ಕರ್ನಾಟಕ

ನಿಖಿಲ್​​ ಪರ ಕೆಲಸ ಮಾಡಲು ಸಾಧ್ಯವಿಲ್ಲವೆಂದರೆ ಪಕ್ಷ ಬಿಟ್ಟು ತೊಲಗಿ’; ಮಂಡ್ಯ ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯ ತರಾಟೆ

Pinterest LinkedIn Tumblr


ಬೆಂಗಳೂರು: ಮಂಡ್ಯ ಕಾಂಗ್ರೆಸ್​​-ಜೆಡಿಎಸ್ ಮೈತ್ರಿಯಲ್ಲಿ ಆರಂಭದಿಂದಲ್ಲೇ ಬಿರುಕು ಮೂಡಿದೆ. ಮೈತ್ರಿ ಅಭ್ಯರ್ಥಿ ನಿಖಿಲ್​​ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡದೇ ಸ್ಥಳೀಯ ಕಾಂಗ್ರೆಸ್ಸಿಗರು ಹೈಕಮಾಂಡ್​​ಗೆ ಸೆಡ್ಡು ಹೊಡೆದಿದ್ಧಾರೆ. ಅಲ್ಲದೇ ಬಹಿರಂಗವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶರ ಪರ ಬಂಡಾಯ ಕಾಂಗ್ರೆಸ್​ ನಾಯಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜೆಡಿಎಸ್​​ ವರಿಷ್ಠ ದೇವೇಗೌಡ ಮತ್ತು ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ಸ್ಥಳೀಯ ಕಾಂಗ್ರೆಸ್​ ನಾಯಕರ ವಿರುದ್ಧ ಕೆಂಡಕಾರುತ್ತಲೇ ಇದ್ದಾರೆ. ಈ ಮೈತ್ರಿಯಲ್ಲಿ ಮೂಡಿರುವ ಬಿರುಕು ಸರಿಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯನವರು ಮುಂದಾಗಿದ್ದು, ಇಂದು ಕಾವೇರಿ ನಿವಾಸದಲ್ಲಿ ಸ್ಥಳೀಯ ಕಾಂಗ್ರೆಸ್​ ನಾಯಕರ ಸಭೆ ನಡೆಸಿದರು.

ಹಳೆ ದ್ವೇಷ ಮರೆತು ಮೈತ್ರಿ ಅಭ್ಯರ್ಥಿ ನಿಖಿಲ್​​ ಪರವಾಗಿ ಕೆಲಸ ಮಾಡುವಂತೆ ಸೂಚಿಸಲು ಮಾಜಿ ಸಿಎಂ ಸಿದ್ದರಾಮಯ್ಯನವರು ಇಂದು ಮಂಡ್ಯ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿದರು. ನಾವು ಮೈತ್ರಿ ಅಭ್ಯರ್ಥಿಯನ್ನು ಒಮ್ಮತದಿಂದ ಬೆಂಬಲಿಸಬೇಕಿದೆ. ಯಾವುದೇ ಕಾರಣಕ್ಕೂ ನೀವು ಸುಮಲತಾ ಪರವಾಗಿ ಪ್ರಚಾರ ಮಾಡಬಾರದು. ಮಂಡ್ಯದಲ್ಲಿ ನೀವು ಜೆಡಿಎಸ್​​ನದೊಂದಿಗೆ ಸೇರಿ ಮೈತ್ರಿ ಅಭ್ಯರ್ಥಿಗೆ ಪ್ರಚಾರ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಕಾಂಗ್ರೆಸ್​​ ನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ಧಾರೆ .

