ಕರ್ನಾಟಕ

ಬಿಜೆಪಿ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್​ ನಾಯಕರು!

Pinterest LinkedIn Tumblr


ಕೋಲಾರ: ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಪರ ಪ್ರಚಾರ ಕಾರ್ಯಕ್ರಮಕ್ಕೆ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಕೆಎಚ್ ಮುನಿಯಪ್ಪ ಏಳು ಬಾರಿ ಸಂಸದರು ಮತ್ತು ಎರಡು ಬಾರಿ ಮಂತ್ರಿ ಆದರೂ ಕೋಲಾರಕ್ಕೆ ಅವರ ಕೊಡುಗೆ ಏನೂ ಇಲ್ಲ. ಈ ಹಿಂದೆಯೇ ಮುನಿಯಪ್ಪ ಸೋಲಬೇಕಿತ್ತು. ಕಳೆದ ಬಾರಿ ಅಭ್ಯರ್ಥಿ ಹಿಂದೆ ಸರಿಯಲು ಕೋಟಿಗಟ್ಟಲೆ ಹಣ ಕೊಟ್ಟಿದ್ದರು. ಈ ಬಾರಿ ಅದು ಆಗಲ್ಲ, ಮುನಿಸ್ವಾಮಿ ಅದಕ್ಕೆಲ್ಲಾ ಬಗ್ಗಲ್ಲ. ಕೆಎಚ್ ಮುನಿಯಪ್ಪ ಆಟ ಈ ಬಾರಿ ನಡೆಯಲ್ಲ ಎಂದು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ, ಗೋದಾವರಿ ನದಿ ಜೋಡಣೆ ವಿಚಾರವಾಗಿ ನಿತಿನ್ ಗಡ್ಕರಿ ಬಳಿ ಮಾತನಾಡಿದ್ದೇನೆ. ಎತ್ತಿನ ಹೊಳೆ ಯೋಜನೆಗೆ ಮುನಿಯಪ್ಪರಿಂದ ಪ್ರಮಾಣಿಕ ಪ್ರಯತ್ನ ಇಲ್ಲದಿರುವುದರಿಂದ ಅದು ನನೆಗುದಿಗೆ ಬಿದ್ದಿದೆ. ಮನೆ ಇಲ್ಲದವರಿಗೆ ಎಲ್ಲಾ ಜನಕ್ಕೂ ನಾನು ಮತ್ತು ಮುನಿಸ್ವಾಮಿ ಜೊತೆಯಲ್ಲಿ ಇದ್ದು ಮಾಡ್ತೇವೆ ಎಂದು ಭರವಸೆ ನೀಡಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ 300 ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದ್ದೇವೆ. ರಾಜ್ಯದಲ್ಲಿ 22 ಸ್ಥಾನ ಗೆಲ್ಲೋದು ಖಚಿತ. ಕೋಲಾರದಲ್ಲಿ ಈ ಬಾರಿ ಕಮಲ ಗೆಲ್ಲುತ್ತದೆ. ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಈ ಬಾರಿ ಎಲ್ಲರ ಪರವಾಗಿದೆ. ಮಹಿಳೆಯರಿಗೆ ಹೆಚ್ಚು ಒತ್ತು ನೀಡಲಾಗಿದೆ. ರೈತರು, ಬಡವರಿಗೆ, ವೃದ್ದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾಮಾನ್ಯ ಜನರಿಗೆ ಅನುಕೂಲವಾಗುವ ಪ್ರಣಾಳಿಕೆ ನಮ್ಮದು. ಮೈತ್ರಿ ಪಕ್ಷಗಳಲ್ಲಿ ಭಿನ್ನಮತ ಮುಗಿಲುಮುಟ್ಟಿದೆ. ಮೈತ್ರಿ ಪಕ್ಷಗಳಲ್ಲಿನ ಹೊಂದಾಣಿಕೆ ಕೊರತೆ ಬಿಜೆಪಿಗೆ 22 ಸ್ಥಾನ ಪಡೆಯೋಕೆ ಅನುಕೂಲ ಆಗಿದೆ. ಸರ್ಕಾರ ಇರುತ್ತೆ ಹೋಗುತ್ತೆ ಎಂಬುದನ್ನು ಈಗಲೇ ಹೇಳೋಕಾಗಲ್ಲ, ನಾನು ಊಹೆಯೂ ಮಾಡೋಕಾಗಲ್ಲ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ ಮುಖಂಡರಾದ ಮುಳಬಾಗಿಲಿನ ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಮತ್ತು ಚಿಂತಾಮಣಿಯ ಮಾಜಿ ಶಾಸಕ ಸುಧಾಕರ ರೆಡ್ಡಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದರು. ಕೆಎಚ್ ಮುನಿಯಪ್ಪ ನಮ್ಮನ್ನು ಹಂತ ಹಂತವಾಗಿ ಮುಗಿಸಿದ್ದಾರೆ. ಇನ್ನೂ ಹಲವು ನಾಯಕರನ್ನು ಮುಗಿಸುತ್ತಾರೆ. ಕೆಎಚ್ ಮುನಿಯಪ್ಪರನ್ನು ಮನೆಗೆ ಕಳಿಸುವುದೇ ನಮ್ಮ ಗುರಿ ಮಾಜಿ ಶಾಸಕರಿಬ್ಬರೂ ಗುಡುಗಿದರು. ಮುನಿಯಪ್ಪಗೆ ಟಿಕೆಟ್​ ನೀಡಬಾರದು ಎಂದು ಕೊತ್ತೂರು ಮಂಜುನಾಥ್​ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹೈಕಮಾಂಡ್​ ಕದವನ್ನು ತಟ್ಟಿಬಂದಿದ್ದರು.

Comments are closed.