ಕರ್ನಾಟಕ

ಗೊಂದಲದೊಂದಿಗೆ ದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಸಭೆ ಮುಂದೂಡಿಕೆ!

Pinterest LinkedIn Tumblr


ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ನಾಯಕರ ತಾಲೀಮು ಲೋಕಸಭಾ ಚುನಾವಣೆಗೋ ಅಥವಾ ಸಂಕ್ರಾಂತಿ ಬಳಿಕ ಹೊಸ ಸರ್ಕಾರ ಮಾಡುವುದಕ್ಕೋ ಎಂಬ ಸಂಗತಿ ಖುದ್ದು ಬಿಜೆಪಿ ಶಾಸಕರು ಮತ್ತು ಸಂಸದರಿಗೂ ತಿಳಿಯದಾಗಿದೆ‌. ಇನ್ನೊಂದೆಡೆ ಕೊರೆಯುವ ಚಳಿಯಲ್ಲೂ ಇನ್ನೂ ಒಂದು ದಿನ ರಾಜ್ಯ ಶಾಸಕರು ದೆಹಲಿಯಲ್ಲೇ ಉಳಿಯಬೇಕಾಗಿದೆ. .

ಲೋಕಸಭಾ ಚುನಾವಣೆಗೆ ತಯಾರಿ ಮಾಡುವ ನೆಪದಲ್ಲಿ ರಾಜ್ಯದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ದೆಹಲಿಯಲ್ಲಿ ಸಭೆ ಕರೆಯಲಾಗಿದೆ. ರಾಷ್ಟ್ರೀಯ ಮಂಡಳಿ ಸಭೆ ಹಿನ್ನೆಲೆಯಲ್ಲಿ ಮೊನ್ನೆಯೇ ದೆಹಲಿಗೆ ಬಂದಿದ್ದ ರಾಜ್ಯದ ಸಂಸದರು ಮತ್ತೀಗ ರಾಜ್ಯ ಬಿಜೆಪಿ ನಾಯಕರ ಸಭೆಗಾಗಿ ಇನ್ನೂ‌ ಒಂದು ದಿನ ದೆಹಲಿಯಲ್ಲೇ ಉಳಿಯಬೇಕಾಗಿದೆ.

ಸಭೆ ಬರಕಾಸ್ತುಗೊಳಿಸಿದ ಯಡಿಯೂರಪ್ಪ

ಇಂದು ನಡೆದ ಬಿಜೆಪಿ ನಾಯಕರ ಸಭೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರುತ್ತಾರೆ. ಲೋಕಸಭಾ ಚುನಾವಣೆಗೆ ಟಿಪ್ಸ್ ನೀಡುತ್ತಾರೆ ಎಂಬ ಮಾಹಿತಿ ಇತ್ತು. ಇದಕ್ಕಾಗಿ ಶಾಸಕರು ಮತ್ತು ಸಂಸದರು ಕಾದು ಕಾದು ಸುಸ್ತಾದರು. ಕಡೆಗೆ ಅಮಿತ್ ಶಾ ಬರುವುದಿಲ್ಲ ಎನ್ನುವುದು ಖಾತರಿಯಾಗುತ್ತಿದ್ದಂತೆ ಯಡಿಯೂರಪ್ಪ ಸಭೆಯನ್ನು ನಾಳೆಗೆ ಮುಂದೂಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಿದ್ದೇವೆ. ಮುರುಳೀದರ್ ರಾವ್, ಅರುಣ್ ಸಿಂಗ್ ಸಂಘಟನೆ ಬಗ್ಗೆ ಬೋಧನೆ ಮಾಡಿದ್ದಾರೆ. ಇಂದು ಅಮಿತ್ ಶಾ ಸಭೆಗೆ ಆಗಮಿಸಬೇಕಿತ್ತು. ಆಗಮಿಸದ ಕಾರಣ ಸಭೆ ನಾಳೆಗೆ ಮುಂದೂಡಲಾಗಿದೆ. ಪ್ರತಿ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಭಾವುಟ ಹಾರಿಸುವ ಕಾರ್ಯಕ್ರಮವನ್ನು ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ಬಾರಿ ಗಂಭೀರವಾಗಿ ಪರಿಗಣಿಸಲು ಹೇಳಿದ್ದಾರೆ. ಈ ಬಾರಿ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲು ಕೆಲಸ ಮಾಡಬೇಕಿದೆ ಎಂದು ಅವರು, ನಾಳಿನ ಸಭೆಗೆ ಅಮಿತ್ ಶಾ ಬರ್ತಾರೆ. ನಮ್ಮ ಶಾಸಕರು ನಾಳೆ ಸಂಜೆ ರಾಜ್ಯಕ್ಕೆ ವಾಪಸ್ ತೆರಳುತ್ತಾರೆ. ಸಂಕ್ರಾಂತಿ ಹಬ್ಬವನ್ನು ಊರಿನಲ್ಲೇ ಆಚರಿಸುತ್ತಾರೆ ಎಂದರು.

