ಕರ್ನಾಟಕ

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 12 ಕ್ಷೇತ್ರಕ್ಕೆ ಜೆಡಿಎಸ್ ಸ್ಪರ್ಧೆ; ಸಮ್ಮಿಶ್ರ ಸರಕಾರಕ್ಕೆ ಭಂಗವಿಲ್ಲವೆಂದ ದೇವೇಗೌಡ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಜಾತ್ಯತೀತ ಜನತಾ ದಳವು ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನ ಪಡೆಯಲು ಚಿಂತನೆ ನಡೆಸಿದೆ. ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೇ ಖುದ್ದಾಗಿ ಈ ವಿಷಯವನ್ನು ಖಚಿತಪಡಿಸಿದ್ಧಾರೆ. ಜನವರಿ 15ರೊಳಗೆ ಕಾಂಗ್ರೆಸ್ ಜೊತೆ ಕೂತು ಸೀಟು ಹಂಚಿಕೆಯನ್ನು ಅಂತಿಮಗೊಳಿಸುತ್ತೇವೆ ಎಂದು ಗೌಡರು ಹೇಳಿದ್ದಾರೆ.

“ಲೋಕಸಭಾ ಕ್ಷೇತ್ರಗಳ ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇರಬಾರದು. ಜೆಡಿಎಸ್​ನಿಂದ 12 ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಾವು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂತು ಒಂದು ನಿರ್ಧಾರಕ್ಕೆ ಬರುತ್ತೇವೆ. ಸೀಟು ಹಂಚಿಕೆ ಕೆಲಸ ಸುಗಮವಾಗಿ ಮುಕ್ತಾಯಗೊಳಿಸುತ್ತೇವೆ,” ಎಂದು ಮಾಜಿ ಪ್ರಧಾನಿಗಳು ಅಭಿಪ್ರಾಯಪಟ್ಟಿದ್ಧಾರೆ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಪುಟ ರಚನೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ಧಾರೆ. ಜನವರಿ 8ರವರೆಗೂ ಸಂಸತ್ ಅಧಿವೇಶನವಿದ್ದು, ರಾಜ್ಯದ ಸೀಟು ಹಂಚಿಕೆ ವಿಚಾರವನ್ನು ಜನವರಿ 15ರೊಳಗೆ ಕೂತು ಅಂತಿಮಗೊಳಿಸಲು ಯತ್ನಿಸುತ್ತೇವೆ ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್ ಪಕ್ಷವು ಮೈಸೂರಿನಲ್ಲಿ ಬಹುತೇಕ ನೆಲೆ ಹೊಂದಿದ್ದು, ಅಲ್ಲಿಂದಲೇ ಹೆಚ್ಚು ಸೀಟು ಕೇಳುವ ಸಾಧ್ಯತೆ ಇದೆ. ಹಾಗೆಯೇ, ಮುಂಬೈ-ಕರ್ನಾಟಕ ಹಾಗೂ ಹೈದರಾಬಾದ್-ಕರ್ನಾಟಕ ಪ್ರದೇಶಗಳಲ್ಲೂ ಕೆಲವು ಸೀಟುಗಳಿಗೆ ಜೆಡಿಎಸ್ ಬೇಡಿಕೆ ಮುಂದಿಡಬಹುದು.

ಇನ್ನು, ಲೋಕಸಭೆ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚಿಸಲು ಜನವರಿ 29 ಮತ್ತು 30ರಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತದೆ. ಇದಕ್ಕೂ ಮುನ್ನ ಜನವರಿ 3ರಂದು ಜೆಡಿಎಸ್ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ಸಂಪುಟದಲ್ಲಿ ಜೆಡಿಎಸ್ ಪಾಲಿಗೆ ಉಳಿದಿರುವ 2 ಸಚಿವಸ್ಥಾನಗಳಿಗೆ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಆಯ್ಕೆ ನಡೆಸಲು ಈ ಸಭೆಯಲ್ಲೇ ಚರ್ಚಿಸಲಾಗುವುದು ಎಂದು ದೇವೇಗೌಡರು ತಿಳಿಸಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ಪಕ್ಷದಲ್ಲಿ ಎದುರಾಗಿರುವ ಭಿನ್ನಮತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿಗಳು, ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಸರಕಾರ ಸರಾಗವಾಗಿ ನಡೆಯುತ್ತಿದೆ ಎಂದು ಮಾಜಿ ಪ್ರಧಾನಿಗಳು ಹೇಳಿದ್ಧಾರೆ.

ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ, ಹಾಸನ ಲೋಕಸಭಾ ಕ್ಷೇತ್ರವು ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಡಲಿರುವುದರ ಸುಳಿವನ್ನು ಗೌಡರೇ ನೀಡಿದ್ದಾರೆ. ತಾನು 58 ವರ್ಷಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಕ್ಷೇತ್ರದೊಂದಿಗೆ ಬೆರೆತಿದ್ದೇನೆ. ಆ ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಪ್ರೀತಿ ಮತ್ತು ಗೌರವ ಇದೆ. ಆದರೆ ಹಾಗಂತ ತಾನು ಮುಂದುವರಿಯಲು ಸಾಧ್ಯವಿಲ್ಲವಲ್ಲ. ಪ್ರಜ್ವಲ್ ರೇವಣ್ಣ 8 ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ದೇವೇಗೌಡರು ತಮ್ಮ ಮೊಮ್ಮಗನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ತಾನು ಬೆಂಗಳೂರು ಉತ್ತರ ಅಥವಾ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂಬ ಸುದ್ದಿಯನ್ನು ದೇವೇಗೌಡರು ಇನ್ನೂ ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ತನಗೆ ವಯಸ್ಸಾಗಿದ್ದು, ಆರೋಗ್ಯ ಸರಿಯಿಲ್ಲ ಎಂದು ಅವರು ಹೇಳಿದ್ದಾರಾದರೂ 2019ರ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂದು ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ಗೌಡರು ಹೇಳಿದ್ದಾರೆ.

ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಸುದ್ದಿಗಳು ನಿನ್ನೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು. ಬಿಜೆಪಿ ಸಂಸದ ಪ್ರತಾಪ್ ಸಿಂಹ ಬಳಿ ಖುದ್ದು ದೇವೇಗೌಡರೇ ತಮ್ಮ ಮನದಿಂಗಿತವನ್ನು ತಿಳಿಸಿದ್ದರೆನ್ನಲಾಗಿದೆ.

Comments are closed.