ಕರ್ನಾಟಕ

ಮಕರ ಸಂಕ್ರಾಂತಿ ಬಳಿಕ ಅವಕಾಶ ಸಿಕ್ಕರೆ ಸರ್ಕಾರ ರಚಿಸಿ: ಬಿಜೆಪಿ ಹೈಕಮಾಂಡ್‌ನಿಂದ ಹಸಿರು ನಿಶಾನೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ಬಿಜೆಪಿ ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕಿದ್ದು, ಮಕರ ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಕ್ರಮಣ ಸಂಭವಿಸುವ ಲಕ್ಷಣಗಳು ಗೋಚರಿಸುತ್ತಿವೆ.

ದೆಹಲಿಯಲ್ಲಿ ವರಿಷ್ಠರ ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಹಾಗಾಗಿ ಜ.15ರ ನಂತರ ಬದಲಾದ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಸರ್ಕಾರ ರಚನೆ ಮಾಡುವ ಗಂಭೀರ ಪ್ರಯತ್ನ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ನಾಯಕರ ಮಟ್ಟದಲ್ಲೇ ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಹಿಂದೆ ಸರ್ಕಾರ ರಚನೆಗೆ ನಡೆಸಿದ ಪ್ರಯತ್ನ ವಿಫ‌ಲವಾಗಿ ಹಿನ್ನಡೆ ಅನುಭವಿಸುವ ಜತೆಗೆ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗಿದ್ದು, ಪಕ್ಷದ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ವರಿಷ್ಠರ ಸಹಮತವಿಲ್ಲದೇ ಮತ್ತೆ ಸರ್ಕಾರ ರಚನೆಗೆ ಪ್ರಯತ್ನ ನಡೆಸುವ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲೂ ಗೊಂದಲವಿತ್ತು. ಅಂತಿಮವಾಗಿ ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ವರಿಷ್ಠರಿಂದ ಹಸಿರು ನಿಶಾನೆ ಸಿಕ್ಕಿದ್ದು, ಸರ್ಕಾರ ರಚಿಸುವ ಹುಮ್ಮಸ್ಸಿಗೆ ಹೆಚ್ಚು ಬಲ ಬಂದಂತಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪೂರಕ ಸನ್ನಿವೇಶ ನಿರ್ಮಾಣವಾದರೆ ಸರ್ಕಾರ ರಚನೆಗೆ ಗ್ರೀನ್‌ ಸಿಗ್ನಲ್‌ ತೋರಿರುವ ವರಿಷ್ಠರು, ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಪ್ರಯತ್ನ ನಡೆಸಿದರೆ ವಿಫ‌ಲವಾಗಬಾರದು. ಸುಸ್ಥಿರ ಸರ್ಕಾರ ರಚನೆಗೆ ಪೂರಕ ವ್ಯವಸ್ಥೆ ಮಾಡಿಕೊಂಡು ಖಾತರಿಯಾದ ಬಳಿಕವಷ್ಟೇ ಕಾರ್ಯಪ್ರವೃತ್ತವಾಗಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ ಎನ್ನಲಾಗಿದೆ.

ಸದ್ದಿಲ್ಲದೇ ಸಂಪರ್ಕ ಯತ್ನ
ಸಚಿವ ಸ್ಥಾನದ ಆಕಾಂಕ್ಷಿಗಳು, ಸಚಿವ ಸ್ಥಾನ ವಂಚಿತರು, ಮೈತ್ರಿ ಸರ್ಕಾರ ರಚನೆ ಬಳಿಕ ಅಸಮಾಧಾನಗೊಂಡಿರುವ ಶಾಸಕರನ್ನು ಸೆಳೆಯುವ ಕಾರ್ಯ ಸದ್ದಿಲ್ಲದೇ ನಡೆದಿದೆ. ಏಳೆಂಟು ತಂಡಗಳು ಪ್ರತ್ಯೇಕವಾಗಿ ಅತೃಪ್ತರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಸೆಳೆಯುವ, ಮನವೊಲಿಸುವ ಕಾರ್ಯದಲ್ಲಿ ನಿರತರಾಗಿವೆ. ಒಂದು ತಂಡದ ಪ್ರಯತ್ನದ ಬಗ್ಗೆ ಮತ್ತೂಂದು ತಂಡಕ್ಕೆ ಮಾಹಿತಿ ಇಲ್ಲದಂತೆ ಎಚ್ಚರ ವಹಿಸಲಾಗಿದೆ. ಕೆಲ ತಂಡಗಳಿಗೆ ನಿರೀಕ್ಷಿತ ಸ್ಪಂದನೆಯೂ ಸಿಕ್ಕಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮರಕ ಸಂಕ್ರಾಂತಿ ಬಳಿಕ ರಾಜಕೀಯ ಕ್ರಾಂತಿ ಸೃಷ್ಟಿಯಾಗುವ ನಿರೀಕ್ಷೆ ಮೂಡಿದೆ.

