ಕರ್ನಾಟಕ

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿನ ಕುರಿತು ನಡೆದ ತನಿಖಾ ವರದಿ; ಶೀಘ್ರವೇ ಸಲ್ಲಿಕೆ

Pinterest LinkedIn Tumblr

ಬೆಂಗಳೂರು: ಕರ್ನಾಟಕದ ಐಪಿಎಸ್ ಅಧಿಕಾರಿ ಡಾ. ಮಧುಕರ್ ಶೆಟ್ಟಿ ಸಾವಿನ ಕುರಿತು ನಡೆದ ತನಿಖೆಯ ಪ್ರಾಥಮಿಕ ವರದಿ ಸಿದ್ಧಗೊಂಡಿದೆ. ಈ ವರದಿ ಇದೇ ತಿಂಗಳು ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಡಿ.25ರಂದು ಮಧುಕರ್ ಶೆಟ್ಟಿ ಅವರನ್ನು ಹೈದರಾಬಾದ್​ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಡಿ. 28ರಂದು ಮಧುಕರ್ ಶೆಟ್ಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಹೆಚ್1ಎನ್1 ಕಾರಣ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು.

ಆದರೆ, ಮಧುಕರ್​ ಶೆಟ್ಟಿ ಸಾವಿನ ಬಗ್ಗೆ ಕುಟುಂಬದವರು ಹಾಗೂ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದರು. ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಹಾಗಾಗಿ, ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿತ್ತು. ನಾರಾಯಣ ಹೃದಯಾಲಯದ ಡಾ. ದೇವಿಶೆಟ್ಟಿ ಈ ತಂಡದ ನೇತೃತ್ವ ವಹಿಸಿಕೊಂಡಿದ್ದರು.

ವೈದ್ಯರು, ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ 6 ಜನರ ವಿಶೇಷ ತಜ್ಞರ ಸಮಿತಿ ಮಧುಕರ ಶೆಟ್ಟಿ ಸಾವಿನ ಸುತ್ತ ತನಿಖೆ ನಡೆಸಿದೆ. ಈಗಾಗಲೇ ಪ್ರಾಥಮಿಕ ವರದಿ ಸಿದ್ಧಪಡಿಸಿರುವ ತಜ್ಞರ ಸಮಿತಿ, ಇದೇ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ವರದಿಯಿಂದ ಮಧುಕರ ಶೆಟ್ಟಿ ಸಾವಿನ ಸುತ್ತ ಕೇಳಿಬಂದ ಆರೋಪ ಸತ್ಯವಾಗಲಿದೆಯೇ ಅಥವಾ ಅನುಮಾನ ಬಗೆಹರಿಯಲಿದೆಯೇ ಎನ್ನುವ ಕುತೂಹಲ ಮೂಡಿದೆ.

ದಕ್ಷ ಅಧಿಕಾರಿಯ ಹೆಜ್ಜೆ ಗುರುತುಗಳು

1999ರ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ ಮಧುಕರ್​ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ಅವರು ದೆಹಲಿಯ ಜವಹರಲಾಲ್​ ವಿಶ್ವವಿದ್ಯಾಲಯದಲ್ಲಿ (ಜೆಎನ್​ಯು) ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಧುಕರ್​ ಶೆಟ್ಟಿ ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿ ಎಂಬ ಹೆಸರನ್ನ ಜನಸಾಮಾನ್ಯರಿಂದ ಗಳಿಸಿದ್ದರು.

ಮಧುಕರ್ ಶೆಟ್ಟಿ ಈ ಹಿಂದೆ ಚಿಕ್ಕಮಗಳೂರು ಎಸ್​ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ, ಡಿಸಿ ಹರ್ಷ ಗುಪ್ತಾ ಜತೆಗೂಡಿ ದಲಿತ ಸಮುದಾಯದ ಬೆನ್ನೆಲುಬಾಗಿ ನಿಂತಿದ್ದರು. ದಲಿತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ವ್ಯಕ್ತಿಗಳಿಂದ ಜಮೀನು ಬಿಡಿಸಿ ದಲಿತರಿಗೆ ನೀಡಿದ್ದರು. ನಂತರ ಆ ಹಳ್ಳಿಯ ಹೆಸರನ್ನು ‘ಗುಪ್ತಶೆಟ್ಟಿ’ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು. ಈಗಲೂ ಆ ಹಳ್ಳಿಯಲ್ಲಿರುವ ನೂರಾರು ಮಂದಿ ಮಧುಕರ್​ ಶೆಟ್ಟಿ ಅವರು ಮಾಡಿದ ಕೆಲಸವನ್ನು ನೆನೆಯುತ್ತಾರೆ.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್​ ಹೆಗಡೆ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ಉನ್ನತ ವಿದ್ಯಾಭ್ಯಾಸದ ರಜೆಯ ಮೇಲೆ ಮಧುಕರ್​ ಶೆಟ್ಟಿ 2011ರಲ್ಲಿ ತೆರಳಿದ್ದರು. ಅದಾಗಿ ಬರೋಬ್ಬರಿ ಐದು ವರ್ಷಗಳ ಕಾಲ ಮಧುಕರ್​ ಶೆಟ್ಟಿ ಅಮೆರಿಕದಲ್ಲಿ ಅಧ್ಯಯನ ನಡೆಸಿದ್ದರು. ಆ ಸಂದರ್ಭದಲ್ಲಿ ಬಹಿರಂಗವಾಗಿಯೇ ಸಂತೋಷ್​ ಹೆಗಡೆ ಅವರ ಮೇಲೆ ಅಸಮಾಧಾನವನ್ನು ಹೊರ ಹಾಕಿದ್ದರು. ಸಂತೋಷ್​ ಹೆಗಡೆ ಕೆಲ ವಿಚಾರಗಳಲ್ಲಿ ತಾರತಮ್ಯ ಮಾಡುತ್ತಿದ್ದರು ಎಂಬ ಗಂಭೀರ ಆರೋಪವನ್ನು ಮಧುಕರ್​ ಶೆಟ್ಟಿ ಮಾಡಿದ್ದರು.

ನಂತರ ಐಜಿಪಿಯಾಗಿ ಬಡ್ತಿ ಪಡೆದ ಅವರು ಕೆಲ ಕಾಲ ಪೊಲೀಸ್​ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಅವರು ಸರ್ದಾರ್​ ವಲ್ಲಭಭಾಯ್​ ಪಟೇಲ್​ ರಾಷ್ಟ್ರೀಯ ಪೊಲೀಸ್​ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಹಿರಿಯ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಮಗನಾದ ಮಧುಕರ್ ಶೆಟ್ಟಿ ಹಲವು ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್​ಪಿಯಾಗಿ ಕೆಲಸ ಮಾಡಿದ್ದರು. ವೀರಪ್ಪನ್ ಬಂಧನಕ್ಕೆ ರಚಿಸಿದ್ದ ಸ್ಪೆಷಲ್ ಟಾಸ್ಕ್ ಫೋರ್ಸ್​ನಲ್ಲೂ ಎಸ್​ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ನ್ಯೂಯಾರ್ಕ್​ನ ವಿವಿಯೊಂದರಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಪಿಹೆಚ್​ಡಿ ಪಡೆದಿದ್ದ ಅವರು 2017ರ ಮಾರ್ಚ್​ನಲ್ಲಿ ಹೈದರಾಬಾದ್​ನ ಐಪಿಎಗೆ ಸೇರ್ಪಡೆಗೊಂಡಿದ್ದರು.

Comments are closed.