ಮಂಡ್ಯ : “ನನ್ನಂಥ ಕಚಡಾ ನನ್ಮಗ ಇನ್ನೊಬ್ಬರಿಲ್ಲ. ನನಗೆ ಎರಡು ಮುಖವಿದೆ. ಆ ಕಡೆ ಈ ಕಡೆ ಮುಖ. ಎಲ್ಲೂ ಮಧ್ಯ ಮುಖ ಇಟ್ಟುಕೊಂಡು ಎಲ್ಲೂ ಹೋಗಿಲ್ಲ. ಆದರೆ, ಈ ಚುನಾವಣೆಯಲ್ಲಿ ಮಧ್ಯದಲ್ಲಿ ಮುಖ ಇಟ್ಟುಕೊಂಡಿದ್ದೆ. ನನ್ನಿಂದ ಅಮ್ಮನಿಗೆ ತೊಂದರೆಯಾಗಬಾರದು ಎಂಬ ಒಂದೇ ಉದ್ದೇಶದಿಂದ ನಾನು ಏನು ಮಾತನಾಡಿಲ್ಲ,” ಎಂದು ನಟ ದರ್ಶನ್ ಸ್ಪಷ್ಟಪಡಿಸಿದರು.
ಅಂತಿಮ ಪ್ರಚಾರದ ದಿನವಾದ ಇಂದು ಮಂಡ್ಯದಲ್ಲಿ ಸುಮಲತಾ ಪರವಾಗಿ ನಡೆಸಿದ ಸ್ವಾಭಿಮಾನ ಸಮಾವೇಶದಲ್ಲಿ ಐಟಿ ದಾಳಿಗೆ ಸುಮಲತಾ ಕಾರಣ ಎಂದು ಸಿಎಂ ಕುಮಾರಸ್ವಾಮಿ ಆರೋಪದ ವಿರುದ್ಧ ಅಬ್ಬರಿಸಿದ ದರ್ಶನ್, ಅವರು ಈಗ ತಾನೇ ರಾಜಕೀಯಕ್ಕೆ ಬಂದಿರುವುದು. ಅವರ ಮೇಲೆ ಇಂತಹ ಸುಳ್ಳು ಆಪಾದನೆ ಹೊರಿಸುವುದು ಎಷ್ಟು ಸರಿ ಎಂದು ಕಿಡಿ ಕಾರಿದರು.
ನಮ್ಮ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ ಆಗಿದ್ದು ನಿಜ. ಅಲ್ಲಿ ಅವರಿಗೆ ಒಂದು ಡೈರಿ ಸಿಕ್ಕಿದೆ. ಆ ಡೈರಿಯಲ್ಲಿ ಯಾವ ಹಸುವಿಗೆ ಯಾವ ಚುಚ್ಚು ಮದ್ದು ಹಾಕಿದ್ದೇವೆ. ಯಾವಾಗ ಊಟ ಕೊಡಬೇಕು ಎಂದು ಬರೆದಿದ್ದೇವೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಅಮ್ಮನ ಪರ ನಾವು ಜೋಡೆತ್ತುಗಳಂತೆ ನಿಂತೆವು. ನಾವು ಯಾಕೆ ಹೆದರಬೇಕು. ನಾವೇನು ಅಪರಾಧ ಮಾಡಿದ್ದೇವೆ. ಅಮ್ಮ ನಿಂತಿದ್ದಾರೆ ಎಂದು ಅವರ ಪಕ್ಕದಲ್ಲಿ ನಾವು ನಿಂತೆವು. ಅದಕ್ಕೆ ನಮ್ಮ ಮನೆಯ ವಿಷಯವನ್ನು ತೆಗೆದರು, ಯಾಕೆ ನಿಮ್ಮ ಮನೆಯಲ್ಲಿ ಜಗಳಗಳು ಆಗಲ್ವಾ. ಯಾರ ಮನೆಯಲ್ಲಿ ನಡೆಯಬಾರದು ನಮ್ಮ ಮನೆಯಲ್ಲಿ ನಡೆದಿಲ್ಲ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿಗೆ ಥ್ಯಾಂಕ್ಸ್
ಇಷ್ಟು ದಿನ ಒಂದಿಬ್ಬರು ನನ್ನನ್ನು ಡಿ ಬಾಸ್ ಎನ್ನುತ್ತಿದ್ದರು. ಆದರೆ ಇಂದು ಕುಮಾರಸ್ವಾಮಿಯಿಂದಾಗಿ ಇವತ್ತು ಇಡೀ ಕರ್ನಾಟಕ ಡಿ ಬಾಸ್ ಎನ್ನುತ್ತಿದ್ದಾರೆ. ಈ ರೀತಿ ಹೇಳಲು ಕಾರಣ ಕುಮಾರಸ್ವಾಮಿ ಅದಕ್ಕೆ ನಾನು ಅವರಿಗೆ ಥ್ಯಾಂಕ್ಸ್ ಹೇಳ್ತೀನಿ ಎಂದು ಕುಹುಕವಾಡಿದರು.