ಮುಂಚೂಣಿ ನಾಯಕರಲ್ಲೇ ಗೊಂದಲ:

104 ಶಾಸಕರ ಪೈಕಿ ಬರೊಬ್ಬರಿ 100 ಶಾಸಕರು, ಅಷ್ಟೂ ಮಂದಿ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಸಭೆಯಲ್ಲಿ ಹಾಜರಾಗಿದ್ದರು. ದಿನವಿಡೀ ಚರ್ಚೆ ಮಾಡಲಾಯಿತು‌. ಆದರೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಸಭೆಯ ಉದ್ದೇಶದ ಬಗ್ಗೆ ಅನೇಕರಿಗೆ ಗೊಂದಲ ಇತ್ತು‌. ಇದು ನಿಜಕ್ಕೂ ಕೂಡ ಲೋಕಸಭಾ ಚುನಾವಣಾ ತಯಾರಿಗಾಗಿ ಮಾಡುತ್ತಿರುವ ಸಭೆಯೋ ಅಥವಾ ಶಾಸಕರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು‌ ರಾಜ್ಯದಲ್ಲಿ ಈಗಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಹೊಸ ಸರ್ಕಾರ ರಚಿಸಲು ನಡೆಸುತ್ತಿರುವ ಕಸರತ್ತೋ ಎಂಬ ಗೊಂದಲ ಇತ್ತು‌. ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವ ಕುತೂಹಲ ಹೊಂದಿದ್ದರು. ಏನೋ‌ ನಡೆಯುತ್ತಿದೆ, ಅದು ಖುಷಿಯ ವಿಷಯವೇ ಆಗಿರುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆಶ್ಚರ್ಯಕರ ವಿಷಯವೆಂದರೆ ಯಡಿಯೂರಪ್ಪ ಹೊರತುಪಡಿಸಿ ಮುಂಚೂಣಿಯಲ್ಲಿರುವ ಇತರೆ ನಾಯಕರಿಗೂ ರಾಜ್ಯ ಬಿಜೆಪಿಯ ಮುಂದಿನ ನಡೆ ಏನು ಎಂಬ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ.

ಕುತೂಹಲ, ಗೊಂದಲಗಳ ನಡುವೆ ನಾಳೆ ಮತ್ತೆ ಸಭೆ

ರಾಜ್ಯ ಬಿಜೆಪಿಯ ಶಾಸಕರು ಮತ್ತು ಸಂಸದರಲ್ಲಿ ಸಭೆ ಮುಗಿದು, ಸಂಜೆ ಸರಿದರೂ ಇದ್ದ ಕುತೂಹಲ ತಣಿದಿರಲಿಲ್ಲ, ಗೊಂದಲ ಬಗೆಹರಿದಿರಲಿಲ್ಲ.‌ ನಾಳೆ ಮಧ್ಯಾಹ್ನ 11.30ಕ್ಕೆ ಮತ್ತೆ ಅದೇ ಕುತೂಹಲ ದೊಂದಿಗೆ, ಗೊಂದಲದೊಂದಿಗೆ, ಅಮಿತ್ ಶಾ ಬರಬಹುದೆಂಬ ನಿರೀಕ್ಷೆಯೊಂದಿಗೆ ಸಭೆ ನಡೆಯಲಿದೆ. ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಬೇಕು ಎಂದುಕೊಂಡಿದ್ದ ಶಾಸಕರು, ಸಂಸದರು ಹಬ್ಬದ ಬಳಿಕವಾದರೂ ಸಹಿ ಸುದ್ದಿ ಸಿಗಬಹುದೆಂದು ದೆಹಲಿ ಚಳಿ ಕಳೆಯುತ್ತಿದ್ದಾರೆ.

Comments are closed.