ಕರ್ನಾಟಕ

ಸಾವಿರ ಅಡಿಯಿಂದ ಬಿದ್ದರೂ ಇಬ್ಬರು ಪೈಲಟ್‍ಗಳು ಬಚಾವ್

Pinterest LinkedIn Tumblr


ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಏರ್ ಶೋ 12ನೇ ಆವೃತ್ತಿಯ ಏರೋ ಇಂಡಿಯಾಗೆ ಬುಧವಾರ ಅಧಿಕೃತ ಚಾಲನೆ ಸಿಗಲಿದೆ. ಆದರೆ ಅದಕ್ಕೂ ಮುನ್ನವೇ ಮಂಗಳವಾರ ನಡೆದ ತಾಲೀಮಿನಲ್ಲಿ ಅವಘಡ ಸಂಭವಿಸಿದ್ದು ಸೂರ್ಯಕಿರಣ್ ಪೈಲಟ್ ಸಾಹಿಲ್ ಗಾಂಧಿ ದುರಂತದಲ್ಲಿ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಪೈಲಟ್‍ಗಳಾದ ವಿಟಿ ಶೆಲ್ಕೆ ಹಾಗೂ ಸ್ಕ್ವಾಡ್ರನ್ ಲೀಡರ್ ತೇಜೇಶ್ವರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಡೆದಿದ್ದೇನು?
ಯಲಹಂಕ ವಾಯುನೆಲೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಸೂರ್ಯ ಕಿರಣ್ ವಿಮಾನಗಳ ತಾಲೀಮು ಆರಂಭವಾಗಿತ್ತು. ಆಗಸದಲ್ಲಿ ಶಿಸ್ತು ಬದ್ಧವಾಗಿ ತಾಲೀಮು ನಡೆಯುತ್ತಿದ್ದಾಗ 11.35ರ ಸುಮಾರಿಗೆ ವಿಮಾನಗಳು ಮುಖಾಮುಖಿಯಾಗಿ ಡಿಕ್ಕಿಯಾಗಿತ್ತು. ಇದರ ಪರಿಣಾಮ ನಿಯಂತ್ರಣ ತಪ್ಪಿದ ವಿಮಾನಗಳು ನೆಲದತ್ತ ಉರುಳತೊಡಗಿತು.

ವಿಮಾನದಲ್ಲೇ ಸಾವನ್ನಪ್ಪಿದ ಪೈಲಟ್:
ಎರಡು ವಿಮಾನದಲ್ಲಿ 3 ಮಂದಿ ಪೈಲಟ್‍ಗಳು ಇದ್ದರು. ವಿಮಾನ ಡಿಕ್ಕಿಯಾಗುತ್ತಿದಂತೆ ಇಬ್ಬರು ಪೈಲಟ್‍ಗಳು ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಕೆಳಗಡೆ ಹಾರಿದ್ದಾರೆ. ಆದರೆ ಕಾಕ್‍ಪಿಟ್ ಹಿಂದೆ ಕುಳಿತಿದ್ದ ಸಾಹಿದ್ ಗಾಂಧಿಗೆ ಮಾತ್ರ ವಿಮಾನದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ಅಂತಿಮ ಕ್ಷಣದವರೆಗೂ ಕಾಕ್ ಪಿಟ್ ಓಪನ್ ಮಾಡಲು ಎಷ್ಟೇ ಪ್ರಯತ್ನ ನಡೆಸಿದರೂ ಕೂಡ ವಿಮಾನ ಓಪನ್ ಆಗದ ಕಾರಣ ವಿಮಾನ ನೆಲಕ್ಕೆ ಉರುಳುತ್ತಿದಂತೆ ಸಾವನ್ನಪ್ಪಿದ್ದಾರೆ.