ದೆಹಲಿಯಿಂದ ಹಿಂತಿರುಗಿದ ಬಳಿಕ ಯಡಿಯೂರಪ್ಪ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದ್ದು, ಇನ್ನಷ್ಟು ಕ್ರಿಯಾಶೀಲವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಿರೀಕ್ಷಿತ ಸಂಖ್ಯೆಯ ಶಾಸಕರನ್ನು ಸೆಳೆದ ಬಳಿಕ ಸ್ವಂತ ಬಲದ ಸರ್ಕಾರ ರಚನೆ ಪ್ರಯತ್ನಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ. ಈ ಹಂತದವರೆಗೆ ಬೆಳವಣಿಗೆಯಾದರೆ ಅಗತ್ಯ ಸಹಕಾರ, ಮಾರ್ಗದರ್ಶನವನ್ನು ನೀಡುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ.

ರಾಜಧಾನಿಯಿಂದ ಬಿಎಸ್‌ವೈ ದೂರ
ಬಿ.ಎಸ್‌.ಯಡಿಯೂರಪ್ಪ ಅವರು ಮುಂದಿನ ಕೆಲವು ದಿನ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಲಿದ್ದು, ರಾಜಧಾನಿಯಿಂದ ಕೆಲವು ದಿನ ದೂರ ಉಳಿಯುತ್ತಿರುವ ನಡೆಯೂ ಕುತೂಹಲ ಮೂಡಿಸಿದೆ. ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೇ ಕೆಲದಿನ ಯಡಿಯೂರಪ್ಪ ಅವರು ನೆಲೆಯೂರಲಿದ್ದಾರೆ ಎಂದು ಆಪ್ತ ಬಳಗ ತಿಳಿಸಿದೆ. ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿರುವ ಹೊತ್ತಿನಲ್ಲೇ ಅವರು ಕೆಲ ದಿನದ ಮಟ್ಟಿಗೆ ಶಿವಮೊಗ್ಗದಲ್ಲಿ ಉಳಿಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ದೆಹಲಿಯಲ್ಲಿ ಜ.11 ಹಾಗೂ 12ರಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಆ ಸಭೆಯ ಬಳಿಕ ರಾಜ್ಯದ ರಾಜಕೀಯ ಚಿತ್ರಣದ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿ ನಂತರ ಮುಂದಿನ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಕ್ರಿಯವಾದ ಬಿಜೆಪಿ
ಮೈತ್ರಿ ಸರ್ಕಾರದ ಆರು ತಿಂಗಳ ಆಡಳಿತ ಪೂರ್ಣಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಹೆಚ್ಚು ಸಕ್ರಿಯವಾಗಿದ್ದು, ಮೈತ್ರಿ ಸರ್ಕಾರದ ಕಾರ್ಯವೈಖರಿ ಹಾಗೂ ವೈಫ‌ಲ್ಯಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ವಾಗ್ಧಾಳಿ ನಡೆಸಲಾರಂಭಿಸಿದೆ. ಸಂಪುಟ ಪುನಾರಚನೆ ಬಳಿಕ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸೇರಿದಂತೆ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನದ ಬಗ್ಗೆ ತೆರೆಮರೆಯಲ್ಲೇ ಕಸರತ್ತು ನಡೆದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ಹಿರಿಯ ಶಾಸಕ ಉಮೇಶ್‌ ಕತ್ತಿಯವರು 24 ಗಂಟೆಯಲ್ಲಿ ಸರ್ಕಾರ ಪತನವಾಗಲಿದೆ ಎಂದು ಬಹಿರಂಗವಾಗಿ ಹೇಳಿದ್ದ ಭವಿಷ್ಯ ನಂತರ ಹುಸಿಯಾಗಿತ್ತು. ಒಟ್ಟಾರೆ ತೆರೆಮರೆಯಲ್ಲೇ ಶಾಸಕರನ್ನು ಸೆಳೆಯುವ ಕಸರತ್ತು ಗಂಭೀರವಾಗಿ ನಡೆದಿದೆ ಎಂಬುದು ಸ್ಪಷ್ಟ.

Comments are closed.