ಕರ್ನಾಟಕ

ಬಿಜೆಪಿ ‘ಆಪರೇಷನ್ ಕಮಲ’;ಕಾಂಗ್ರೆಸ್ಸಿನ ಇಬ್ಬರು ಶಾಸಕರು ನಾಳೆ ರಾಜೀನಾಮೆ ! ಮೈತ್ರಿ ಸರಕಾರಕ್ಕೆ ಕಂಟಕವಾಗುವ ಸಾಧ್ಯತೆ

Pinterest LinkedIn Tumblr

ಬೆಂಗಳೂರು: ಸಂಕ್ರಾಂತಿ ವೇಳೆಗೆ ಕ್ರಾಂತಿ ನಡೆಯುತ್ತದೆ ಎಂದು ಬಿಜೆಪಿ ನಾಯಕರು ನೀಡಿದ ಹೇಳಿಕೆಗೆ ಪುಷ್ಠಿ ನೀಡುವಂತೆ ಬಂಡಾಯ ಕಾಂಗ್ರೆಸ್​ ಶಾಸಕರು ದೆಹಲಿ ಹಾಗೂ ಮುಂಬೈಗೆ ಹೋಗಿರುವುದು ಅಪರೇಷನ್​ ಕಮಲ ನಡೆಯುತ್ತಿದೆ ಎಂಬ ಮಾತುಗಳಿಗೆ ಮಹತ್ವ ನೀಡಿದೆ.

ಮೂವರು ನಾಯಕರು ಬಿಜೆಪಿ ಸಂಪರ್ಕದಲ್ಲಿರುವುದು ಕಾಂಗ್ರೆಸ್​ ನಾಯಕರ ಗಮನಕ್ಕೆ ಬಂದಿರುವುದಾಗಿ ಕೈ ಮುಖಂಡರೇ ಹೇಳಿಕೆ ನೀಡಿದ್ದಾರೆ. ಪಕ್ಷಾಂತರ ಕಾಯ್ದೆ ಜಾರಿಯಲ್ಲಿರುವುದರಿಂದ ಯಾವುದೇ, ತೊಂದರೆಯಾಗುವುದಿಲ್ಲ ಎಂದು ಕಾಂಗ್ರೆಸ್​ ನಾಯಕರು ಸಮಾಧಾನದಿಂದ ಇದ್ದಾರೆ. ಆದರೆ, ಇದನ್ನು ಮೀರಿ ಹೊಸ ದಾಳ ಪ್ರಯೋಗಿಸಲು ಕಾಂಗ್ರೆಸ್​ ಶಾಸಕರು ಮುಂದಾಗಿರುವುದು ಈಗ ಮೈತ್ರಿ ಸರ್ಕಾರದ ಪಾಲಿಗೆ ಕಂಟಕವಾಗುವ ಸಾಧ್ಯತೆ ಸೃಷ್ಟಿಸಿದೆ.

ಇಬ್ಬರು ಅತೃಪ್ತ ಕಾಂಗ್ರೆಸ್ ಶಾಸಕರು ನಾಳೆ ರಾಜ್ಯಪಾಲರನ್ನು ಭೇಟಿಯಾಗಿ ಬೆಂಬಲ‌ ಹಿಂಪಡೆಯಲು ಪತ್ರ ನೀಡಿ, ಸರ್ಕಾರ ಅಸ್ಥಿರಗೊಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮೊದಲು ಸರ್ಕಾರ ಅಸ್ಥಿರಗೊಳಿಸಿ ಬಳಿಕ ಇನ್ನಷ್ಟು ಶಾಸಕರನ್ನು ಸೆಳೆಯುವ ತಂತ್ರ ನಡೆದಿದೆ. ಮ್ಯಾಜಿಕ್ ನಂಬರ್ ಮ್ಯಾನೇಜ್ ಮಾಡಲು ಅತೃಪ್ತ ಶಾಸಕರ ಹೊಸ ತಂತ್ರ ಹೆಣೆದಿದ್ದಾರೆ. ಬಿಜೆಪಿಯ ನಾಯಕರು ಹಸಿರು ನಿಶಾನೆ ನೀಡಿದ ಬಳಿಕ‌ ಹೊಸ ದಾಳ ಉರುಳಿಸಲು ಅತೃಪ್ತ ಶಾಸಕರು ಸನ್ನದ್ಧರಾಗಿದ್ದಾರೆ ಎನ್ನಲಾಗುತ್ತಿದೆ.

ಆದರೆ ಸಾಂವಿಧಾನಿಕವಾಗಿ ಯೋಚಿಸಿದಲ್ಲಿ ಕಾಂಗ್ರೆಸ್​ನ ಕೆಲ ಶಾಸಕರು ಬೆಂಬಲ ಹಿಂಪಡೆಯಲು ಸಾಧ್ಯವಿಲ್ಲ. ಪಕ್ಷೇತರ ಅಭ್ಯರ್ಥಿಗಳಾಗಿದ್ದರೆ ಬೆಂಬಲ ಹಿಂಪಡೆಯಬಹುದಿತ್ತು. ಆದರೆ ರಾಷ್ಟ್ರೀಯ ಪಕ್ಷವಾದ್ದರಿಂದ, ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮಾತ್ರ ಬೆಂಬಲ ವಾಪಸ್​ ಪಡೆಯಬಹುದು. ಇನ್ನುಳಿದ ಶಾಸಕರು ಮೈತ್ರಿಯಿಂದ ಹೊರ ನಡೆಯಬೇಕಾದರೆ ಸ್ಪೀಕರ್​ಗೆ ರಾಜೀನಾಮೆ ನೀಡಬಹುದು, ಅದನ್ನು ಹೊರತುಪಡಿಸಿ ಇನ್ಯಾವ ಅವಕಾಶಗಳೂ ಕಾನೂನಾತ್ಮಕವಾಗಿ ಇಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಹಿರಿಯ ನಾಯಕರೊಬ್ಬರು.

ಇಬ್ಬರು ರಾಜೀನಾಮೆ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಅರಿತಿರುವ ಬಿಜೆಪಿ ಶಾಸಕರು ಇನ್ನಷ್ಟು ಶಾಸಕರನ್ನು ಸೆಳೆಯುವ ತಂತ್ರ ನಡೆಸಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆ ನೋಡಿಕೊಂಡು ಬಿಜೆಪಿ ಈ ಕಾರ್ಯತಂತ್ರಕ್ಕೆ ಹಸಿರು ನಿಶಾನೆ ತೋರಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಬಿಜೆಪಿಯ ಸಂಪರ್ಕದಲ್ಲಿರುವ ಶಾಸಕರು ಯಾರು ಎಂಬ ಬಗ್ಗೆ ಮಾಹಿತಿ ಇದ್ದರೂ ಕೂಡ ಕಾಂಗ್ರೆಸ್​ ಮೌನವಹಿಸಿದೆ. ಒಮ್ಮೆ ಹೆಸರು ಬಹಿರಂಗವಾದರೆ ನಮಗೆ ತೊಂದರೆಯಾಗಲಿದೆ ಎಂಬುದನ್ನು ಅರಿತ ಬಿಜೆಪಿ ನಾಯಕರು ಕೂಡ ಈ ಬಗ್ಗೆ ಗೌಪ್ಯತೆ ಕಾಯ್ದುಗೊಂಡಿದ್ದಾರೆ.

Comments are closed.