ಕರ್ನಾಟಕ

ಸಿದ್ದಗಂಗಾ ಶ್ರೀಗಳಿಗೆ ಸೋಂಕು ಹೆಚ್ಚಾಗುವ ಆತಂಕ: ಮತ್ತೆ ಆಸ್ಪತ್ರೆಗೆ ದಾಖಲು

Pinterest LinkedIn Tumblr


ತುಮಕೂರು: ಮೂತ್ರಪಿಂಡ ಸೋಂಕಿಗೆ ಒಳಗಾಗಿರುವ ಸಿದ್ದಗಂಗಾ ಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮಿಗಳನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಮಠದಲ್ಲಿದ್ದರೆ ಸೋಂಕು ಹೆಚ್ಚಾಗುವ ಹಿನ್ನೆಲೆಯಲ್ಲಿ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಗಂಗಾ ಶ್ರೀಗಳು ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆಗೊಳಪಟ್ಟು ಮಠಕ್ಕೆ ವಾಪಸ್ ಬಂದಾಗಿನಿಂದಲೂ ಪ್ರತೀ ದಿನ ಯಾರಾದರೂ ವಿವಿಐಪಿಗಳು ಬಂದು ಭೇಟಿ ಮಾಡುತ್ತಲೇ ಇದ್ದರಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗದಂತೆ ತಡೆಯಲು ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕನಿಷ್ಠ ಒಂದು ವಾರ ಕಾಲ ಅವರು ಆಸ್ಪತ್ರೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲಿದ್ದಾರೆ.

ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಹಾಗೂ ಎಸ್​ಪಿ ಡಾ. ದಿವ್ಯಾ ಗೋಪಿನಾಥ್ ನೇತೃತ್ವದಲ್ಲಿ ಸ್ವಾಮಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಕ್ಕಾಗಿ ಮಠದಿಂದ ಆಸ್ಪತ್ರೆಯವರೆಗಿನ ಹಾದಿಯನ್ನು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳು ಸಂಪೂರ್ಣವಾಗಿ ಗುಣಮುಖವಾಗುವವರೆಗೂ ಆಸ್ಪತ್ರೆಯಲ್ಲೇ ಅವರಿಗೆ ಎಲ್ಲಾ ಚಿಕಿತ್ಸೆ ಒದಗಿಸಲಾಗುತ್ತದೆ.

ಇದಕ್ಕೂ ಮುನ್ನ ಇಂದು ಗುರುವಾರ ಸಂಜೆ ಚೆನ್ನೈ ಮೂಲದ ಸೋಂಕು ತಜ್ಞ ಡಾ. ಸುಬ್ರಾ ಅವರು ಸಿದ್ದಗಂಗಾ ಮಠಕ್ಕೆ ಬಂದು ಶ್ರೀಗಳ ಆರೋಗ್ಯ ಪರಿಶೀಲನೆ ನಡೆಸಿದರು. ಅವರ ಸಲಹೆ ಮೇರೆಗೆ ಶ್ರೀಗಳನ್ನು ಆಸ್ಪತ್ರೆಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಶ್ರೀಗಳಿಗೆ ವಯಸ್ಸಾಗಿರುವುದರಿಂದ ಚೇತರಿಕೆ ನಿಧಾನವಾಗುತ್ತಿದೆ. ಶ್ವಾಸಕೋಶ ಸೋಂಕು ಕಡಿಮೆಯಾಗುತ್ತಿದೆ. ಜನರ ಪ್ರಾರ್ಥನೆ ಹಾಗೂ ಶ್ರೀಗಳ ಇಚ್ಛಾಶಕ್ತಿಯಿಂದಾಗಿ ಅವರು ಈ ವಯಸ್ಸಿನಲ್ಲೂ ಚೇತರಿಕೆ ಕಾಣುತ್ತಿದ್ದಾರೆ ಎಂದು ಈ ವೈದ್ಯರು ಅಭಿಪ್ರಾಯಪಟ್ಟಿದ್ದರು.

ಇದೇ ವೇಳೆ, ಸಿದ್ದಗಂಗಾ ಮಠದ ಕಿರಿಯ ಯತಿಗಳು ಮಾತನಾಡಿದ್ದು, ಶ್ರೀಗಳು ಬೇಗ ಗುಣಮುಖರಾಗಲೆಂದು ಆಸ್ಪತ್ರೆಗೆ ಸೇರಿಸಲಾಗಿದೆ. ಭಕ್ತಾದಿಗಳು ಅನ್ಯತಾ ಭಾವಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಶ್ರೀಮಠದಲ್ಲಿ ಭಕ್ತಾಧಿಗಳು ಹಾಗೂ ಗಣ್ಯರ ಆಗಮನದಿಂದ ತೊಂದರೆಯಾಗುತ್ತಿತ್ತು. ಮಠದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ, ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಯಾರಿಗೂ ಕೂಡ ಶ್ರೀಗಳ ಭೇಟಿಗೆ ಅವಕಾಶ ಇರುವುದಿಲ್ಲ ಎಂದು ಕಿರಿಯ ಸ್ವಾಮಿಗಳು ಹೇಳಿದ್ದಾರೆ.

Comments are closed.