ಕರ್ನಾಟಕ

ಬಡವರ ಆರೋಗ್ಯ ಸುಧಾರಣೆಗೆ ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’

Pinterest LinkedIn Tumblr


ಬೆಂಗಳೂರು: ರಾಜ್ಯದ ಜನರ ಆರೋಗ್ಯ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಎಂಬ ಕೋ ಬ್ರಾಂಡ್ ಹೆಸರಿನ ಅಡಿಯಲ್ಲಿ ಆರೋಗ್ಯ ಯೋಜನೆ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ.
ರಾಜ್ಯಪಾಲ ವಜುಭಾಯಿವಾಲ ಅವರು ವಿಧಾನಮಂಡಲದ ಜಂಟಿ ಭಾಷಣದಲ್ಲಿ ಈ ವಿಷಯ ತಿಳಿಸಿದ್ದು, ಪ್ರತಿ ವರ್ಷ ಬಡತನ ರೇಖೆ ಕೆಳಗಿನ ಕುಟುಂಬಗಳು ಒಟ್ಟಾರೆ 5 ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳುವ ಯೋಜನೆ ಇದಾಗಿದೆ. ಬಡತನ ರೇಖೆ ಮೇಲಿನ ಕುಟುಂಬಗಳು ಪ್ರತಿ ವರ್ಷ 1.5 ಲಕ್ಷ ರೂ ಮಿತಿಗೆ ಒಳಪಟ್ಟು ಸಹ ಸಂದಾಯ ಆಧಾರದ ಮೇಲೆ ಅನುಮೋದಿತ ಸರ್ಕಾರಿ ಪ್ಯಾಕೇಜ್ ದರಗಳ ಶೇಕಡ 30 ರಷ್ಟು ನಗದು ರಹಿತ ಸೇವೆ ಪಡೆಯಬಹುದಾಗಿದೆ. ಈ ವರ್ಷದ ಜನವರಿವರಗೆ ರಾಜ್ಯದಲ್ಲಿ 1,22,822 ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ಗದಗ, ಕೊಪ್ಪಳ ಚಾಮರಾಜನಗರ, ಹಾಸನದಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು, ಹುಬ್ಬಳ್ಳಿಯ ಕಿಮ್ಸ್, ಬಳ್ಳಾರಿ ವಿಮ್ಸ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಮೈಸೂರು ಕಲಬುರಗಿಯಲ್ಲಿ ಟ್ರಾಮ ಸೆಂಟರ್ ನಿರ್ಮಾಣ ಕಾರ್ಯ ಮುಗಿಯುತ್ತಿದ್ದು, ಈ ಸೌಲಭ್ಯವನ್ನು ಆದಷ್ಟು ಬೇಗ ಜನರ ಸೇವೆಗೆ ಅರ್ಪಣೆ ಮಾಡುವುದಾಗಿ ಅವರು ಹೇಳಿದ್ದಾರೆ.
ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸರ್ಕಾರ ಬದ್ಧವಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಪ್ರತಿನಿತ್ಯ 85 ಲೀಟರ್ ಕುಡಿಯುವ ನೀರು ಪೂರೈಸುವ ಜಲಧಾರೆ ಯೋಜನೆಯನ್ನು 53 ಸಾವಿರ ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಳಿಸುವುದಾಗಿ ಹೇಳಿದ್ದಾರೆ.
1.80 ಕೋಟಿ ಜನಸಂಖ್ಯೆಗೆ ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ಸುಮರು 16,000 ಶುದ್ಧ ಕುಡಿಯುವ ನೀರು ಸರಬರಾಜು ಘಟಕ ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು, ನಿಗದಿತ ಅವಧಿಗೆ ಮೊದಲೇ ಗ್ರಾಮೀಣ ಪ್ರದೇಶವನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಿದೆ. ರಾಜ್ಯದಲ್ಲಿ ಘನ, ದ್ರವ ತಾಜ್ಯ ನಿರ್ವಹಣೆ ಉತ್ತಮಗೊಳಿಸಲು ರಾಜ್ಯ ನಿರ್ಮಲೀಕರಣ ನೀತಿಯನ್ನು ಶೀಘ್ರದಲ್ಲಿ ರೂಪಿಸುವುದಾಗಿ ಸರ್ಕಾರ ಪ್ರಕಟಿಸಿದೆ.

Comments are closed.