ಕರ್ನಾಟಕ

ಬಳ್ಳಾರಿಯಲ್ಲಿ ಚಿರತೆಗೆ ಎರಡನೇ ಮಗು ಬಲಿ; ಪೋಷಕರ ಕಣ್ಮುಂದೆಯೇ ಮಗುವನ್ನು ಹೊತ್ತೊಯ್ದ ನರಭಕ್ಷಕ

Pinterest LinkedIn Tumblr


ಬಳ್ಳಾರಿ: ಆ ಭಾಗದ ಜನರೆಲ್ಲ ರಾತ್ರಿಯೆಲ್ಲ ಮತ್ತೆ ನಿದ್ರೆಗೆಡಬೇಕಾಗಿದೆ. ಯಾವಾಗ ಆ ನರಭಕ್ಷಕ ಚಿರತೆ ಮತ್ತೆ ಬಂದು ನಮ್ಮ ಮಕ್ಕಳನ್ನು ಹೊತ್ತೊಯ್ದುಬಿಡುತ್ತೋ ಎಂದು ಭಯಭೀತರಾಗಿದ್ದಾರೆ. ಕಳೆದ 15 ದಿನಗಳಿಂದ ಗ್ರಾಮಸ್ಥರು ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಇನ್ನಿಲ್ಲದ ಹರಸಾಹಸ ಪಟ್ಟಿದ್ದರು. ಕೊನೆಗೂ ಒಂದು ಚಿರತೆ ಬೋನಿಗೆ ಬಿದ್ದಿತ್ತು. ಆದರೆ ಸೆರೆ ಸಿಕ್ಕಿದ್ದು ಮ್ಯಾನ್ ಹಂಟರ್ ಚಿರತೆಯಲ್ಲ ಎನ್ನುವುದು ಮತ್ತೊಂದು ಮಗು ಬಲಿಯಾದ ಮೇಲೆಯೇ ಖಾತ್ರಿಯಾಗುತ್ತಿದೆ.

ಒಬ್ಬರಲ್ಲ, ಇಬ್ಬರು ಎಳೆ ಕಂದಮ್ಮಗಳನ್ನು ಚಿರತೆ ಹೊತ್ತೊಯ್ದು ಬಲಿ ತೆಗೆದುಕೊಂಡಿದೆ. 15 ದಿನಗಳ ಹಿಂದೆ ಚಿರತೆಯು ಕಂಪ್ಲಿ ಸಮೀಪದ ಸೋಮಲಾಪುರ ಗ್ರಾಮದಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಹೊತ್ತೊಯ್ದಿತ್ತು. ಕತ್ತಿನಲ್ಲಿ ರಕ್ತ ಹೀರಿ ವೆಂಕಟಸಾಯಿ ಮೃತದೇಹವನ್ನು ಬಿಸಾಡಿ ಚಿರತೆ ತಪ್ಪಿಸಿಕೊಂಡಿತ್ತು. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಬಳ್ಳಾರಿ ಅರಣ್ಯ ಇಲಾಖೆ 11 ದಿನದಲ್ಲಿಯೇ ಚಿರತೆಯೊಂದನ್ನು ಬೋನಿನ ಬಲೆಗೆ ಬೀಳಿಸಿದರು.

ನರಭಕ್ಷಕ ಚಿರತೆಯನ್ನು ಹಿಡಿದರಲ್ಲಾ ಎಂದು ಜನರು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಇಂದು ಸೋಮಲಾಪುರ ಗ್ರಾಮದ ಬಳಿಯೇ ಇರುವ ದೇವಲಾಪುರ ಗ್ರಾಮದ ಹೊಲದಲ್ಲಿ ಕಾಣಿಸಿದ ಬಾಲಕಿ ಜಯಸುಧಾಳನ್ನು ಚಿರತೆ ಹೊತ್ತೊಯ್ದಿದೆ. 10 ವಯಸ್ಸಿನ ಬಾಲಕಿ ಜಯಸುಧಾ ಕತ್ತಿಗೆ ಬಾಯಿ ಹಾಕಿ ಹೊತ್ತೊಯ್ಯುಲು ಶುರುಮಾಡತೊಡಗಿದಾಗ ಗ್ರಾಮಸ್ಥರೆಲ್ಲ ಸೇರಿ ಚಿರತೆಯನ್ನು ಓಡಿಸಿ ಮಗುವನ್ನು ಉಳಿಸುವ ಕೆಲಸ ಮಾಡಿದ್ದಾರೆ. ಸಮೀಪದ ಕಂಪ್ಲಿ ಸರಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಬಾಲಕಿ ಜಯಸುಧಾ ಸಾವನ್ನಪ್ಪಿದ್ದಾಳೆ.

