ಕರ್ನಾಟಕ

ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಎನ್ನಲಾರೆ; ಸ್ಪೀಕರ್ ರಮೇಶ್​ ಕುಮಾರ್

Pinterest LinkedIn Tumblr


ಕೋಲಾರ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ, ಎಂ.ಟಿ.ಬಿ. ನಾಗರಾಜು, ಶಾಸಕ ಎಸ್​.ಟಿ.ಸೋಮಶೇಖರ್​ ಅವರು ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ನೀಡಿದ್ದ ಹೇಳಿಕೆ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ರಾಜಕೀಯ ಸಂಚಲನವನ್ನೇ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಸ್ಪೀಕರ್​ ಕೆ.ಆರ್. ರಮೇಶ್​ ಕುಮಾರ್​ ಅವರು ಕೂಡ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯ,ಮಂತ್ರಿ ಎನ್ನಲಾರೆ, ಕೊನೆಯವರೆಗೂ ಅವರೇ ನಮ್ಮ ನಾಯಕರು ಎಂದು ಹಾಡಿ ಹೊಗಳಿದ್ದಾರೆ.

ನೆನ್ನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಪ್ರದೇಶ ಕುರುಬ ಸಮುದಾಯ ಆಯೋಜಿಸಿದ್ದ ಕನಕ ಭವನ ಉದ್ಗಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ರಮೇಶ್‍ಕುಮಾರ್, ಮಾಜಿ ಸಚಿವ ಎಚ್​.ಎಂ.ರೇವಣ್ಣ ಸೇರಿ ಹಲವು ಗಣ್ಯರು ಅತಿಥಿಗಳಾಗಿದ್ದರು. ಈ ವೇಳೆ ಮಾತನಾಡಿದ ರಮೇಶ್​ಕುಮಾರ್​ ಅವರು, ನಾನು ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎನ್ನಲಾರೆ. ಅವರನ್ನು ನಾನು ಮಾನ್ಯ ಮುಖ್ಯಮಂತ್ರಿಗಳು ಎಂದೇ ಕರೆಯುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಸಿದ್ದರಾಮಯ್ಯ ಅವರು ರಮೇಶ್‍ ಕುಮಾರ್​ ಅವರನ್ನು ಹಾಡಿ ಹೊಗಳಿದರು. ನಂತರ ಕೊನೆಯದಾಗಿ ಭಾಷಣ ಮಾಡಿದ ಸ್ಪೀಕರ್ ರಮೇಶ್‍ಕುಮಾರ್ ಅವರು, ನಾನು ರಾಜಕೀಯ ಮಾತನಾಡಲು ಆಗಲ್ಲ ಎಂದು ಹೇಳುತ್ತಲೇ, ತಮ್ಮ ಭಾಷಣದ ಆರಂಭದಿಂದ ಕೊನೆಯವರೆಗೆ ಸಿದ್ದರಾಮಯ್ಯ ಅವರನ್ನು ಹೊಗಳಿದರು.

ನಾನು ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎನ್ನಲಾರೆ. ಅವರು ನಮ್ಮ ನಾಯಕರು. ಕೊನೆವರೆಗೂ ಅವರೆ ನಮ್ಮ ನಾಯಕರು. ಈ ಹಿಂದೆ ನಾವು ಸಚಿವರಾಗಿದ್ದಾಗ ಸಿದ್ದರಾಮಯ್ಯ ಯಾವ ಯೋಜನೆಗೂ ಅಡ್ಡಿ ಪಡಿಸದೇ ಹಣ ಸಹಾಯ ಮಾಡಿ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ಕೊಟ್ಟಿದ್ದರು ಎಂದು ಹೇಳಿ ಸಿದ್ದರಾಮಯ್ಯರನ್ನು ಮಾನ್ಯ ಮುಖ್ಯಮಂತ್ರಿಗಳು ಎಂದು ಕರೆದರು. ಕಾರ್ಯಕ್ರಮದ ಕೊನೆಯಲ್ಲಿ, ನನ್ನನ್ನು ಎಲ್ಲರು ಹುಲಿ ಹುಲಿ ಅಂತ ಕರೆಯುತ್ತಾರೆ. ಆದರೆ, ಸಿದ್ದರಾಮಯ್ಯ ನಡೆದಾಡುವ ರೀತಿ ನೋಡಿದರೆ ಅವರೆ ಹುಲಿಯಾಗಿ ಕಾಣ್ತಾರೆ. ಅವರು ಕರ್ನಾಟಕದ ಹುಲಿ ಎಂದು ಸ್ವಯಂ ಬಿರುದು ನೀಡಿದರು.

ಕಳೆದ 20 ದಿನಗಳ ಹಿಂದೆ ಕಾಂಗ್ರೆಸ್​ ಜನಪ್ರತಿನಿಧಿಗಳು ನೀಡಿದ್ದ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ‘ನಮ್ಮ ಸಿಎಂ ಸಿದ್ದರಾಮಯ್ಯ’ ಎಂಬ ಅಭಿಯಾನವನ್ನೇ ಆರಂಭಿಸಿದ್ದರು.

Comments are closed.