ಕರ್ನಾಟಕ

ಬಸವಣ್ಣನ ಚಿಂತನೆಗೆ ಬದ್ಧರಾಗಿ ಬದುಕಿದ ಸಿದ್ದಗಂಗಾ ಸ್ವಾಮೀಜಿಗಳು ನನ್ನ ಆದರ್ಶ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಬಸವಣ್ಣ ನನ್ನ ನಾಯಕ. ಇದಕ್ಕಾಗಿಯೇ ಬಸವಜಯಂತಿಯಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವನು. ಬಸವಣ್ಣನ ಚಿಂತನೆಗೆ ಬದ್ಧರಾಗಿ ಬದುಕಿದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ನನ್ನ ಆದರ್ಶ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನ್ನದಾಸೋಹ, ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಕಲ್ಪಿಸುವ ಜ್ಞಾನದಾಸೋಹದ ಸ್ವಾಮೀಜಿಯವರ ಬದುಕು ನಮಗೆಲ್ಲ ಮಾದರಿ. ಮುಖ್ಯಮಂತ್ರಿಯಾಗಿದ್ದಾಗ ನಾನು ಅನುಷ್ಠಾನಗೊಳಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಅನೇಕ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರ ಸೇವೆ ಕೂಡಾ ಸ್ವೂರ್ತಿ ಎಂದು ತಿಳಿಸಿದ್ದಾರೆ.

ಲಿಂಗೈಕ್ಯರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
1. ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಲಿಂಗೈಕ್ಯದಿಂದ ನಾನು ಆಘಾತಕ್ಕೀಡಾಗಿದ್ದೇನೆ. ಇತ್ತೀಚಿನ ಕೆಲವು ದಿನಗಳಲ್ಲಿ ಅವರ ಆರೋಗ್ಯದಲ್ಲಿ ನಡೆಯುತ್ತಿದ್ದ ಏರುಪೇರು ನಮ್ಮೆಲ್ಲರನ್ನೂ ಆತಂಕಕ್ಕೀಡುಮಾಡಿತ್ತು. ಇಂತಹದ್ದೊಂದು ದಿನ ಎದುರಾಗಬಹುದೆಂಬ ನಮ್ಮ ಭಯ ನಿಜವಾಗಿದೆ. ಸಾಧನೆಯ ಮೂಲಕ ಲೋಕವನ್ನೇ ಗೆದ್ದಿರುವ ಸ್ವಾಮಿಗಳು ಕೊನೆಗೂ ಸಾವನ್ನು ಗೆಲ್ಲಲಾಗದೆ ಶರಣಾಗಿ ನಮ್ಮನ್ನು ಅನಾಥರಾಗಿಸಿದ್ದಾರೆ.

2. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತುಂಬಿದ ಹೃದಯದಿಂದ ಹಾರೈಸುತ್ತೇನೆ. ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.

3. ನಾವು ಬಸವಣ್ಣನವರನ್ನು ಕಣ್ಣಾರೆ ನೋಡಿಲ್ಲ, ನಾನು ಡಾ.ಶಿವಕುಮಾರ ಸ್ವಾಮೀಜಿಗಳಲ್ಲಿ ಬಸವಣ್ಣನನ್ನು ಕಾಣುತ್ತಿದ್ದೆ. ಅವರನ್ನು ‘’ನಡೆದಾಡುವ ದೇವರು’’ ಎನ್ನುತ್ತಾರೆ. ನನ್ನ ಪಾಲಿಗೆ ಅವರು ‘’ನಡೆದಾಡುತ್ತಿದ್ದ ಬಸವಣ್ಣ’’ ಆಗಿದ್ದರು. ಅಂತಹದ್ದೊಂದು ಆದರ್ಶ ಬದುಕನ್ನು ಅವರು ಬದುಕಿ ತೋರಿಸಿ ನಮಗೆ ಮಾದರಿಯಾಗಿ ಬಿಟ್ಟು ಹೋಗಿದ್ದಾರೆ. ಆ ದಾರಿಯಲ್ಲಿ ನಡೆಯುವುದೇ ಸ್ವಾಮೀಜಿಗಳಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.

4. ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಬಸವಣ್ಣ ನನ್ನ ನಾಯಕ. ಇದಕ್ಕಾಗಿಯೇ ಬಸವಜಯಂತಿಯಂದೇ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವನು. ಸ್ವಾಮೀಜಿಗಳು ಬಸವಣ್ಣನವರ ತತ್ವಕ್ಕೆ ನೂರಕ್ಕೆ ನೂರರಷ್ಟು ಬದ್ಧರಾಗಿ ಬದುಕಿದವರು.

