ಕರ್ನಾಟಕ

ಗದಗ: ಮೃತ ಬಿಎಸ್ಎಫ್ ಯೋಧ ರಾಜಶೇಖರ್ ಅಡಗತ್ತಿಗೆ ಭಾವಪೂರ್ಣ ವಿದಾಯ

Pinterest LinkedIn Tumblr


ಗದಗ: ಮನೆಯ ನಂದಾದೀಪ ಕಳೆದುಕೊಂಡು ಕಣ್ಣೀರು ಹಾಕ್ತಾಯಿರೋ ಕುಟುಂಬಸ್ಥರು..! ವೀರ ಯೋಧನ ಶೌರ್ಯ, ಸಾಹಸವನ್ನು ನೆನೆದು ಭಾವುಕರಾಗಿರೋ ಗ್ರಾಮಸ್ಥರು….! ಸಹೋದರನ ಸಾವು ನೆನೆದು ಅಸ್ವಸ್ಥರಾಗಿ‌ ಆಸ್ಪತ್ರೆ ಸೇರಿದ ಸಹೋದರ, ಸಹೋದರಿ….! ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನಿಗೆ ಭಾವಪೂರ್ಣ ವಿದಾಯ…! ಹೌದು, ಈ ಎಲ್ಲ ಮನಕಲುಕುವ ದೃಶ್ಯ ಕಂಡು ಬಂದದ್ದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ.

ಸೂಡಿ ಗ್ರಾಮದ ರಾಜಶೇಖರ್ ಅಡಗತ್ತಿ ಬಿಎಸ್​ಎಫ್​ನ ಕೋಲ್ಕತಾ ಬಟಾಲಿಯನ್​ನಲ್ಲಿ ಕರ್ತವ್ಯ‌ ಸಲ್ಲಿಸುತ್ತಿದ್ದರು. ಗೆಳೆಯರ ಪ್ರೀತಿಯ ಮಿತ್ರನಾಗಿದ್ದ, ಹೀಗಾಗಿ ರಾಜಶೇಖರ ಅಂದ್ರೆ ಎಲ್ಲರಿಗೂ ಪ್ರೀತಿ. ಎಂಟು ವರ್ಷದ ಹಿಂದೆ ಶಿಲ್ಪಾ ಜೊತೆ ಸಪ್ತಪದಿ ತುಳಿದಿದ್ದ ರಾಜಶೇಖರಗೆ ಬಹಳ ವರ್ಷದ ನಂತರ ಪುತ್ರ ಜನಿಸಿದ್ದ. ಪುತ್ರ ಪ್ರೀತಮ್ ಅಂದ್ರೆ ತಂದೆಗೆ ಬಲು ಪ್ರೀತಿ. ಡಿಸೆಂಬರ್ 11 ರಂದು ತಡರಾತ್ರಿ ಸಹೋದರ ಮಹಾಂತೇಶ್​ಗೆ ಫೋನ್ ಮಾಡಿದ ಯೋಧ ರಾಜಶೇಖರ್ ಅರ್ಧ ಗಂಟೆ ಮಾತನಾಡಿದ್ದಾರೆ. ಈ ವೇಳೆ ತಾಯಿ, ಪ್ರೀತಿಯ ಪುತ್ರ ಪ್ರೀತಮ್, ಪತ್ನಿ ಶಿಲ್ಪಾ ಹಾಗೂ ‌ಮನೆಯವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸಹೋದರನ ಜೊತೆ ಮಾತನಾಡಿದ ಎರಡು ಗಂಟೆಯಲ್ಲೇ ಯೋಧ ರಾಜಶೇಖರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಅದೇ ಸಹೋದರನ ಫೋನ್​ಗೆ ಅಣ್ಣನ ಸಾವಿನ ಸುದ್ದಿ ಬಂದಿದೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು‌ಮುಟ್ಟಿತ್ತು. ಇಂದು ಮಧ್ಯಾಹ್ನ 2 ಗಂಟೆಗೆ ರಾಜಶೇಖರ್ ಪಾರ್ಥೀವ ಶರೀರ ಸೂಡಿ ಗ್ರಾಮಕ್ಕೆ ‌ಆಗಮಿಸುತ್ತಿದ್ದಂತೆ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ಕಣ್ಣೀರು ಕೋಡಿ ಹರಿಯಿತು. ಬಿಎಸ್​ಎಫ್ ಯೋಧರು ಪಾರ್ಥಿವ ಶರೀರದ ಪೆಟ್ಟಿಗೆ ಮನೆಗೆ ಹೊತ್ತು ತಂದ್ರು.‌ ಮನೆ ಬಳಿ ಯೋಧನ ಪಾರ್ಥಿವ ಶರೀರಕ್ಕೆ ಪೂಜೆ‌ ಮಾಡಿದ, ಬಳಿಕ ಗ್ರಾಮದಲ್ಲಿ ಯೋಧ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು.

