ದಾರೆ. ಇದಕ್ಕೆ ಮತದಾರರ ವಿರುದ್ಧವೇ ತಮ್ಮಣ್ಣ ತಿರುಗಿ ಬಿದ್ದಿದ್ದಾರೆ. ಅಭಿವೃದ್ದಿ ಮಾಡೋ ನಮಗೆ ಓಟ್ ಹಾಕದೆ ಯಜಮಾನಿಕೆಗೆ ಮಾತ್ರ ಬರುತ್ತೀರಾ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೆ, ಗ್ರಾಮವೊಂದರಲ್ಲಿ ಗುದ್ದಲಿ ಪೂಜೆ ಬಳಿಕ ಬಹಿರಂಗ ವೇದಿಕೆಯಲ್ಲಿಯೆ “ನೀವು ನಮಗೆ ಓಟ್ ಹಾಕಿಲ್ಲ. ಹಾಗಾಗಿ ಈಗ ಗೆಲ್ಲಿಸಿದವರ ಕೈಯ್ಯಲ್ಲೇ ಅಭಿವೃದ್ದಿ ಮಾಡಿಸಿಕೊಳ್ಳಿ,” ಎಂದು ಹೇಳಿರುವ ತಮ್ಮಣ್ಣ, ಮತದಾರರ ವಿರುದ್ಧ ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ.
ಮದ್ದೂರು ಕ್ಷೇತ್ರದ ಮತದಾರರ ಜೊತೆಗೆ ಅಶ್ಲೀಲವಾಗಿ ಮಾತನಾಡಿ ದರ್ಪ ತೋರಿರುವ ಸಚಿವರ ವರ್ತನೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಅಲ್ಲದೆ ಸಚಿವರ ದರ್ಪದ ವಿಡಿಯೋ ಕೂಡ ಸೋಷಿಯಲ್ ವೈರಲ್ ಆಗಿದ್ದು, ನೆಟ್ಟಿಗರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಸಚಿವರ ಈ ವರ್ತನೆಗೆ ಜಿಲ್ಲೆಯ ಮತದಾರರು ಸೇರಿ ಹಲವು ಸಂಘಟನೆಗಳು ಹಾಗು ವಿವಿಧ ರಾಜಕೀಯ ಪಕ್ಷದವರು ತೀವ್ರ ಅಸಮಾಧಾನ ವ್ಯಕ್ತಡಿಸಿದ್ದು, ಬಹಿರಂಗ ಕ್ಷಮೆಗೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ರಾಜೀನಾಮೆ ನೀಡಲು ಆಗ್ರಹಿಸಿದ್ದಾರೆ.