5. ಹಸಿದವರಿಗೆ ಅನ್ನ, ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ಕಲ್ಪಿಸಲು ತಮ್ಮ ಜೀವವನ್ನೇ ತೇದ ಸ್ವಾಮೀಜಿಯವರ ಬದುಕು ಮತ್ತು ಸಾಧನೆ ನಮಗೆಲ್ಲ ಮಾದರಿ. ಮುಖ್ಯಮಂತ್ರಿಯಾಗಿದ್ದಾಗ ನಾನು ಅನುಷ್ಠಾನಗೊಳಿಸಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಮೊದಲಾದ ಅನೇಕ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರ ಸೇವಾ ಕಾರ್ಯಕ್ರಮಗಳೂ ಕೂಡಾ ಸ್ವೂರ್ತಿಯಾಗಿತ್ತು.

6. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ಅನೇಕ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸಿದ್ದ ಸ್ವಾಮೀಜಿಗಳು ಕೊನೆಯ ವರೆಗೂ ಶಿಕ್ಷಣವನ್ನು ಸೇವೆಯೆಂದೇ ತಿಳಿದಿದ್ದರೆ ಹೊರತು ಅದನ್ನು ವ್ಯಾಪಾರ-ಉದ್ಯಮ ಮಾಡಲು ಹೋಗಲೇ ಇಲ್ಲ. ಶಿಕ್ಷಣ ಕ್ಷೇತ್ರವೇ ಉದ್ಯಮವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಈ ಸಂದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಮತ್ತು ಶಿಕ್ಷಣೋದ್ಯಮಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

7. ಉದ್ಧಾನ ಸ್ವಾಮೀಜಿಗಳಿಂದ ಪ್ರಾರಂಭವಾಗಿದ್ದ ಅನ್ನ-ಅರಿವುಗಳ ದಾಸೋಹವನ್ನು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಸರ್ವರನ್ನೂ ಒಳಗೊಂಡ ದಾಸೋಹವನ್ನಾಗಿ ವಿಸ್ತರಿಸಿದರು.

8. ಸ್ವಾಮೀಜಿಗಳ ತುಮಕೂರಿನ ಸಿದ್ದಗಂಗಾ ಮಠ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಒಂದು ವಿಶ‍್ವವಿದ್ಯಾಲಯವೇ ಯಾಕೆ, ಒಂದು ಸರ್ಕಾರವೇ ಮಾಡಬೇಕಾಗಿರುವ ಕೆಲಸವನ್ನು ಮಾಡುತ್ತಾ ಬಂದಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಇಂದು ವಿಶ್ವದಾದ್ಯಂತ ಇದ್ದಾರೆ.

9. ಸ್ವಾಮೀಜಿಗಳು ಎಂದೂ ಹೆಚ್ಚು ಮಾತನಾಡಿದವರಲ್ಲ, ಮಾತಿಗಿಂತ ಮೌನದಲ್ಲಿಯೇ ಸಾಧನೆ ಮಾಡಿದವರು. ಅವರು ನುಡಿದಂತೆಯೇ ನಡೆದವರು. ಕಾಯಕಪ್ರಜ್ಞೆಯನ್ನು ಬಾಳಿ ಬದುಕಿದವರು. ಕೊನೆಗೂ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಅವರೇ ಸಾಟಿ ಹೊರತು ಆ ಸ್ಥಾನದಲ್ಲಿ ಭವಿಷ್ಯದಲ್ಲಿಯೂ ಇನ್ನೊಬ್ಬರನ್ನು ಊಹಿಸುವುದು ಕಷ್ಟ.

10. ಸ್ವಾಮೀಜಿಗಳ ಲಿಂಗೈಕದಿಂದ ರಾಜ್ಯ,ದೇಶಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಆಗಿರುವ ನಷ್ಟವನ್ನು ಶಬ್ದಗಳಿಂದ ಹೇಳಿಕೊಳ್ಳಲು ಸಾಧ್ಯ ಇಲ್ಲ. ನಮ್ಮಿಂದ ಮರೆಯಾದ ಸ್ವಾಮೀಜಿಗಳು ಒಂದು ದೊಡ್ಡ ನಿರ್ವಾತವನ್ನು ಬಿಟ್ಟು ಹೋಗಿದ್ದಾರೆ, ಅದನ್ನು ತುಂಬಲು ಬಹುಶಃ ಮುಂದೆಯೂ ಯಾರಿಗೂ ಸಾಧ‍್ಯವಾಗಲಾರದು.

11. ಸ್ವಾಮೀಜಿಯವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಬೇಕೆಂದು ನಾನು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಸ್ವಾಮೀಜಿಗಳು ಇಂತಹ ಪ್ರಶಸ್ತಿ-ಪಾರಿತೋಷಕಗಳನ್ನು ಮೀರಿ ಬದುಕಿದವರು. ಆದರೆ ಆ ಗೌರವ ಸ್ವಾಮೀಜಿಯವರಿಗೆ ಸಂದಿದ್ದರೆ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Comments are closed.