ಸಿನಿಮಾದವರು ಎಂದು ಬಯ್ಯುತ್ತಾರೆ. ಇವರು 60 ಕೋಟಿ ನಿರ್ಮಾಣ ಮಾಡಿ ಸಿನಿಮಾ ಮಾಡಿದರು. ಈಗ ನಮಗೆ ಬಯ್ಯುತ್ತಾರೆ. ಇದೇ ದುಡ್ಡು ತಂದು ಇಲ್ಲಿ ಅಭಿವೃದ್ಧಿ ಮಾಡಿದ್ದರೆ, ಅದನ್ನು ತೋರಿಸಿ ಮತ ಕೇಳ ಬಹುದಿತ್ತು. ಈ ರೀತಿ ಕಷ್ಟ ಪಡುವ ಅಗತ್ಯವೇ ಇರುತ್ತಿರಲಿಲ್ಲ. ಇವರಂತೆ ನಾವು ಕಾರುಗಳಲ್ಲಿ ಅಬ್ಬರದ ಪ್ರಚಾರ ಮಾಡಲಿಲ್ಲ ನಾವು ಮಾಡಿದ್ದು ಕೇವಲ ಆಟೋದಲ್ಲಿ ಎಂದರು.
ತಿನ್ನಲು ಉಣ್ಣಲು ಮಾತ್ರ ಅಂಬಿಯಲ್ಲ
ಈಗ ಮಾತನಾಡುವ ಜನ ನಮ್ಮ ತಂದೆ ಇದ್ದಾಗ ಹೇಗಿದ್ದರು. ಅವರು ಹೋದ 11 ದಿವಸಕ್ಕೆ ಮನೆ ಹೇಗಿತ್ತು ಎಂಬುದು ಗೊತ್ತಿದೆ. ನಾವು ಸುಖದಲ್ಲಿ ಇದ್ದೇವು. ಈಗ ಕಷ್ಟದಲ್ಲಿ ಇದ್ದೇವೆ. ಕೇವಲ ತಿನ್ನಲು ಉಣ್ಣಲು ಮಾತ್ರ ಅಲ್ಲ. ಯಾವಾಗ ಅಮ್ಮ ನಿಲ್ಲುತ್ತೇನೆ ಎಂದರು ಆಗ ನಾನು ಒಂದೇ ಮಾತು ಅಂದಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವ ಮೂಲಕ ಡಿಸಿ ತಮ್ಮಣ್ಣಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ರೈತ ಮಗನಿಗೆ ತಿರುಗೇಟು
ಮಾತೆತ್ತಿದರೆ ನಾವು ರೈತ ಮಕ್ಕಳು ಎನ್ನುತ್ತಾರೆ. ಅವರಿಗೇನು ಗೊತ್ತು ನೆರಳಿನಲ್ಲಿರುವವರು ಎನ್ನುತ್ತಾರೆ. ಹಸು ಕರು ಹಾಕಿದರೆ, ಅದಕ್ಕೆ ಏನು ಮೇವು ಹಾಕಬೇಕು ಎಂಬುದೇ ಇವರಿಗೆ ಗೊತ್ತಿಲ್ಲ. ಒಂದು ಲೋಟ ಹಾಲು ಕರೆಯಿರಿ ನೋಡೋಣ ಎಂದು ಸವಾಲು ಹಾಕಿದರು.
