ಕರ್ನಾಟಕ

ಬಿಜೆಪಿಯ ಏಳು ಹಾಲಿ ಸಂಸದರಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ?: ರಹಸ್ಯ ಆಂತರಿಕ ಸಮೀಕ್ಷೆ

Pinterest LinkedIn Tumblr


ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 20ಕ್ಕೂ ಹೆಚ್ಚು ಸೀಟುಗಳನ್ನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಭಾರತೀಯ ಜನತಾ ಪಕ್ಷ ಬಹಳ ಹಿಂದಿನಿಂದಲೇ ವ್ಯಾಪಕ ಆಂತರಿಕ ಸಮೀಕ್ಷೆ ನಡೆಸಿರುವುದು ಬೆಳಕಿಗೆ ಬಂದಿದೆ. ರಹಸ್ಯವಾಗಿ ನಡೆಸಲಾದ ಈ ಸಮೀಕ್ಷೆಯಲ್ಲಿ 17 ಬಿಜೆಪಿ ಸಂಸದರ ಕಾರ್ಯಸಾಧನೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿದೆ. ಅದರಂತೆ ಏಳು ಬಿಜೆಪಿ ಸಂಸದರ ನೆತ್ತಿಯ ಮೇಲೆ ಕತ್ತಿ ತೂಗುತ್ತಿದೆಯಂತೆ.

ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಆಂತರಿಕ ಸಮೀಕ್ಷೆಗೆ ಮೊರೆ ಹೋಗಿದ್ದರು. ಅದರಂತೆಯೇ ಈ ಬಾರಿಯ ಲೋಕ ಸಭೆ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವಾಗ ಸಮೀಕ್ಷೆ ಮಾಡಿಸಿದ್ದಾರೆ ಎನ್ನಲಾಗಿದ್ದು ಏಳು ಹಾಲಿ ಸಂಸದರು ಸೋಲುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಈ ಏಳೂ ಹಾಲಿ ಸಂಸದರಿಗೆ ಟಿಕೆಟ್​ ನೀಡದಿರಲು ಬಿಜೆಪಿ ಚಿಂತಿಸಿದೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್​ ನೀಡದಿದ್ದರೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲೂ ಭಾಗಿಯಾಗುವ ಸಾಧ್ಯತೆಯನ್ನೂ ಬಿಜೆಪಿ ಮನಗಂಡಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಕಳೆದೊಂದು ವರ್ಷದಿಂದ ಈ ಸಮೀಕ್ಷೆಯನ್ನು ಮಾಡಲಾಗಿದ್ದು ನಿಖರ ಪ್ರತಿಕ್ರಿಯೆ ಅವಲಂಬಿಸಿ ಸರ್ವೇ ನೀಡಲಾಗಿದೆ ಎನ್ನಲಾಗಿದೆ. ಉನ್ನತ ಮೂಲಗಳ ಮಾಹಿತಿ ಪ್ರಕಾರ ಒಂದು ವರ್ಷದಿಂದ ಸಮೀಕ್ಷಾ ತಂಡ ಪ್ರತಿಯೊಂದೂ ವರ್ಗದ ಮತದಾರರನ್ನು ತಲುಪಿ ಪ್ರತಿಕ್ರಿಯೆ ಸಂಗ್ರಹಿಸಿದೆ ಎನ್ನಲಾಗಿದೆ. ಮೊದಲ ಬಾರಿ ಮತ ಚಲಾಯಿಸಲಿರುವ ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಉದ್ಯೋಗ ಮಾಡುತ್ತಿರುವ ಮಹಿಳೆಯರು, ಗೃಹಿಣಿಯರು, ವಯೋವೃದ್ಧರು ಸೇರಿದಂತೆ ಎಲ್ಲಾ ವರ್ಗದವರನ್ನೂ ಸಮೀಕ್ಷಾ ತಂಡ ಮಾತನಾಡಿಸಿದೆ ಎನ್ನಲಾಗುತ್ತಿದೆ.

ಸೋಲಿನ ಭೀತಿಯಲ್ಲಿರುವ ಸಂಸದರಿವರು:
ಬೆಳಗಾವಿ ಸಂಸದ ಸುರೇಶ್ ಅಂಗಡಿ
ಮೈಸೂರು, ಕೊಡಗು ಸಂಸದ ಪ್ರತಾಪ್ ಸಿಂಹ
ಚಿಕ್ಕಮಗಳೂರು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ
ಉತ್ತರಕನ್ನಡ ಸಂಸದ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ
ಬೀದರ್ ಸಂಸದ, ಭಗವಂತ ಖೂಬ
ಬಾಗಲಕೋಟೆ ಸಂಸದ, ಪಿ.ಸಿ ಗದ್ದಿಗೌಡರ್
ಕೊಪ್ಪಳ ಸಂಸದ, ಸಂಗಣ್ಣ ಕರಡಿ

ಈ ಏಳೂ ಸಂಸದರ ವಿರುದ್ಧ ಸ್ವಲ್ಪ ಪ್ರಬಲ ಎದುರಾಳಿಯನ್ನು ಕಣಕ್ಕಿಳಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಜತೆಗೆ ಬಿಜೆಪಿ ಕಾರ್ಯಕರ್ತರಲ್ಲೂ ಈ ಏಳು ಸಂಸದರ ಮೇಲೆ ಸಿಟ್ಟಿದೆ, ಇದೂ ಕೂಡ ಸೋಲಿನ ಸಾಧ್ಯತೆಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ಕೇಂದ್ರದ ಯೋಜನೆಯನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಈ ಸಂಸದರು ಸೋತಿದ್ದಾರೆ ಎನ್ನುತ್ತಿದೆ ಸಮೀಕ್ಷೆ. ಈ ಹಿನ್ನೆಲೆಯಲ್ಲಿ ಬದಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಸಮೀಕ್ಷಾ ತಂಡ ಶಿಫಾರಸು ಮಾಡಿದೆ.

Comments are closed.