ಕರ್ನಾಟಕ

ಶೀಘ್ರದಲ್ಲಿಯೇ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚೆಚ್ಚು ಎಲೆಕ್ಟ್ರಿಕ್ ವಾಹನಗಳು!

Pinterest LinkedIn Tumblr


ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ಇನ್ನು ಕೆಲವೇ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ನಗರದಲ್ಲಿನ ಪರಿಸರ ದೃಷ್ಟಿಯಿಂದ ಒಳ್ಳೆ ಬೆಳವಣಿಗೆಯಾಗಲಿದೆ. ಬೆಸ್ಕಾಂ ಕೈಗೊಳ್ಳುತ್ತಿರುವ ಕ್ರಮಗಳಿಂದ ಕ್ಲೀನ್ ಮತ್ತು ಗ್ರೀನ್ ಎನರ್ಜಿಯಾಗಿರುವ ವಿದ್ಯುತ್ ಬಳಸಿ ಎಲೆಕ್ಟಿಕ್ ವಾಹನಗಳು ಹೆಚ್ಚೆಚ್ಚು ರಸ್ತೆಗಿಳಿಯಲಿವೆ. ಹಾಗಾದರೇ ಬೆಸ್ಕಾಂ ಯೋಜನೆಯಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಪ್ರತಿದಿನ ಬೆಂಗಳೂರಿನಲ್ಲಿ 75 ಲಕ್ಷ ವಾಹನಗಳು ರಸ್ತೆಗಳಿಯುತ್ತವೆ. ಆ ಪೈಕಿ ಬಹುತೇಕ ಪೆಟ್ರೋಲ್, ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳೇ. ಹೀಗಾಗಿ ಎಲ್ಲಿ ನೋಡಿದರು ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ, ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕಲ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಮುಂದಾಗಿದೆ. ನಗರದ ಬಿಬಿಎಂಪಿ, ಬಿಎಂಟಿಸಿ, ಕೆಎಸ್​ಆರ್​ಟಿಸಿ, ಬಿಡಿಎ ಸೇರಿದಂತೆ ಸರ್ಕಾರದ ವಿವಿಧ ಸಂಸ್ಥೆಗಳಿಗೆ ಸೇರಿದ 112 ಕಡೆಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಮಾಡಲಿಕ್ಕೆ ಹೊರಟಿದೆ. ಇದಕ್ಕಾಗಿ ಟೆಂಡರ್ ಕರೆದಿದ್ದು, ಇನ್ನು 6 ತಿಂಗಳಲ್ಲಿ ನಗರದೆಲ್ಲೆಡೆ ಇವಿ ಸ್ಟೇಷನ್ ಗಳು ಕಾರ್ಯನಿರ್ವಹಿಸಲಿವೆ.

ಸದ್ಯ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಕೇಂದ್ರ ಕಚೇರಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್​​ಗಳಿವೆ. ಅದೇ ರೀತಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ‘ಇವಿ’ ಸ್ಟೇಷನ್ ಗಳಿವೆ. ಎಸಿ ಚಾರ್ಜಿಂಗ್ ಸ್ಟೇಷನ್ ನಲ್ಲಿ ಒಂದು ಕಾರನ್ನು 6 ಗಂಟೆಗಳಲ್ಲಿ ಚಾರ್ಜ್ ಮಾಡಿ 120 ಕಿಲೋ ಮೀಟರ್ ಚಲಿಸಬಹುದು. ಅದೇ ರೀತಿ ಬೈಕ್ ಅನ್ನು 40 ನಿಮಿಷ ಚಾರ್ಜ್ ಮಾಡಿದ್ರೆ 60 ಕಿಲೋ ಮೀಟರ್ ಚಲಿಸಬಹುದು. ಡಿಸಿ ಚಾರ್ಜಿಂಗ್ ಸ್ಟೇಷನ್ ಆದರೆ 90 ನಿಮಿಷದಲ್ಲಿ ಎಲೆಕ್ಟ್ರಿಕ್ ಕಾರ್ ಚಾರ್ಜ್ ಆಗುತ್ತೆ. ಪೆಟ್ರೋಲ್ – ಡೀಸೆಲ್ ವಾಹನಗಳಿಗೆ ಹೋಲಿಸಿದರೇ ಎಲೆಕ್ಟಿಕ್ ವಾಹನ ನಿರ್ವಹಣಾ ವೆಚ್ಚ ಕಡಿಮೆ.

ಒಂದು ಕಿ.ಮೀ ಚಾಲನಾ ವೆಚ್ಚ ಎಷ್ಟಾಗುತ್ತೆ?

ಎಲೆಕ್ಟ್ರಿಕ್ ವಾಹನ – 1 ರೂ.ಗಿಂತ ಕಡಿಮೆ
ಡೀಸೆಲ್ ವಾಹನ — 4.50 ರೂ. ಅಥವಾ ಅದಕ್ಕಿಂತ ಜಾಸ್ತಿ

ಪೆಟ್ರೊಲ್ ವಾಹನ — 5.50 ರೂ. ಅಥವಾ ಅದಕ್ಕಿಂತ ಜಾಸ್ತಿ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಬಾಡಿಗೆ ಆಧಾರದ ಮೇಲೆ ಪಡೆದುಕೊಂಡಿರುವ ವಾಹನಗಳ ಪೈಕಿ ಶೇಕಡ 50ರಷ್ಟು ಎಲೆಕ್ಟ್ರಿಕ್ ವೆಹಿಕಲ್ ಗಳಿರಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಅವರ ಸೂಚನೆ ಕಾರ್ಯಗತವಾಗಲಿದೆ. ಬೆಂಗಳೂರಿನಲ್ಲಿ ಸದ್ಯ 7 ಸಾವಿರ ಎಲೆಕ್ಟ್ರಿಕ್ ಟೂವೀಲರ್, ಆಟೋ ಹಾಗೂ ಕಾರುಗಳಿವೆ. ನಗರದಾದ್ಯಂತ 112 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಪ್ರಾರಂಭವಾದರೇ ಹೊಗೆ ಮತ್ತು ಶಬ್ದವಿಲ್ಲದ ಎಲೆಕ್ಟ್ರಿಕ್ ವಾಹನಗಳು ಈ ಟ್ರಾಫಿಕ್ ಮಧ್ಯೆ ಸಾಗಲಿದೆ. ಬದಲಾವಣೆ ಸರ್ಕಾರದಿಂದಲೇ ಆರಂಭವಾಗಿದೆ. ಪರಿಸರಸ್ನೇಹಿಯಾದ ಎಲೆಕ್ಟಿಕ್ ಕಾರ್ ಬಳಕೆಯೀಗ ನಮ್ಮ ಸರದಿಯಾದರೇ ಉತ್ತಮ ಅಲ್ಲವೇ.

Comments are closed.