ಮೃತ ಕುಟುಂಬಕ್ಕೆ ಪರಿಹಾರವಾಗಿ ಐದು ಲಕ್ಷ ಚೆಕ್ ನೀಡಲಾಗಿದೆ. ಆದಷ್ಟು ಬೇಗನೆ ಚಿರತೆ ಹಿಡಿಯಲಾಗುವುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಡಾ ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಬಳ್ಳಾರಿ ಡಿಸಿ ಡಾ ರಾಮ್ ಪ್ರಸಾತ್ ಮನೋಹರ್, ಎಸ್ಪಿ ಅರುಣ್ ರಂಗರಾಜನ್, ಡಿಎಫ್ ಓ ಡಾ ರಮೇಶ್ ಕುಮಾರ್ ಹಾಗೂ ಶಾಸಕ ಗಣೇಶ್, ಮಾಜಿ ಶಾಸಕ ಸುರೇಶ್ ಬಾಬು ಸ್ಥಳಕ್ಕೆ ಆಗಮಿಸಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆಗ ದೇವಲಾಪುರ ಗ್ರಾಮಸ್ಥರು ಅಧಿಕಾರಿ, ರಾಜಕಾರಣಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆಂದೂ ಮನುಜರ ರಕ್ತ ಹೀರಿದ್ದಿಲ್ಲ:
ಕಂಪ್ಲಿ ಬಳಿಯ ಸೋಮಲಾಪುರ, ದೇವಲಾಪುರ ಗ್ರಾಮದ ಸುತ್ತಲೂ ಬೆಟ್ಟಗುಡ್ಡಗಳಿವೆ. ಇಲ್ಲಿ ಚಿರತೆ, ಕರಡಿಗಳು ವಾಸಿಸುತ್ತವೆ. ಆಗಾಗ ಗ್ರಾಮದಲ್ಲಿ ಪ್ರತ್ಯಕ್ಷವಾಗುತ್ತವೆಯಾದ್ರೂ ಜನರ ಮೇಲೆ ಇದುವರೆಗೂ ದಾಳಿ ಮಾಡಿದ್ದಿಲ್ಲ. ಕಳೆದ 15 ದಿನಗಳಿಂದ ಸುತ್ತಮುತ್ತಲಿನ ಮಕ್ಕಳ ಮೇಲಿನ ಚಿರತೆ ದಾಳಿಯಿಂದಾಗಿ ಜನತೆ ಭಯಭೀತರಾಗಿದ್ದಾರೆ. ರಾತ್ರಿ ಹೊತ್ತು ಹೊರಗಡೆ ಮಲಗಲು ಹೆದರುತ್ತಾರೆ. ಒಳಗಡೆ ಮಲಗಲು ನಿದ್ರೆಬಾರದೆ ಮಕ್ಕಳನ್ನು ರಕ್ಷಿಸುವುದೇ ದೊಡ್ಡ ಕೆಲಸವಾಗಿಬಿಟ್ಟಿದೆ. ಇದುವರೆಗೆ ಮನುಷ್ಯರ ಮೇಲೆ ದಾಳಿ ಮಾಡದ ಚಿರತೆ ಇತ್ತೀಚೆಗೆ ಮಕ್ಕಳ ರಕ್ತ ಹೀರುತ್ತಿದೆ.

ಕಣ್ಣ ಮುಂದೆ ಹೊಲದಲ್ಲಿದ್ದ ಎರಡನೇ ಮಗಳನ್ನು ಚಿರತೆ ಹೊತ್ತೊಯ್ತುಬಿಟ್ಟಿತು ಎಂದು ತಾಯಿ ವನಜಾಕ್ಷಿ ಮಮ್ಮಲ ಮರಗುತ್ತಾರೆ. ಸೋಮಲಾಪುರದಲ್ಲಿ ಚಿರತೆ ಹಿಡಿಯಲು ಪ್ರಯತ್ನಿಸಿದಂತೆ ಇಲ್ಲಿಯೂ ವಿವಿಧೆಡೆ ಬೋನಿಡಿಲು ಅರಣ್ಯ ಇಲಾಖೆ ಮುಂದಾಗಿದೆ.

ಒಂದರ ಮೇಲೊಂದರಂತೆ ಮಕ್ಕಳನ್ನು ಚಿರತೆ ಟಾರ್ಗೆಟ್ ಮಾಡುತ್ತಿರುವುದು ಪೋಷಕರನ್ನು ಇನ್ನಷ್ಟು ಭಯಭೀತರನ್ನಾಗಿ ಮಾಡಿದೆ. ಮಕ್ಕಳ ಬಲಿ ಪಡೆದ ಮೇಲೆ ಅರಣ್ಯ ಇಲಾಖೆ ಪರಿಹಾರ ನೀಡಿ ತಪ್ಪಿಸಿಕೊಳ್ಳುವ ಬದಲು ಮನುಷ್ಯನ ರಕ್ತದ ರುಚಿ ನೋಡುತ್ತಿರುವ ಚಿರತೆಗಳನ್ನು ಬೇರೆಡೆ ಸ್ಥಳಾಂತರಿಸಿ, ಮಕ್ಕಳ ಜೀವ ಉಳಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

Comments are closed.