ವಿಮಾನದ ಒಂದು ಭಾಗ ಸ್ಥಳೀಯ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಯಾಗಿತ್ತು. ನೋಡ ನೋಡುತ್ತಿದಂತೆ ಧರೆಗುರುಳಿದ ವಿಮಾನ ಹೊತ್ತಿ ಉರಿಯತೊಡಗಿತು. ಇದಕ್ಕೂ ಮುನ್ನ ವಿಮಾನ ದಿಕ್ಕು ತಪ್ಪುತ್ತಿದ್ದಂತೆ ಎಚ್ಚೆತ್ತ ಇಬ್ಬರು ಪೈಲಟ್‍ಗಳು ಪ್ಯಾರಾಚೂಟ್ ಬಳಸಿ ಸಾವಿರ ಅಡಿ ಮೇಲಿನಿಂದ ಜಿಗಿದಿದ್ದರು. ಪ್ಯಾರಾಚೂಟ್ ಸಹಾಯವಿದ್ದರೂ ಕೂಡ 1 ಸಾವಿರ ಅಡಿ ಎತ್ತರದಿಂದ ಜಿಗಿದ ಪರಿಣಾಮ ಇಬ್ಬರು ಪೈಲಟ್‍ಗಳು ಗಂಭೀರವಾಗಿ ಗಾಯಗೊಂಡಿದ್ದರು. ಕ್ಷಣ ಮಾತ್ರದಲ್ಲಿ ನಡೆದ ಘಟನೆಯಿಂದ ಎಚ್ಚೆತ್ತ ಅಧಿಕಾರಿಗಳು ಏರ್ ಅಂಬುಲೆನ್ಸ್ ಹೆಲಿಕಾಪ್ಟರ್ ನಲ್ಲಿ ಇಬ್ಬರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿದರು. ಬಹುಬೇಗ ಚಿಕಿತ್ಸೆ ಲಭಿಸಿದ ಕಾರಣ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಡವಾಣೆಯ ಜನ ಕಂಗಾಲು:
ವಾಯುನೆಲೆಯ ಪಕ್ಕದ ದಂಡಿಗೆನಹಳ್ಳಿಯಲ್ಲಿ ಎರಡು ವಿಮಾನಗಳು ಧರೆಗೆ ಅಪ್ಪಳಿಸಿದವು. ಒಂದು ವಿಮಾನ ಬಡಾವಣೆಯ ಮನೆಗೆ ತಾಗಿಬಿದ್ದರೆ, ಮತ್ತೊಂದು ವಿಮಾನ 300 ಮೀಟರ್ ದೂರದ ಶೆಡ್ ಪಕ್ಕದಲ್ಲಿ ಬಿದ್ದಿದೆ. ಭಾರೀ ಶಬ್ಧ ಕೇಳಿ ಮನೆಯಿಂದ ಹೊರ ಬಂದ ಬಡಾವಣೆಯ ಜನ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದರು. ಕೂಡಲೇ 15ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದವು. ಘಟನೆ ಕುರಿತು ಸಂಜೆ ವೇಳೆಗೆ ಅಧಿಕೃತ ಮಾಹಿತಿ ನೀಡಿದ ವಾಯುಪಡೆ ಪೈಲಟ್ ಸಾವನ್ನಪ್ಪಿದ್ದನ್ನು ಖಚಿತ ಪಡಿಸಿತ್ತು.

ಶೋದಲ್ಲಿ ಸೂರ್ಯಕಿರಣ್ ಇರಲ್ಲ:
ಈ ಬಾರಿ ಏರೋ ಶೋ ನಲ್ಲಿ ಸೂರ್ಯ ಕಿರಣ್ ಹಾರಾಟ ಇರುವುದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವಿಮಾನವನ್ನೂ ನಾವು ತಪಾಸಣೆ ಮಾಡಿ ಹಾರಾಟ ನಡೆಸುತ್ತೇವೆ. ಇಂದಿನ ಘಟನೆ ದುರದೃಷ್ಟಕರವಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ. ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ತಿಳಿಸಿದರು.

Comments are closed.