ಕರ್ನಾಟಕ

ಭ್ರಷ್ಟ ಸಚಿವರನ್ನೂ ಬಿಡದೇ ಹೆಡೆಮುರಿ ಕಟ್ಟಿದ ಅಧಿಕಾರಿ ಮಧುಕರ್​ ಶೆಟ್ಟಿ

Pinterest LinkedIn Tumblr


ಅದು ಚಿಕ್ಕಮಗಳೂರು ತೀರಾ ಹಿಂದುಳಿದ ಕುಗ್ರಾಮ. 2006ರಲ್ಲಿ ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ವಾಸವಿದ್ದ 32 ದಲಿತ ಕುಟುಂಬಗಳನ್ನು ಸರ್ಕಾರ ಒಕ್ಕಲೆಬ್ಬಿಸಿತು. ಇದ್ದ ನೆಲೆ ಕಳೆದುಕೊಂಡು ಕಂಗೆಟ್ಟ ಆ ಜನರಿಗೆ ಮುಂದೇನು ಮಾಡಬೇಕೆಂಬ ದಿಕ್ಕೇ ತೋಚಲಿಲ್ಲ. ಇದೇ ಕೊರಗಿನಲ್ಲಿ ಅವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮನೆ, ನೆಲ ಎಲ್ಲವನ್ನೂ ಕಳೆದುಕೊಂಡ ಜನರು ಕೊನೆಗೆ ಶವದೊಂದಿಗೆ ಪ್ರತಿಭಟನೆ ಆರಂಭಿಸಿದರು. ಆಗ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದವರು ಹರ್ಷಗುಪ್ತಾ ಮತ್ತು ಎಸ್​ಪಿ ಆಗಿದ್ದವರು ಮಧುಕರ್​ ಶೆಟ್ಟಿ. ಈ ಬಡ ಕುಟುಂಬಗಳ ಹೀನಾಯ ಪರಿಸ್ಥಿತಿಯನ್ನು ಕಂಡ ಇಬ್ಬರು ಅಧಿಕಾರಿಗಳು ಅವರಿಗೆ ನೆಲೆ ಕಲ್ಪಿಸಿಕೊಡುವ ಆಶ್ವಾಸನೆ ನೀಡಿದರು.

ಅದರಂತೆ ಅದೇ ಭಾಗದಲ್ಲಿ ಬೈರೇಗೌಡ ಎಂಬ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದ 243 ಎಕರೆ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ, ನೆಲೆ ಕಳೆದುಕೊಂಡು ಅಲೆಮಾರಿಗಳಾಗಿದ್ದ 32 ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಒಟ್ಟು 64 ಎಕರೆ ಭೂಮಿಯನ್ನು ಹಂಚಿಕೆ ಮಾಡಿದರು. ಇವರು ಮಾಡಿದ ಸಹಾಯಕ್ಕಾಗಿ ಆ ಜನರು ತಮ್ಮ ಹಳ್ಳಿಗೆ ಈ ಇಬ್ಬರು ಅಧಿಕಾರಿಗಳ ಹೆಸರನ್ನು ಸೇರಿಸಿ, ಗುಪ್ತಶೆಟ್ಟಿ ಹಳ್ಳಿ ಎಂದು ಹೆಸರಿಟ್ಟರು. ಇಂದಿಗೂ ಆ ಊರು ಇದೇ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಮತ್ತು ತಮಗೆ ನೆಲೆ ಒದಗಿಸಿಕೊಟ್ಟ ದಿಟ್ಟ ಅಧಿಕಾರಿ ಸಾವಿಗೆ ಮಮ್ಮಲ ಮರುಗಿ, ಇಡೀ ಊರಿಗೆ ಊರೇ ಶ್ರದ್ಧಾಂಜಲಿ ಅರ್ಪಿಸಿದೆ.

ಮಧುಕರ ಶೆಟ್ಟಿ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದು, (2005 ಆಗಸ್ಟ್​ನಿಂದ 2006 ಏಪ್ರಿಲ್​ವರೆಗೆ) ಕೇವಲ ಎಂಟು ತಿಂಗಳು ಮಾತ್ರ. ಇದ್ದ ಈ ಕಡಿಮೆ ಅವಧಿಯಲ್ಲಿ ಜಿಲ್ಲೆಯ ಜನ ಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತಹ ಕೆಲಸವನ್ನೇ ಅವರು ಮಾಡಿದ್ದರು. ಭ್ರಷ್ಟರ ಹೆಡೆಮುರಿ ಕಟ್ಟಿ, ಬಡಜನರ ಪಾಲಿಗೆ ಆಶಾಗೋಪುರವಾಗಿ ನಿಂತವರು.

ಇದಕ್ಕೂ ಚಾಮರಾಜನಗರ ಎಸ್​ಪಿಯಾಗಿದ್ದಾಗಲೂ ಮಧುಕರ ಶೆಟ್ಟಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮ ಕರಿಕಲ್ಲು, ಮರಳು ಸಾಗಣೆಗೆ ಬ್ರೇಕ್ ಹಾಕಿದ್ದರು. ಅಲ್ಲದೇ, ಮಟ್ಕಾ ದಂಧೆ, ಅಕ್ರಮ ಮದ್ಯ ಮಾರಾಟ ಇವುಗಳ ಹೆಡೆಮುರಿ ಕಟ್ಟಿದ್ದರು.

2009ರಲ್ಲಿ ಲೋಕಾಯುಕ್ತ ಎಸ್​ಪಿಯಾಗಿ ಬಂದ ಬಳಿಕ ಮಧುಕರ ಶೆಟ್ಟಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದರು. ಇಬ್ಬರು ಪೊಲೀಸ್​ ವರಿಷ್ಠಾಧಿಕಾರಿಗಳು ಲಂಚ ಸ್ವೀಕರಿಸುವಾಗ ಅವರನ್ನು ರೆಡ್ ಹ್ಯಾಂಡ್​ ಆಗಿ ಹಿಡಿದು, ಜೈಲಿಗೆ ಅಟ್ಟಿದ ಖಡಕ್ ಅಧಿಕಾರಿ.

Comments are closed.