ಕರ್ನಾಟಕ

ಬೆಂಗಳೂರು: ಅಮೆರಿಕದಲ್ಲಿ ನೆಲೆಸಿರುವ ಪತಿಯಿಂದ ತ್ರಿವಳಿ ತಲಾಕ್‌ ಸಂತ್ರಸ್ತೆಗೆ ಮೇನಕಾ ಗಾಂಧಿ ನೆರವು

Pinterest LinkedIn Tumblr


ಹೊಸದಿಲ್ಲಿ: ಅಮೆರಿಕದಲ್ಲಿ ನೆಲೆಸಿರುವ ಪತಿಯಿಂದ ವಾಟ್ಸ್‌ಆ್ಯಪ್‌ನಲ್ಲಿ ಶುಕ್ರವಾರ ತ್ರಿವಳಿ ತಲಾಕ್‌ ಪಡೆದ ಬೆಂಗಳೂರಿನ ಮುಸ್ಲಿಂ ಮಹಿಳೆಗೆ ನ್ಯಾಯ ಒದಗಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಶನಿವಾರ ಟ್ವಿಟರ್‌ ಮೂಲಕ ಭರವಸೆ ನೀಡಿದ್ದಾರೆ.

ತ್ರಿವಳಿ ತಲಾಕ್‌ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ವಿಧೇಯಕ ಹಲವು ಪರಿಷ್ಕರಣೆಗಳೊಂದಿಗೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರಗೊಂಡ ನಂತರ ಬೆಂಗಳೂರಿನ ರೇಷ್ಮಾ ಅಜೀಜ್‌ ಅವರಿಗೆ ಪತಿ ಸರ್ಜನ್‌ ಜಾವೇದ್‌ ಖಾನ್‌ ವಾಟ್ಸ್‌ಆ್ಯಪ್‌ನಲ್ಲಿ ಆಡಿಯೊ/ಅಕ್ಷರ ರೂಪದಲ್ಲಿ ತಲಾಕ್‌ ನೀಡಿದ ಪ್ರಕರಣ ಬಯಲಿಗೆ ಬಂದಿದೆ.

”ಈ ಪ್ರಕರಣವನ್ನು ನಮ್ಮ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ತಲಾಕ್‌ ಸಂತ್ರಸ್ತ ಮಹಿಳೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಅವರಿಗೆ ನ್ಯಾಯ ಒದಗಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಈ ಸಂಬಂಧ ರೇಷ್ಮಾ ಅವರ ಸಹೋದರನಿಂದ ವಾಟ್ಸ್‌ಆ್ಯಪ್‌ನಲ್ಲಿ ಬಂದ ತಲಾಕ್‌ ಸಂದೇಶದ ಮಾಹಿತಿ ಪಡೆಯಲಾಗಿದೆ,” ಎಂದು ಮೇನಕಾ ಗಾಂಧಿ ಟ್ವೀಟ್‌ ಮಾಡಿದ್ದಾರೆ.

2003ರಲ್ಲಿ ರೇಷ್ಮಾ ಹಾಗೂ ಜಾವೇದ್‌ ಅವರ ಮದುವೆಯಾಗಿದೆ. ಜಾವೇದ್‌ ವೃತ್ತಿಯಿಂದ ವೈದ್ಯ. ಮದುವೆ ನಂತರ ದಂಪತಿ ಬ್ರಿಟನ್‌ನಲ್ಲಿ ವಾಸವಿದ್ದು, ನಂತರದಲ್ಲಿ ಅಮೆರಿಕಕ್ಕೆ ತೆರಳಿದರು. ಇಬ್ಬರ ಮಧ್ಯೆಯೂ ಆಗಾಗ ಮನಸ್ತಾಪ ಸ್ಫೋಟಗೊಳ್ಳುತ್ತಿತ್ತು. ಕಳೆದ ತಿಂಗಳಷ್ಟೇ ಜಾವೇದ್‌, ರೇಷ್ಮಾರನ್ನು ಬೆಂಗಳೂರಿಗೆ ಕರೆತಂದು ನಂತರ ಆಕೆಗೆ ಸೇರಿದ ಪಾಸ್‌ಪೋರ್ಟ್‌, ಶೈಕ್ಷಣಿಕ ದಾಖಲೆಗಳೊಂದಿಗೆ ಅಮೆರಿಕಕ್ಕೆ ಹೊರಟು ಹೋದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಂಪತಿಗೆ 13 ಹಾಗೂ 10 ವರ್ಷದ ಇಬ್ಬರು ಮಕ್ಕಳಿದ್ದಾರೆ.

Comments are closed.