ಕರ್ನಾಟಕ

ನನಗೆ ಹೇಳೋಕೆ ಕೇಳೋಕೆ ಕುಮಾರಸ್ವಾಮಿ, ದೇವೇಗೌಡರು ಇದ್ದಾರೆ, ದಿನೇಶ್​ ಗುಂಡೂರಾವ್​ ಯಾರು?; ಎಚ್​.ಡಿ. ರೇವಣ್ಣ

Pinterest LinkedIn Tumblr


ಬೆಂಗಳೂರು: ‘ನನಗೆ ಹೇಳೋಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ದಿನೇಶ್​ ಗುಂಡೂರಾವ್​ ಮೊದಲು ಕಾಂಗ್ರೆಸ್​ ಶಾಸಕರನ್ನು ಹತೋಟಿಯಲ್ಲಿಟ್ಟುಕೊಳ್ಳಲಿ. ನನಗೆ ಹೇಳೋಕೆ ಅವರ್ಯಾರು?’ ಎಂದು ಸಚಿವ ಎಚ್​.ಡಿ. ರೇವಣ್ಣ ಕಿಡಿಕಾರಿದ್ದಾರೆ.

ರೇವಣ್ಣ ಜೆಡಿಎಸ್​ ವಿಷಯವನ್ನಷ್ಟೇ ನೋಡಿಕೊಂಡರೆ ಸಾಕು. ಕಾಂಗ್ರೆಸ್​ ಪಕ್ಷದವರ ಬಗ್ಗೆ ಮಾತನಾಡಬಾರದು ಎಂದು ಈ ಹಿಂದೆ ದಿನೇಶ್​ ಗುಂಡೂರಾವ್​ ಹೇಳಿದ್ದರು. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ರೇವಣ್ಣ, ನಾನು ಕೂಡ 5 ಬಾರಿ ಶಾಸಕನಾಗಿ ಆರಿಸಿಬಂದವನು. ಮತ್ತೊಬ್ಬರಿಂದ ಹೇಳಿಸಿಕೊಂಡು ನಾನು ರಾಜಕೀಯ ಕಲಿಯಬೇಕಾಗಿಲ್ಲ. ಬೇರೆ ಪಕ್ಷದವರು ನನಗೆ ಹೇಳುವ ಅಗತ್ಯವಿಲ್ಲ. ದೇವೇಗೌಡ, ಕುಮಾರಸ್ವಾಮಿಯವರು ಹೇಳಿದರೆ ನಾನು ಕೇಳುತ್ತೇನೆ. ಅವರು ಅವರ ಪಕ್ಷದವನ್ನು ಸರಿಯಾಗಿ ನೋಡಿಕೊಳ್ಳಲಿ ಎಂದು ದಿನೇಶ್​ ಗುಂಡೂರಾವ್​ಗೆ ಟಾಂಗ್​ ನೀಡಿದ್ದಾರೆ.

ಜೆಡಿಎಸ್​ ಸಭೆಯಲ್ಲಿ ದೇವೇಗೌಡರು ಕಣ್ಣೀರು ಹಾಕಿದ ವಿಚಾರವಾಗಿ ಮಾತನಾಡಿದ ರೇವಣ್ಣ, ನಮ್ಮ ಕೈಯಲ್ಲೇ ಅಧಿಕಾರವಿದ್ದರೂ ನಮ್ಮವರಿಗೆ ಏನೂ ಮಾಡಲು ಆಗುತ್ತಿಲ್ಲ ಎಂಬ ನೋವಿನಲ್ಲಿ ಅವರು ಹಾಗೆ ಮಾತಾಡಿದ್ದಾರೆ. ನಮ್ಮ ಬಳಿಯೇನು ನೋಟು ಪ್ರಿಂಟ್ ಮಾಡುವ ಮಷಿನ್ ಇಲ್ಲ. ಅಧಿಕಾರ ಇದ್ದರೂ ನಮ್ಮ ಜನರಿಗೆ ಅನುಕೂಲ ಮಾಡಿಕೊಡಲು ಆಗುತ್ತಿಲ್ಲ ಎಂಬ ನೋವಿದೆ. ದೇವೇಗೌಡರು ಯಾವತ್ತೂ ಅಡ್ಜಸ್ಟ್​ಮೆಂಟ್​ ಪಾಲಿಟಿಕ್ಸ್ ಮಾಡಿದವರಲ್ಲ. ಹಾಗಾಗಿ ಅದೇ ನೋವಿನಿಂದ ಕಣ್ಣೀರು ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಇಲಾಖೆಯ ಕೆಲಸಗಳಿಗೆ ಚುರುಕು ಮುಟ್ಟಿಸುವ ಸೂಚನೆಗಳನ್ನು ನೀಡಿದ್ದೇನೆ. ಬೇಸಿಗೆ ಆರಂಭವಾಗುವ ಮೊದಲು ರಸ್ತೆಗುಂಡಿ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಶಾಲಾ ಸಂಪರ್ಕ ಸೇತುವೆಗಳನ್ನು ನಿರ್ಮಿಸುವ ಕೆಲಸ ಈ ತಿಂಗಳಲ್ಲಿ ಶುರು ಮಾಡಬೇಕು ಎಂದು ಆದೇಶ ನೀಡಿದ್ದೇನೆ. ಇದಕ್ಕೆ 220 ಕೋಟಿ ರೂ. ಖರ್ಚಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Comments are closed.