ಕರ್ನಾಟಕ

ಸಾಲ ಬಾದೆ ತಾಳದೆ ದಯಾಮರಣಕ್ಕೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ರೈತ ಕುಟುಂಬ

Pinterest LinkedIn Tumblr


ಮಹಾಲಿಂಗಪುರ: ಪಡೆದ ಸಾಲಕ್ಕೆ ಸಹಕಾರಿ ಬ್ಯಾಂಕ್ ಸಿಬ್ಬಂದಿ ನೀಡುತ್ತಿರುವ ಕಿರುಕುಳ ತಾಳದೇ ಇಡೀ ಕುಟುಂಬವೇ ಆತ್ಮಹತ್ಯೆೆಗೆ ಸಿದ್ಧವಾಗಿದ್ದು, ದಯಾಮರಣ ಕೋರಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಪತ್ರ ಬರೆದ ಘಟನೆ ಮಹಾಲಿಂಗಪುರದಲ್ಲಿ ಬೆಳಕಿಗೆ ನಡೆದಿದೆ.

ಸ್ಥಳೀಯ ಹ್ಯಾಗಡಿ ಪ್ಲಾಟ್ ನಿವಾಸಿ, ಚೆನ್ನಮ್ಮ ವೃತ್ತದಲ್ಲಿ ಬಸವಗೋಪಾಲ ಖಾನಾವಳಿ ನಡೆಸಿ ಜೀವನ ಸಾಗಿಸುತ್ತಿರುವ ಮಹಿಳೆ ಮಲ್ಲವ್ವ ಯಮನಪ್ಪ ನಿಂಗನೂರ ಅವರ ಕುಟುಂಬದ ಹತ್ತೂ ಜನ ಸದಸ್ಯರು ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ರಬಕವಿ ಶಾಖೆ ಸಿಬ್ಬಂದಿ ನೀಡುತ್ತಿರುವ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ನಿರ್ಧರಿಸಿ ರಬಕವಿ-ಬನಹಟ್ಟಿ ತಹಸೀಲ್ದಾರ್‌ರಿಗೆ ಪತ್ರ ಬರೆದಿದ್ದಾರೆ.

ಸಂತ್ರಸ್ತೆ ಮಲ್ಲವ್ವ ಅವರ ಪತಿ ಯಮನಪ್ಪ ಚಿನ್ನಪ್ಪ ನಿಂಗನೂರ 2012ರಲ್ಲಿ ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ರಬಕವಿ ಶಾಖೆಯಲ್ಲಿ 1.5 ಎಕರೆ ಜಮೀನಿನ ಮೇಲೆ ಒಟ್ಟು 5 ಲಕ್ಷ ರು. ಸಾಲ ಮಾಡಿದ್ದರು. ಅದೇ ವರ್ಷ ಮಲ್ಲವ್ವ ಅವರ ಪತಿ ಯಮನಪ್ಪ ಕ್ಯಾನ್ಸರ್, ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ 4 ಲಕ್ಷ ರು. ಖರ್ಚು ಮಾಡಿ ತೀರಿಕೊಂಡಿದ್ದಾರೆ.

‘ಬ್ಯಾಂಕಿನವರು ಅಸಲು, ಬಡ್ಡಿ, ಇತರೆ ಖರ್ಚು ಸೇರಿ 8.60 ಲಕ್ಷ ರು. ಪಾವತಿಸಲು ಪದೇ ಪದೆ ನೋಟೀಸ್ ನೀಡಿದ್ದಲ್ಲದೇ ಮನೆ ಬಳಿ ಬಂದು ಜಗಳ ಮಾಡಿ ಮಾನಹಾನಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪದೇ ಪದೆ ಹುಬ್ಬಳ್ಳಿಯ ಪ್ರಾಂತೀಯ ಕಚೇರಿಗೆ ಕರೆಸಿ ಹಿಂಸೆ ನೀಡುತ್ತಿದ್ದಾರೆ.

ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ನಿರ್ಧರಿಸಿದ್ದು, ದಯಾಮರಣ ನೀಡಬೇಕು’ ಎಂದು ಪತ್ರ ಬರೆದು ರಬಕವಿ-ಬನಹಟ್ಟಿ ತಹಸೀಲ್ದಾರ್, ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗಳಿಗೆ ಅಸಹಾಯಕ ಕುಟುಂಬದೊಂದಿಗೆ ನಿರ್ದಾಕ್ಷೀಣ್ಯವಾಗಿ ವರ್ತಿಸುತ್ತಿರುವ ಬ್ಯಾಂಕ್ ಕ್ರಮವನ್ನು ರಾಜ್ಯ ರೈತ ಸಂಘ ಹಾಗೂ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ ಸೇರಿದಂತೆ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.

ಸರಕಾರ ನಮಗೆ ಸಾಲ ಮರುಪಾವತಿಸಲು ಕಾಲಾವಕಾಶ, ರಿಯಾಯಿತಿ ನೀಡಬೇಕು. ಇಲ್ಲವೇ ಸಾಮೂಹಿಕ ಸಾವಿಗೆ ದಯಾಮರಣದ ಭಿಕ್ಷೆ ನೀಡಬೇಕು.
– ಮಲ್ಲವ್ವ ಯಮನಪ್ಪ ನಿಂಗನೂರ

Comments are closed.