ಇನ್ನು ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್​ ಬಾವುಟ ಪ್ರದರ್ಶಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಮೈತ್ರಿಗೆ ಪೆಟ್ಟು ಬೀಳಲಿದೆ. ನಾವು ಎಷ್ಟು ಬಾರಿ ನಿಮಗೆ ಎಚ್ಚರಿಕೆ ನೀಡಿದರು ಪ್ರಯೋಜನವಾಗಲಿಲ್ಲ. ಇನ್ನೊಮ್ಮೆ ಹೀಗಾದರೇ ನಾವು ಪಕ್ಷದಿಂದ ನಿಮ್ಮನ್ನು ಕಿತ್ತೊಗೆಯಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್​ನವರು ನಮ್ಮನ್ನು ಪ್ರಚಾರಕ್ಕೆ ಕರೆದಿಲ್ಲ. ಹಾಗಾಗಿ ನಾವು ಪ್ರಚಾರಕ್ಕೆ ಹೋಗಿಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ಧಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲು ಕೆಲ ಕಾಂಗ್ರೆಸ್​ ನಾಯಕರು, ರೈತ ಸಂಘಟನೆಗಳು ಮತ್ತು ಬಿಜೆಪಿ ಸುಮಲತಾರಿಗೆ ಬೆಂಬಲ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಇನ್ನು ಸ್ಥಳೀಯ ಕಾಂಗ್ರೆಸ್ಸಿಗರು ಮಂಡ್ಯ ಜಿಲ್ಲಾ ಜೆಡಿಎಸ್​ ನಾಯಕರ ವಿರುದ್ಧ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ಧಾರೆ. ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ಪದೇ ಪದೇ ಸಿಎಂ ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದೀವಿ ಅಂತ ಹೇಳುತ್ತಿದ್ಧಾರೆ. ನಾವು ಯಾವ ಮುಖ ಇಟ್ಕೊಂಡು ನಿಖಿಲ್ ಪರ ಕೆಲಸ ಮಾಡಬೇಕು. ನಮ್ಮನ್ನ ಪದೇ ಪದೇ ಹೀಗೆ ಅವಮಾನಿಸಿದರೆ ಹೇಗೆ ? ನಮಗೂ ಗೌರವ ಇಲ್ವಾ ? ಅವರಿಗೆ ನಮ್ಮ‌ ಮೇಲೆ ನಂಬಿಕೆ ಇಲ್ಲವಾಗಿದೆ. ನಾವೇಕೆ ಮೇಲೆ ಬಿದ್ದು ಯಾಕೆ ಪ್ರಚಾರ ಮಾಡಬೇಕು ? ಅವರಾದ್ರೂ ಒಂದು ಮಾತು ಬನ್ನಿ ಒಟ್ಟಿಗೆ ಸೇರಿ ಕೆಲಸ ಮಾಡೋಣ ಅಂದ್ರೆ ನಾವು ಆಗಲ್ಲ ಅಂತಿದ್ವಾ? ಎಂದು ಪ್ರಶ್ನಸಿದರು. ಅಲ್ಲದೇ ಈಗೇನೋ ಕಷ್ಟಪಟ್ಟು ಕೆಲಸ ಮಾಡ್ತೇವೆ. ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮನ್ನ ಕಣ್ಣೆತ್ತು ನೋಡಲ್ಲ ಎಂದು ಸಿದ್ದರಾಮಯ್ಯನವರ ಮುಂದೆ ತಮ್ಮ ಅಸಮಾಧಾನ ತೋಡಿಕೊಂಡಿದ್ಧಾರೆ ಕಾಂಗ್ರೆಸ್​ ಸ್ಥಳೀಯ ನಾಯಕರು.

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯನವರು, ಸಮಸ್ಯೆ ಬೇಕಾದರೇ ಬಗೆಹರಿಸೋಣ. ಇದು ಒಂದು ಕ್ಷೇತ್ರದ ಪ್ರಶ್ನೆಯಲ್ಲ. ದೇಶದ ಹಿತಾಸಕ್ತಿಯ ಪ್ರಶ್ನೆ. ಹಾಗಾಗಿ ಎಲ್ಲ ನಾಯಕರು ಒಟ್ಟಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ ಪರವಾಗಿ ಕೆಲಸ ಮಾಡಿ ಎಂದಿದ್ದಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ತಟಸ್ಥವಾಗಿದ್ದುಬಿಡಿ. ಇಲ್ಲದೇ ಹೋದರೆ ಕಾಂಗ್ರೆಸ್​ ಬಿಟ್ಟೋಗಿ. ಆದರೆ, ಪಕ್ಷದ ವಿರುದ್ಧವಾಗಿ ನಡೆದು ಕೆಂಗೆಣ್ಣಿಗೆ ಗುರಿಯಾಗಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Comments are closed.