ಕರ್ನಾಟಕ

ಶಾಸಕ ಆನಂದ್‌ ಸಿಂಗ್ ಮೇಲೆ ಹಲ್ಲೆ ಮಾಡಿದ ಶಾಸಕ ಗಣೇಶ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು

Pinterest LinkedIn Tumblr

ಬೆಂಗಳೂರು: ಈಗಲ್ಟನ್ ರೆಸಾರ್ಟ್​ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.

ಆನಂದ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಕಂಪ್ಲಿ ಶಾಸಕ ಗಣೇಶ್ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.

ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ಸೂಚನೆಯಂತೆ ಲೋಕಸಭೆ ಚುನಾವಣೆ ಹಾಗೂ ಬರ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲು ಸಭೆ ಕೆರೆಯಲಾಗಿತ್ತು. ಈ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ಶನಿವಾರದಂದು ಸಭೆಯ ಬಳಿಕ ಇತರೇ ಶಾಸಕರೊಂದಿಗೆ ಊಟ ಮುಗಿಸಿಕೊಂಡು ಕಂಪ್ಲಿ ಶಾಸಕರಾದ ಗಣೇಶ್ ಅವರೊಂದಿಗೆ ರೂಂ ಕಡೆ ಹೋಗುತ್ತಿದ್ದೇವು. ಈ ವೇಳೆ ಗಣೇಶ್ ಮಾತನಾಡುತ್ತಾ, ‘ಈ ಬಾರಿ ಚುನಾವಣೆಗೆ ನೀನು ನನಗೆ ಹಣ ಸಹಾಯ ಸರಿಯಾಗಿ ಮಾಡಲಿಲ್ಲ. ನಿನ್ನ ತಂಗಿ ಮಗ ಸಂದೀಪ್‍ನನ್ನು ಮುಗಿಸುತ್ತೇನೆ’ ಅಂದರು. ಅದಕ್ಕೆ ನಾನು, ‘ಯಾಕಪ್ಪ ನನ್ನ ಕುಟುಂಬದವರ ವಿಷಯಕ್ಕೆ ಬರುತ್ತೀಯಾ’ ಎಂದು ಪ್ರಶ್ನಿಸಿದೆ. ಅದಕ್ಕೆ ಕೋಪಗೊಂಡ ಗಣೇಶ್, ‘ಮೊದಲು ನಿನ್ನನ್ನು ಸಾಯಿಸುತ್ತೇನೆ. ಆಗ ಎಲ್ಲವು ಸರಿಯಾಗುತ್ತೆ’ ಅಂತ ಜೋರು ಜೋರಾಗಿ ಅವಾಚ್ಯ ಪದಗಳನ್ನು ಬಳಸಿ ನನ್ನನ್ನು ನಿಂದಿಸಿದರು.

ಬಳಿಕ ಪಕ್ಷದ ಮುಖಂಡರನ್ನು ಎತ್ತಿ ಕಟ್ಟಿಕೊಂಡು ಅವರ ಕೈಗೆ ಸಿಕ್ಕ ಪಾಟ್ ಹಾಗೂ ದೊಣ್ಣೆಯಿಂದ ನನಗೆ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಅಲ್ಲದೇ ನನ್ನ ತಲೆಯನ್ನು ಗೋಡೆಗೆ ಗುದ್ದಿ, ಪಿಸ್ತೂಲ್ ಕೊಡಿ. ಇವನನ್ನು ಇಲ್ಲೇ ಮುಗಿಸುತ್ತೇನೆ. ಇವನು ರಾಜಕೀಯವಾಗಿ ನನ್ನನ್ನು ಮುಗಿಸಲು ಹೊರಟಿದ್ದಾನೆ. ಇವನ ಪ್ರಾಣ ತೆಗೆದು ಇಲ್ಲೇ ಮುಗಿಸಿಬಿಡುತ್ತೇನೆ ಎಂದು ಗದರಿದ್ದಾರೆ. ಬಳಿಕ ನಾನು ಕೆಳಗೆ ಬಿದ್ದಾಗ ನನ್ನನ್ನು, ‘ಸಾಯಿ ಸಾಯಿ’ ಎಂದು ಹೇಳಿ ತುಳಿದು, ಕೈ ಮುಷ್ಠಿಕಟ್ಟಿ ಎದೆಗೆ ಹೊಡೆದಿದ್ದಾರೆ. ಇದರಿಂದ ಕಣ್ಣುಗಳು, ಮುಖ ಹಾಗೂ ದೇಹದ ಇತರೇ ಭಾಗಗಳಿಗೆ ಪೆಟ್ಟಾಗಿದೆ ಎಂದು ಆನಂದ್ ಸಿಂಗ್ ದೂರಿನಲ್ಲಿ ವಿವರಿಸಿದ್ದಾರೆ.

Comments are closed.