34 ವರ್ಷದ ರಾಜಶೇಖರ ಅಡಗತ್ತಿ ಕಳೆದ 14 ವರ್ಷದಿಂದ ಗಡಿಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇವಾವಧಿ ಕೇವಲ ಎರಡು ವರ್ಷ ಮಾತ್ರ ಬಾಕಿ ಇತ್ತು. ಸೇವೆ ಬಳಿಕವೂ ಸೇನೆಯಲ್ಲೇ ಇನ್ನೂ ನಾಲ್ಕು ವರ್ಷ ಸೇವೆ ಮುಂದುವರಿಸುವ ಆಸೆ ಹೊಂದಿದ್ದರು. ದೇಶ ಪ್ರೇಮ ಹೊಂದಿದ್ದ ರಾಜಶೇಖರ್ ಊರಿಗೆ ಬಂದ್ರೆ ಯುವಕರಿಗೆ ಸೇನೆ ಬಗ್ಗೆ ಪಾಠ ಮಾಡ್ತಿದ್ರು. ಸೇನೆಗೆ ಸೇರುವಂತೆ ಪ್ರೇರಣೆ ನೀಡ್ತಿದ್ರು.

ಪಾರ್ಥಿವ ಶರೀರ ಸೂಡಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಜನ ಕಂಬನಿ ಮಿಡಿಯುವ ಮೂಲಕ “ಅಮರ್ ರಹೇ.. ಅಮರ್ ರಹೆ.. ರಾಜಶೇಖರ ಅಮರ್ ರಹೆ” ಎಂದು ಘೋಷಣೆ ಕೂಗಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಬಳಿಕ ಪಾರ್ಥೀವ ಶರೀರವನ್ನು ಗ್ರಾಮ ಪಂಚಾಯತಿ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಯಿತು. ಈ ವೇಳೆ ಜಿಲ್ಲಾಡಳಿತದ ಪರವಾಗಿ ಎಡಿಸಿ ಶಿವಾನಂದ ಗೌರವ ಸಲ್ಲಿಸಿದ್ರು. ಬಿಎಸ್ಎಫ್ ಯೋಧರು, ಸ್ಥಳೀಯ ಪೊಲೀಸರಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವದೊಂದಿಗೆ ಗ್ರಾಮಪಂಚಾಯತಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ರಾಜಶೇಖರ್ ಸಹೋದರ ಮಹಾಂತೇಶ್ ಹಾಗೂ ಸಹೋದರಿ ನಿರ್ಮಲ ಅಸ್ವಸ್ಥಗೊಂಡರು. ಕೂಡಲೇ ಇವರಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.

ವೀರಯೋಧ ರಾಜಶೇಖರ ಅಡಗತ್ತಿ ಹೃದಯಘಾತದಿಂದ ಮರಣ ಹೊಂದಿದ್ದಾರೆ. ಇವರ ಮರಣದಿಂದ ಭಾರತಾಂಬೆಯ ಮಡಿಲು ಮಮ್ಮಲವಾಗಿ ಮರಗಿದ್ದಂತೂ ಸತ್ಯ.

Comments are closed.