ಕರ್ನಾಟಕ

ತನಗೆ ನೆಲೆಯೇ ಇಲ್ಲದ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು?

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಹಗ್ಗ ಜಗ್ಗಾಟ ನಡೆಯುತ್ತಿರುವಂತೆಯೇ ಲೋಕಸಭೆ ಚುನಾವಣೆಗೆ ಕ್ಷೇತ್ರಗಳ ಲೆಕ್ಕಾಚಾರ ಗಹನವಾಗಿ ಮುಂದುವರಿದಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ 12 ಸ್ಥಾನಗಳಿಗೆ ಬಾರ್ಗೈನ್ ಮಾಡಬೇಕೆಂದು ನಿರ್ಧರಿಸಿದ್ದ ಜಾತ್ಯತೀತ ಜನತಾ ದಳವು ಈಗ 10 ಕ್ಷೇತ್ರಕ್ಕೆ ತನ್ನ ಬೇಡಿಕೆಯನ್ನು ತಗ್ಗಿಸಿದೆ. ಆದರೆ, ಈ 10 ಕ್ಷೇತ್ರಗಳಲ್ಲಿ ಉಡುಪಿ-ಚಿಕ್ಕಮಗಳೂರು ಕೂಡ ಒಳಗೊಂಡಿರುವುದು ಗಮನಾರ್ಹ. ಈ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ನೆಲೆಯೇ ಇಲ್ಲ. 1996ರಲ್ಲಿ ಹಿಂದಿನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿ.ಎಲ್. ಶಂಕರ್ ಗೆದ್ದಿದ್ದು ಬಿಟ್ಟರೆ ಈ ಕ್ಷೇತ್ರವು ಬಿಜೆಪಿ ಮತ್ತು ಕಾಂಗ್ರೆಸ್​ನ ಭದ್ರಕೋಟೆಯಾಗಿಯೇ ಉಳಿದಿದೆ. 2014ರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ ವೋಟು ಶೇ. 2ರ ಗಡಿ ಕೂಡ ಮುಟ್ಟಲಿಲ್ಲ. ಹೀಗಿದ್ದರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೇಲೆ ದೇವೇಗೌಡರ ಕಣ್ಣು ಬಿದ್ದಿರುವುದ್ಯಾಕೆ?

ಕೇಂದ್ರದಲ್ಲಿ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಸಾಧ್ಯವಾದಷ್ಟು ಹೆಚ್ಚು ಸಂಸದರನ್ನು ಹೊಂದಬೇಕು ಎಂಬುದು ದೇವೇಗೌಡರ ಗುರಿ. ಹೀಗಾಗಿ, ಬಾಹ್ಯ ಪ್ರಭಾವದಿಂದಲಾದರೂ ಗೆಲ್ಲಬಲ್ಲಂತಹ ಕ್ಷೇತ್ರಗಳ ಮೇಲೆ ಗೌಡರು ಗಮನ ಹರಿಸಿದ್ದಾರೆ. ಅಂತಹ ಕ್ಷೇತ್ರಗಳಲ್ಲಿ ಉಡುಪಿ-ಚಿಕ್ಕಮಗಳೂರು ಕೂಡ ಒಂದು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್​ಗಿಂತ ಬಿಜೆಪಿ ಹೆಚ್ಚು ಸುಭದ್ರವಾಗಿದೆ. ಹೀಗಾಗಿ, ಈ ಕ್ಷೇತ್ರವನ್ನು ಕಾಂಗ್ರೆಸ್ ಕೈಯಿಂದ ಪಡೆಯುವುದು ಸುಲಭ ಎನ್ನುವ ಎಣಿಕೆ ಜೆಡಿಎಸ್​ದ್ದಾಗಿರಬಹುದು. ಅದಕ್ಕಿಂತ ಹೆಚ್ಚಾಗಿ, ಜೆಡಿಎಸ್ ಇಲ್ಲಿ ಆಪರೇಷನ್ ತೆನೆ ಮಾಡುವ ಸಿದ್ಧತೆಯಲ್ಲಿದೆ.

ಉಡುಪಿ-ಚಿಕ್ಕಮಗಳೂರಿನ ಹಾಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಮೇಲೆ ಇಲ್ಲಿಯ ಬಿಜೆಪಿ ಶಾಸಕರುಗಳು ಮುನಿಸಿಕೊಂಡಿದ್ದಾರೆ. ಹೀಗಾಗಿ, ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರದ ಸಹವಾಸವೇ ಬೇಡ ಎಂದು ದೂರು ಉಳಿಯುವ ಸಂಭವ ಇದೆ. ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಮತ್ತು ಮಾಜಿ ಶಾಸಕ ಜೀವರಾಜ್ ಅವರು ಪೈಪೋಟಿ ನಡೆಸುತ್ತಿದ್ದಾರೆ.

ಈ ಮೂವರಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೆಳೆದುಕೊಳ್ಳಲು ದೇವೇಗೌಡರು ಸ್ಕೆಚ್ ಹಾಕಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಹೆಗ್ಡೆ ಅವರು ಜೆಡಿಎಸ್​ನತ್ತ ವಾಲಲಿದ್ದಾರೆಂಬ ಮಾಹಿತಿಯನ್ನು ಮೂಲಗಳು ನೀಡುತ್ತಿವೆ.

ಅತ್ತ, ಕಾಂಗ್ರೆಸ್ ಪಕ್ಷ ಈಗಾಗಲೇ ಬೇಗಾನೆ ರಾಮಯ್ಯ ಅವರ ಪುತ್ರಿ ಆರತಿ ಕೃಷ್ಣ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಆದರೆ, ಆರತಿ ಕೃಷ್ಣ ಅವರು ಗೆಲ್ಲಬಲ್ಲ ಅಭ್ಯರ್ಥಿ ಎಂದು ವಿಶ್ವಾಸದಿಂದ ಹೇಳಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಈ ಪರಿಸ್ಥಿತಿಯ ಲಾಭ ಪಡೆದು ಕ್ಷೇತ್ರವನ್ನು ಪಡೆಯುವುದು ಜೆಡಿಎಸ್ ಲೆಕ್ಕಾಚಾರ. ಹಾಗೆಯೇ, ಜಯಪ್ರಕಾಶ್ ಹೆಗ್ಡೆ ಅವರಿಗಿರುವ ವೈಯಕ್ತಿಕ ವರ್ಚಸ್ಸು ಹಾಗೂ ಕಾಂಗ್ರೆಸ್​ನ ಪೂರ್ಣ ಬೆಂಬಲದೊಂದಿಗೆ ಉಡುಪಿ-ಚಿಕ್ಕಮಗಳೂರನ್ನು ಗೆಲ್ಲಬಹುದು ಎಂಬುದು ದೇವೇಗೌಡರ ಎಣಿಕೆ.

Comments are closed.