ಕರ್ನಾಟಕ

ಹಾಸನದಲ್ಲಿ ಮತ್ತೊಂದು ಜೀತಪದ್ಧತಿ ಪ್ರಕರಣ ಪತ್ತೆ; 12 ಗಂಟೆ ದುಡಿಸಿಕೊಳ್ಳುತ್ತಿದ್ದ ಇಟ್ಟಿಗೆ ಕಾರ್ಖಾನೆ ಮಾಲೀಕ

Pinterest LinkedIn Tumblr


ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರದ ಇಟ್ಟಿಗೆ ಭಟ್ಟಿ ಕಾರ್ಖಾನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ತಮಿಳುನಾಡಿನ 24 ಮಂದಿ ಕಾರ್ಮಿಕರು ರಕ್ಷಣೆ ಕೋರಿ ಇಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಸದ್ಯ ಕಾರ್ಖಾನೆ ಮಾಲೀಕ ತಲೆಮರೆಸಿಕೊಂಡಿದ್ದಾನೆ.

ತಮಿಳುನಾಡಿನ ಕೃಷ್ಣಗಿರಿಯವರಾದ ಇವರಿಗೆ ಸಕಲೇಶಪುರ ಇಟ್ಟಿಗೆ ಕಾರ್ಖಾನೆ ಮಾಲೀಕ ಪ್ರತಿದಿನ ಗಂಡಾಳಿಗೆ 500 ರೂ., ಹೆಣ್ಣಾಳಿಗೆ 400 ರೂ. ನೀಡುವುದಾಗಿ ಭರವಸೆ ನೀಡಿ, ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಕರೆತಂದಿದ್ದ. ಅಲ್ಲದೆ ಮಾಲೀಕ ಪ್ರತಿ ಕುಟುಂಬಕ್ಕೂ 10 ಸಾವಿರದಿಂದ 40 ಮುಂಗಡ ಹಣ ನೀಡಿದ್ದ. ಆದರೆ, ಹೇಳಿದ ಮಾತಿನಂತೆ ಹಣ ನೀಡದೆ ಪ್ರತಿದಿನ ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ದುಡಿಸುತ್ತಿದ್ದ. ಇಷ್ಟಾಗಿಯೂ ಇವರಿಗೆ ಕೊಡುತ್ತಿದ್ದ ಕೂಲಿ ತಲಾ 75 ರೂ. ಮಾತ್ರ. ರಾಜ್ಯದಲ್ಲಿ ಇಟ್ಟಿಗೆ ಕಾರ್ಖಾನೆ ಕಾರ್ಮಿಕರಿಗೆ ಪ್ರತಿ ದಿನದ ಕನಿಷ್ಠ ಕೂಲಿ 460.76 ರೂ. ಇದೆ. ಕಾರ್ಮಿಕರಿಗೆ ಕನಿಷ್ಠ ಮೂಲ ಸೌಕರ್ಯವನ್ನು ಒದಗಿಸಿರಲಿಲ್ಲ. 4 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳನ್ನು ಈ ಕಾರ್ಖಾನೆ ಮಾಲೀಕ ದುಡಿಮೆಗೆ ಬಳಸಿಕೊಂಡಿದ್ದಾನೆ. ಒಟ್ಟು 5 ಕುಟುಂಬಗಳಲ್ಲಿ 10 ಸಣ್ಣ ಮಕ್ಕಳು, ನಾಲ್ವರು ಅಪ್ರಾಪ್ತರು ಯುವಕರು, 10 ಪ್ರಾಪ್ತ ವಯಸ್ಸಿನ ಕಾರ್ಮಿಕರು ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು.

ಇಟ್ಟಿಗೆ ಕಾರ್ಖಾನೆಯಲ್ಲಿ ಕಾರ್ಮಿಕರು ಇದ್ದ ಸ್ಥಳ

ಫೆ.4 ರಂದು 24 ಜೀತ ಕಾರ್ಮಿಕರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಭಟ್ಟಿ ಕಾರ್ಖಾನೆಗೆ ಭೇಟಿ ನೀಡಿದ ತಹಸೀಲ್ದಾರ್, ವಿಚಾರಣೆ ನಡೆಸಿದರೂ ಜೀತಪದ್ಧತಿಗೆ ಕಾರಣರಾದ ಇಟ್ಟಿಗೆ ಬಟ್ಟಿ ಕಾರ್ಖಾನೆ ಮಾಲೀಕನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಸನ ಜಿಲ್ಲಾಡಳಿತ ತಮಗೆ ಜೀತಪದ್ಧತಿಯಿಂದ ವಿಮುಕ್ತಿ ಹೊಂದಿದ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಅಲ್ಲದೆ ಅವರೆಲ್ಲರೂ ಜೀತಪದ್ಧತಿಯಲ್ಲಿದ್ದ ಕಾರ್ಮಿಕರೆಂದು ಘೋಷಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಆ ಕಾರ್ಮಿಕರೆಲ್ಲಾ ಇಂದು ಬೆಂಗಳೂರಿನ ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

Comments are closed.