ನನಗೆ ವರ್ಷಕ್ಕೆ ಎರಡೂವರೆ ಕೋಟಿ ಹಣ ಬೇಕು. ನಮ್ಮ ಮನೆಗೆ ಯಾರೇ ಸಹಾಯ ಎಂದು ಕೇಳಿಕೊಂಡು ಬಂದರು ನಾನು ಅವರಿಗೆ ನೆರವು ನೀಡುತ್ತೇನೆ. ಇವರು ಅನುದಾನ ಎಂದು ಹಣ ನೀಡಲಿ. ಹೇಗೆ ಅಭಿವೃದ್ಧಿ ಮಾಡುವುದು ಎಂದು ತೋರಿಸುತ್ತೀನಿ ಎಂದು ಚಾಲೆಂಜ್ ಹಾಕಿದರು.
ದರ್ಶನ್ ಪುಟ್ಟಣಯ್ಯ ನೋಡಿದರೆ ಹೆಮ್ಮೆ ಆಗುತ್ತದೆ. ಅವರು ವಿದೇಶದಲ್ಲಿ ಓದಿದವರು. ಇಲ್ಲೇನು ಮಾಡುತ್ತಾರೆ ಎಂದು ಅವರ ವಿರುದ್ಧ ಅಪಪ್ರಚಾರ ಮಾಡಿದರು. ಅವರು ಎಂತಹ ವ್ಯಕ್ತಿ ಗೊತ್ತೆ. ನಾನು ಮುಂದೆ ಪಾಂಡವಪುರದಲ್ಲಿ ಪ್ರಚಾರ ಮಾಡಿದರೆ ಅದು ದರ್ಶನ್ ಪುಟ್ಟಯ್ಯ ಪರ ಮಾತ್ರ ಎಂದು ಮಾತು ನೀಡಿದರು
ಮತ ಮಾರಿಕೊಳ್ಳಬೇಡಿ
ಎರಡು ದಿನದಲ್ಲಿ ನಿಮಗೆ ಹೇಗಾದರೂ ಆಮಿಷ ಒಡ್ಡಲು ಅವರು ಮುಂದಾಗುತ್ತಾರೆ. ಒಂದು ಜೋಡೆತ್ತು ಬೆಲೆ 60-70 ಸಾವಿರ. ಒಂದು ನಾಯಿಯ ಬೆಲೆ 5000 ರೂ ಅಂತಹದ್ರಲ್ಲಿ ನಿಮ್ಮ ಮತ ಮಾರಿಕೊಳ್ಳಬೇಡಿ. ನನಗೆ ಗೊತ್ತು 1000 ಸಿಕ್ಕರೆ ಒಂದು ಹೊತ್ತಾದರೂ ನೆಮ್ಮದಿಯಾಗಿ ಊಟ ಮಾಡಿ ದಿನ ಕಳೆಯಬಹುದು ಎಂದು ಹಾಗೆಂದು ವರ್ಷದ ಕೂಳು ಕಳೆದುಕೊಳ್ಳಬೇಡಿ. ನಾವು ಇಷ್ಟು ದಿನ ಪೆರೇಡ್ ಮಾಡಿದ್ದೇವೆ. ಇನ್ನು ಮಿಕ್ಕಿದು ನಿಮ್ಮ ಕೈಯಲ್ಲಿದೆ. ಎರಡು ದಿನ ಯೋಧರ ತರಹ ಕೆಲಸ ಮಾಡಿ. ಅಮ್ಮನಿಗೆ ಒಳ್ಳೆದು ಮಾಡಿದ್ರೆ ಇಡೀ ಪ್ರಪಂಚಕ್ಕೆ ಗೊತ್ತಾಗತ್ತೆ. ಅಮ್ಮನಿಗೆ ಒಳ್ಳೆದು ಮಾಡಿದ್ರೆ ಸಾಯುವವರೆಗೂ ನಾನು ನಿಮಗೆ ಚಿರಋಣಿಯಾಗಿರುತ್ತೇನೆ ಎಂದರು.