ಕರ್ನಾಟಕ

ಬೆಂಗಳೂರಿನಲ್ಲಿ ಫೇಸ್​ಬುಕ್​ ಗೆಳೆಯನಿಂದ ಅತ್ಯಾಚಾರ!

Pinterest LinkedIn Tumblr


ಬೆಂಗಳೂರು: ಇತ್ತೀಚೆಗೆ ಫೇಸ್​ಬುಕ್​ ಬಳಕೆ ಹೆಚ್ಚಿದೆ. ಅಲ್ಲಿ, ಅನೇಕರು ಪರಿಚಯವಾಗುತ್ತಾರೆ. ಪರಿಚಯ ಗೆಳೆತನಕ್ಕೆ ತಿರುಗಿ, ಅದು ಪ್ರೀತಿಯಾಗಿ ಬದಲಾಗಿ, ಮದುವೆಯಾದ ಉದಾಹರಣೆಗಳೂ ಸಾಕಷ್ಟಿವೆ. ಇದರ ಜೊತೆಗೆ ಫೇಕ್​ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡುವವರ ಸಂಖ್ಯೆಯೂ ಫೇಸ್​ಬುಕ್​ನಲ್ಲಿ ಹೆಚ್ಚಿದೆ. ಅಷ್ಟಕ್ಕೂ ಈ ಸಾಮಾಜಿಕ ಜಾಲತಾಣವನ್ನು ಎಷ್ಟರ ಮಟ್ಟಿಗೆ ನಂಬಬಹುದು ಎಂಬುದು ಸದ್ಯದ ಪ್ರಶ್ನೆ. ಈ ಫೇಸ್​ಬುಕ್​ ಪರಿಚಯ ಎಷ್ಟು ಅಪಾಯ ಎಂಬುದನ್ನು ತಿಳಿಸಲು ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣವೇ ಸಾಕ್ಷಿ.

ನಗರದಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ ಯುವತಿಯೋರ್ವಳಿಗೆ ಫೇಸ್​ಬುಕ್​ನಲ್ಲಿ ಆರೀಫ್​ ಎಂಬಾತನ ಪರಿಚಯವಾಗಿತ್ತು. ಪರಿಚಯ ಗೆಳೆತನಕ್ಕೆ ತಿರುಗಿತ್ತು. ನಗರದ ದೊಡ್ಡನೆಕ್ಕುಂದಿಯ ಅಪಾರ್ಟ್​​ಮೆಂಟ್​ನಲ್ಲಿ ಆಚರಿಸಿಕೊಂಡ ಹುಟ್ಟುಹಬ್ಬಕ್ಕೆ ಆ ಯುವತಿಯನ್ನು ಆರೀಫ್ ಕರೆದಿದ್ದ. ಆಕೆ ಕೂಡ ಇವರನ್ನು ನಂಬಿ ಬಂದಿದ್ದಳು.

ಆರೀಫ್​ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಯುವತಿ ಜೊತೆಗೆ ತನ್ನ ಸ್ನೇಹಿತ ಆದಿತ್ಯ ಎಂಬುವನನ್ನೂ ಪಾರ್ಟಿಗೆ ಕರೆದಿದ್ದ. ಆರಂಭದಲ್ಲಿ ಕೇಕ್​ ಕತ್ತರಿಸಿ ಕುಣಿದು ಕುಪ್ಪಳಿಸಿದ್ದರು. ಬರ್ತ್​ಡೇ ಖುಷಿಯಲ್ಲಿ ಮೂವರು ಮದ್ಯಪಾನ ಕೂಡ ಮಾಡಿದ್ದರು. ಮಧ್ಯರಾತ್ರಿ ಊಟ ತರಲೆಂದು ಆರೀಫ್ ಹೊರಗೆ ಹೋಗಿದ್ದ. ಇದೇ ವೇಳೆ ಆತನ ಸ್ನೇಹಿತ ಆದಿತ್ಯನಿಂದ ಯುವತಿ ಮೇಲೆ ಅತ್ಯಾಚಾರ ನಡೆದಿದೆ.

ಆಕೆ ಕುಡಿದ ಮತ್ತಿನಲ್ಲಿದ್ದರಿಂದ ಅರೆಪ್ರಜ್ಞಾವಸ್ಥೆ ತಲುಪಿದ್ದಳು. ಇದರ ಲಾಭ ಪಡೆಯಲು ಮುಂದಾದ ಆದಿತ್ಯ ಅತ್ಯಾಚಾರವೆಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಎ.ಎಲ್. ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ‌ ಆದಿತ್ಯನನ್ನು ಬಂಧಿಸಿದ್ದಾರೆ. ಆತ, ಪ್ರತಿಷ್ಠಿತ ಮಾಲ್​ ಒಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Comments are closed.