ಕರ್ನಾಟಕ

ಬಿಜೆಪಿ ಶಾಸಕರ ಗಲಾಟೆ, ಐದೇ ನಿಮಿಷದಲ್ಲಿ ಜಂಟಿ ಅಧಿವೇಶನದ ಭಾಷಣ ಮುಗಿಸಿದ ರಾಜ್ಯಪಾಲ

Pinterest LinkedIn Tumblr


ಬೆಂಗಳೂರು: ನಾವು ಯಾವುದೇ ಆಪರೇಷನ್​ ಕಮಲಕ್ಕೆ ಕೈ ಹಾಕಿಲ್ಲ. ಅಧಿವೇಶನಕ್ಕೂ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಿಗೆ ತಪ್ಪಿದ್ದಾರೆ. ಇಂದು ಆರಂಭವಾದ ಅಧಿವೇಶನದಲ್ಲಿ ಗದ್ದಲ ಮಾಡುವ ಮೂಲಕ ವಚನ ಭ್ರಷ್ಟರಾಗಿದ್ದಾರೆ.

ವರ್ಷದ ಮೊದಲ ಅಧಿವೇಶನದಲ್ಲಿ ಮೊದಲ ದಿನ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲ ವಾಜುಬಾಯಿ ವಾಲ ಭಾಷಣ ಆರಂಭಿಸಿದರು. ರಾಜ್ಯಪಾಲರ ಭಾಷಣ ಶುರುವಾಗುತ್ತಿದ್ದಂತೆ ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಧರಣಿ ನಡೆಸುವ ಮೂಲಕ ಭಾಷಣಕ್ಕೆ ಅಡ್ಡಿಪಡಿಸಿದರು. ಕೋಲಾಹಲದ ನಡುವೆಯೇ ರಾಜ್ಯಪಾಲರು ಭಾಷಣ ಮುಂದುವರೆಸಿದರು. ಆದರೆ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರ ಗಲಾಟೆ ಹೆಚ್ಚಾದ ಹಿನ್ನಲೆ ಗೊಂದಲಕ್ಕೆ ಒಳಗಾದ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ಸದನದಿಂದ ಹೊರನಡೆದರು .

ಸದನದ ಬಾವಿಗಿಳಿದ ಬಿಜೆಪಿ ಶಾಸಕರು “ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ” ಕೂಗಿದರು. ಇದರಿಂದಾಗಿ ಸರ್ಕಾರದ ಸಾಧನೆ ಕುರಿತು 22 ಪುಟಗಳ ಭಾಷಣ ಓದಲು ಸಜ್ಜಾಗಿದ್ದ ರಾಜ್ಯಪಾಲರು ಬಿಜೆಪಿ ಶಾಸಕರ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ಪುಟಕ್ಕೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಬಜೆಟ್​ ಅಧಿವೇಶನಕ್ಕೆ ಬಿಜೆಪಿ ಅಡ್ಡಿ ಮಾಡಲಿದೆ ಎಂಬ ಆಂತಕ ಮೈತ್ರಿ ನಾಯಕರಲ್ಲಿ ಇತ್ತು. ಆದರೆ, ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಈ ರೀತಿ ಕ್ರಮಕ್ಕೆ ಬಿಜೆಪಿ ಮುಂದಾಗುವ ಮೂಲಕ ಮೈತ್ರಿ ಶಾಸಕರಲ್ಲಿ ಗೊಂದಲ ಉಂಟು ಮಾಡಿದರು.

ಆಪರೇಷನ್​ ಕಮಲದ ಆತಂಕದ ನಡುವೆಯೇ ತಮ್ಮ ಶಾಸಕರಿಗೆ ವಿಪ್​ ಜಾರಿ ಮಾಡಿತ್ತು. ಕಳೆದೆರಡು ದಿನಗಳ ಹಿಂದೆ ಮಾತನಾಡಿದ ಕೋಟಾ ಶ್ರೀನಿವಾಸ್​ ಪೂಜಾರಿ ನಾವು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಅಡ್ಡಿಮಾಡುವುದಿಲ್ಲ ಎಂದಿದ್ದರು.

ರಾಜ್ಯಪಾಲರ ಬೇಸರ:
ಸದನದಲ್ಲಿ ಏಕಾಏಕಿ ಜಂಟಿ ಅಧಿವೇಶನದ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ನಾಯಕರ ನಡೆಗೆ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ಗದ್ದಲದಿಂದ ಭಾಷಣ ಮೊಟುಕುಗೊಳಿಸಿದ ಅವರನ್ನು ಸ್ಪೀಕರ್​, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಬಿಳ್ಕೋಡಲು ಬಂದರು ಈ ವೇಳೆ ಅವರ ಮುಂದೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಕಪ್ಪು ಚುಕ್ಕೆ:
ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದ ಬಿಜೆಪಿ ನಾಯಕರ ನಡೆ ರಾಜ್ಯದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ. ಇದು ನಿಜಕ್ಕೂ ದುರ್ದೈವದ ಸಂಗತಿ ಎಂದು ಜೆಡಿಎಸ್​ ನಾಯಕ ಬಸವರಾಜ್​ ಹೊರಟ್ಟಿ ಬಿಜೆಪಿ ನಾಯಕರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.

Comments are closed.