ಕರ್ನಾಟಕ

ಲೋಕಸಭೆ ಜಿದ್ದಾಜಿದ್ದಿ; ಫೆ.22 ರಿಂದ ಮಾ.19 ರವರೆಗೆ ಮೋದಿ ರಾಜ್ಯ ಪ್ರವಾಸ

Pinterest LinkedIn Tumblr


ಬೆಂಗಳೂರು: ಸಾರ್ವತ್ರಿಕ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಜಂಟಿಯಾಗಿ ಚುನಾವಣೆಗೆ ಹೋಗುವುದಾಗಿ ಘೋಷಿಸಿದೆ. ಈ ಮೈತ್ರಿಗೆ ಸೆಡ್ಡು ಹೊಡೆಯಲು ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​​​ ಯಡಿಯೂರಪ್ಪ ಸಾಲುಸಾಲು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅಲ್ಲದೇ ಈ ಬಾರಿಯೂ ಪ್ರಧಾನಿ ಮೋದಿ ವರ್ಚಸ್ಸಿನಿಂದಲೇ ಗೆಲ್ಲಲು ಬಿಜೆಪಿ ಮುಂದಾಗಿದೆ. ಆದ್ದರಿಂದಲೇ ಪ್ರಧಾನಿ ಮೋದಿಯವರು ಇದೇ ಫೆ.22 ರಿಂದ ಮಾ.19ರವರೆಗೆ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಇನ್ನು ರಾಜ್ಯದ ವಿವಿಧೆಡೆ ಬಹಿರಂಗಾ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​-ಜೆಡಿಎಸ್​​ ಮೈತ್ರಿಯನ್ನು ಸೋಲಿಸಲೇಬೇಕೆಂದು ಬಿಜೆಪಿ ಪಣತೊಟ್ಟಿದೆ. ಹಾಗಾಗಿಯೇ ಮೋದಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಯಕರ್ತರ ಸಮಾವೇಶ, ಸಂವಾದ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಖುದ್ದು ಪ್ರಧಾನಿ ಮೋದಿಯವರೇ ಯಾತ್ರೆಯಲ್ಲಿ ಭಾಗಿಯಾಗಲಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಲಿದ್ದಾರೆ. ಜತೆಗೆ ಈ ಬಾರಿ ಚುನಾವಣೆ ಗೆಲ್ಲಲು ಹೇಗೆ ವಿಭಿನ್ನವಾಗಿ ಕೆಲಸ ಮಾಡಬೇಕು? ಎಂಬುದರ ಬಗ್ಗೆಯೂ ಮೋದಿ ಭಾಷಣದ ವೇಳೆ ತಿಳಿಸಿದ್ಧಾರಂತೆ!

ಇನ್ನು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಬಿಎಸ್​ವೈ, ನಾವು ಇದಿನಿಂದಲೇ ಸಾಲುಸಾಲು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ಮೋದಿ ಸಂಕಲ್ಪ ಯಾತ್ರೆ, ನನ್ನ ಪರಿವಾರ, ಬಿಜೆಪಿ ಪರಿವಾರ, ವಿಕಾಸ ಯಾತ್ರೆ ಹೀಗೆ ಹಲವಾರು ಹೆಸರಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಇದೇ 21 ರಂದು ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರಗಳಲ್ಲಿ ಬೃಹತ್​​ ಕಾರ್ಯಕ್ರಮ ನಡೆಯಲಿದೆ. ಬಳಿಕ ಅಂದೇ ದೇವನಹಳ್ಳಿಯಲ್ಲಿ ನಡಯಲಿರುವ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಲಿದ್ದಾರೆ ಎಂದರು.

ಹಾಗೆಯೇ ಫೆ.22 ರಂದು ಬೀದರ್ ಜಿಲ್ಲೆಯ ಹುಮನಾಬಾದ್‍ನಲ್ಲಿಸಭೆ ನಡೆಯಲಿದೆ. ನಂತರ ಕಲಬುರ್ಗಿ ಮತ್ತು ಬೀದರ್ ಶಕ್ತಿ ಕೇಂದ್ರದಲ್ಲೂ ಪ್ರಮುಖರ ಸಭೆ ನಡೆಸಲಾಗುತ್ತಿದೆ. ನಮ್ಮ ಜತೆಗೆ ಅಂದು ಸಭೆಯಲ್ಲಿ ಕೇಂದ್ರ ಸಚಿವರಾದ ಪುರುಷೋತ್ತಮ್ ರುಪಾಲ್ ಭಾಗವಹಿಸಲಿದ್ದಾರೆ. ಯಾದಗಿರಿಯಲ್ಲಿ ಮೋದಿ ವಿಜಯ ಸಂಕಲ್ಪಯಾತ್ರೆ; ಫೆ. 23 ರಂದು ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಮುಖಂಡರ ಸಭೆ; 25 ರಂದು ಗದಗದಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ; 28 ರಂದು ರಾಯಚೂರಿನಲ್ಲಿ ಸಂಕಲ್ಪ ಯಾತ್ರೆ; ಮಾ.1 ರಂದು ಕಲಬುರ್ಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಾರ್ವಜನಿಕ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ನಂತರ ಮಾ.2 ರಂದು ತುಮಕೂರು, 3 ರಂದು ಚಿತ್ರದುರ್ಗ ಮತ್ತು ದಾವಣಗೆರೆ, 4 ರಂದು ಹಾವೇರಿ ಹಾಗೂ ಉತ್ತರ ಕನ್ನಡ, 5 ರಂದು ಚಿಕ್ಕೋಡಿ ಮತ್ತು ಬೆಳಗಾವಿ, 6 ರಂದು ಧಾರವಾಡ, 7 ಕೊಪ್ಪಳ ಹಾಗೂ ಬಳ್ಳಾರಿ, 8 ರಂದು ಬೆಂಗಳೂರು ಉತ್ತರ, 9 ಬೆಂಗಳೂರು ಕೇಂದ್ರ, 10 ಬೆಂಗಳೂರು ದಕ್ಷಿಣ, 11 ಬೆಂಗಳೂರು ಗ್ರಾಮಾಂತರ, 12 ರಂದು ಕೋಲಾರ, 13 ಶಿವಮೊಗ್ಗ, 14 ಉಡುಪಿ, 15 ರಂದು ಮಂಗಳೂರು, 16 ಕೊಡಗು, 17 ಚಾಮರಾಜನಗರ ಮತ್ತು ಮೈಸೂರು, 18 ರಂದು ಮಂಡ್ಯ, ಹಾಸನ ಹಾಗೂ ಮಾ.19 ಕ್ಕೆ ಚಿಕ್ಕಮಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

Comments are closed.