ಕರ್ನಾಟಕ

ವಿಧಾನಸೌಧದಲ್ಲಿ ಸಚಿವರೊಬ್ಬರ ಆಪ್ತರ ಬ್ಯಾಗಲ್ಲಿ ಕಂತೆಕಂತೆ ಹಣ ಪತ್ತೆ!

Pinterest LinkedIn Tumblr


ಬೆಂಗಳೂರು: ವಿಧಾನಸೌಧದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ಬಳಿ ಲಕ್ಷಲಕ್ಷ ಕಂತೆ ಹಣ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಮೋಹನ್ ಎಂಬುವವರ ಬ್ಯಾಗಲ್ಲಿ 25.76 ಲಕ್ಷ ರೂ ಪತ್ತೆಯಾಗಿದೆ. ಮೋಹನ್ ಅವರು ಹಿಂದುಳಿದ ಆಯೋಗದ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದಾನೆ. ಸಚಿವ ಪುಟ್ಟರಂಗ ಶೆಟ್ಟಿ ಅವರ ಕೊಠಡಿಯಲ್ಲೇ ಈತ ಕೆಲಸ ಮಾಡುತ್ತಾನೆ. ಇವರ ಬ್ಯಾಗಲ್ಲಿ ಹಣ ಇರುವ ಬಗ್ಗೆ ಮಾಧ್ಯಮದವರಿಗೆ ಅನುಮಾನ ಬಂದು ಕೇಳಿದಾಗ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ವಿಧಾನಸೌಧ ಪೊಲೀಸರು ಮೋಹನ್ ಮತ್ತವರ ಹಣದ ಚೀಲವನ್ನು ವಶಪಡಿಸಿಕೊಂಡಿದ್ದಾರೆ.

ಇದು ಅಕ್ರಮ ವ್ಯವಹಾರದ ದುಡ್ಡಾಗಿದೆ ಎಂಬ ಮಾಧ್ಯಮದವರು ಪ್ರಶ್ನಿಸಿದಾಗ, ಈ ಬ್ಯಾಗಲ್ಲಿ 14-15 ಲಕ್ಷ ರೂ ಇದ್ದು, ಇದು ತನ್ನ ಸ್ವಂತ ಹಣ ಎಂದು ಮೋಹನ್ ಅವರು ಹೇಳಿಕೊಂಡು ತಪ್ಪಿಸಿಕೊಳ್ಳಲು ಆತ ಯತ್ನಿಸಿರುತ್ತಾನೆ. ಈ ವೇಳೆ, ಮಾಧ್ಯಮದವರು ಪೊಲೀಸರನ್ನು ಕರೆಸಿ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ನೋಡಿಕೊಳ್ಳುತ್ತಾರೆ.

ಪೊಲೀಸ್ ಠಾಣೆಯಲ್ಲಿ ಬ್ಯಾಗನ್ನು ಪರಿಶೀಲಿಸಿದಾಗ 25.76 ಲಕ್ಷ ರೂ ಇತ್ತು ಎಂದು ವಿಧಾನಸೌಧ ಡಿಸಿಪಿ ಸಿದ್ದರಾಜು ಹೇಳಿದ್ಧಾರೆ. ಇದು ತನ್ನ ಸ್ವಂತ ದುಡ್ಡು ಎಂದು ಪೊಲೀಸರ ಮುಂದೆಯೂ ಮೋಹನ್ ಹೇಳಿಕೆ ಕೊಡುತ್ತಿರುವುದು ಗೊತ್ತಾಗಿದೆ. ಆದರೆ, ಈತನ ಹಣಕ್ಕೆ ಯಾವುದೇ ದಾಖಲೆಗಳಿಲ್ಲ. ಈತ ಹಿಂದುಳಿದ ಆಯೋಗದ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದರೂ ಈತ ಸರಕಾರಿ ಈತ ನೌಕರನಲ್ಲ. ಈತ ಈ ಹಿಂದೆ ಮಾಜಿ ಅರಣ್ಯ ಸಚಿವ ಆರ್. ಶಂಕರ್ ಸೇರಿದಂತೆ ಬೇರೆ ಬೇರೆ ಕಚೇರಿಯಲ್ಲಿ ಕೆಲಸ ಮಾಡಿದ್ದಾನೆ. ಇನ್ನಷ್ಟು ತನಿಖೆ ಮಾಡಿದ ಬಳಿಕ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಅಕ್ರಮ ಹಣಕ್ಕೆ ನಿಷೇಧವಿದೆ. ಇಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಸಿಕ್ಕರೆ ಪೊಲೀಸರು ಆ ಹಣವನ್ನು ಐಟಿ ಇಲಾಖೆಯ ಗಮನಕ್ಕೆ ತಂದು ಅವರ ವಶಕ್ಕೆ ಕೊಡುತ್ತಾರೆ. ಇಲ್ಲಿ ಈ ಹಿಂದೆಯೂ ಕೆಲ ಬಾರಿ ಅಕ್ರಮ ಹಣ ಪತ್ತೆಯಾದ ಪ್ರಕರಣಗಳಿವೆ. 2016ರಲ್ಲಿ ಕಾರೊಂದರಲ್ಲಿ 2.4 ಕೋಟಿ ರೂ ಅಕ್ರಮ ಹಣ ಪತ್ತೆಯಾಗಿತ್ತು. ವಿಧಾನಸೌಧದ ಭದ್ರತಾ ಅಧಿಕಾರಿಗಳ ತಪಾಸಣೆ ವೇಳೆ ಈ ಹಣ ಸಿಕ್ಕಿತ್ತು.

ಸಿಎಂ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಹೊಸತರಲ್ಲಿ ವಿಧಾನಸೌಧದಲ್ಲಿ ದಲ್ಲಾಳಿಗಳು ಹೆಚ್ಚಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಅಕ್ರಮ ಹಣ ಪತ್ತೆಯಾಗಿರುವುದು ಗಮನಾರ್ಹ. ಸದ್ಯಕ್ಕೆ ವಿಧಾನಸೌಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಈ ಹಣ ಯಾರಿಂದ ಪಡೆದದ್ದು ಇತ್ಯಾದಿ ವಿವರಗಳನ್ನ ಪೊಲೀಸರು ಪಡೆಯುವ ಪ್ರಯತ್ನದಲ್ಲಿದ್ದಾರೆ.

Comments are closed.