ಕರ್ನಾಟಕ

ಸಂಪುಟ ಪುನಾರಚನೆ: ಕಾಂಗ್ರೆಸ್​ನ ಇಬ್ಬರು ಸಚಿವರಿಗೆ ಕೊಕ್?

Pinterest LinkedIn Tumblr


ಬೆಂಗಳೂರು: ಇದೇ ತಿಂಗಳ 22 ರಂದು ಸಚಿವ ಸಂಪುಟ ವಿಸ್ತರಣೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ. ಸಚಿವಾಕಾಂಕ್ಷಿಗಳ ಸಂಖ್ಯೆ ತುಸು ಹೆಚ್ಚೇ ಇದೆ. ಸಚಿವ ಸ್ಥಾನ ಸಿಗದ ಅತೃಪ್ತರು ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ಅವರನ್ನು ಸಮಾಧಾನಪಡಿಸಲು ಕೆಲ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡುವುದು ಕಾಂಗ್ರೆಸ್​ಗೆ ಅನಿವಾರ್ಯವಾಗಿದೆ. ಸದ್ಯಕ್ಕೆ ಇಬ್ಬರು ಸಚಿವರನ್ನು ಕಾಂಗ್ರೆಸ್ ಶಾರ್ಟ್​ಲಿಸ್ಟ್ ಮಾಡಿದೆ. ಅರಣ್ಯ ಸಚಿವ ಆರ್. ಶಂಕರ್​ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಅವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ಕೊಡುವ ಬಗ್ಗೆ ಕೈ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ಸ್ಥಾನಗಳನ್ನು ಕೈಬಿಟ್ಟರೆ ಎರಡು ಸ್ಥಾನ ಖಾಲಿಯಾಗುತ್ತವೆ. ಜಯಮಾಲ ಅವರನ್ನು ಕೈಬಿಟ್ಟರೆ ದಲಿತ ಎಡಗೈ ಕೋಟಾದಡಿ ರೂಪಾ ಶಶಿಧರ್​ ಅಥವಾ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್​ ಅವರಿಗೆ ನೀಡಲಾಗುತ್ತದೆ. ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ನಂತರ ಕೈ ಬಿಡುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ಶಂಕರ್ ಪಕ್ಷೇತರ ಶಾಸಕ. ಕಾಂಗ್ರೆಸ್ ಕೋಟಾದಡಿ ಮಂತ್ರಿ ಮಾಡಲಾಗಿದೆ. ಇದಕ್ಕೂ ಮೊದಲೇ ಕಾಂಗ್ರೆಸ್ ಸದಸ್ಯತ್ವ ತೆಗೆದುಕೊಳ್ಳುವಂತೆ ಕೈ ನಾಯಕರು ಒತ್ತಡ ಹಾಕಿದ್ದರು. ಸದಸ್ಯತ್ವ ತೆಗೆದುಕೊಂಡರೆ ಸಚಿವ ಸ್ಥಾನ ಮುಂದುವರೆಸಲಾಗುವುದು. ಇಲ್ಲದಿದ್ದರೆ ಕಷ್ಟ ಎಂದು ಕಾಂಗ್ರೆಸ್​ ನಾಯಕರು ಹೆದರಿಸಿದ್ದರು. ಕೈ ನಾಯಕರ ಬೆದರಿಕೆಗೆ ಆರಂಭದಲ್ಲಿ‌ ಶಂಕರ್​ ಅವರು ಒಪ್ಪಿದ್ದರು. ನಂತರ ಕಾಂಗ್ರೆಸ್ ಕೋ ಮೆಂಬರ್ ಆಗಲು ಹಿಂದೇಟು ಹಾಕಿದ್ದರು.

ಜಯಮಾಲ ಮೊದಲ ಬಾರಿಗೆ ಎಂಎಲ್ಸಿ ಆಗಿದ್ದು, ಅವರಿಂದ ಪಕ್ಷಕ್ಕೆ ಯಾವುದೇ ರೀತಿಯ ಕೊಡುಗೆ ಇಲ್ಲ. ಅವರಿಂದ ಪಕ್ಷಕ್ಕೆ ಲಾಭವೂ ಇಲ್ಲ. ಜಯಮಾಲ ಬದಲು ಮಹಿಳಾ ಶಾಸಕಿಯೊಬ್ಬರಿಗೆ ಅವಕಾಶ ನೀಡಲಿ ಎಂದು ಕೈ ನಾಯಕರ ನಡುವೆ ಚರ್ಚೆ ನಡೆದಿದೆ.

ಸಂಪುಟದಿಂದ ನನ್ನನ್ನು ಕೈಬಿಟ್ಟರೂ ಒಪ್ಪಿಕೊಳ್ತೇನೆ; ಜಮೀರ್​

ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಸಹ ಅಲ್ಪ ಸಂಖ್ಯಾತರಿಗೆ 2 ಸ್ಥಾನ ನೀಡಬೇಕು ಎಂದು ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಇದೇ ಡಿಸೆಂಬರ್ 22 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಹೈ ಕಮಾಂಡ್ ತೀರ್ಮಾನಕ್ಕೆ ತಾವು ಬದ್ದ ಎಂದಿದ್ದಾರೆ.

22 ಕ್ಕೆ ಸಂಪುಟ ವಿಸ್ತರಣೆ ಆಗೇ ಆಗುತ್ತದೆ. ಹೆಚ್ಚುವರಿಯಾಗಿ ಖಾತೆ ಬದಲಾವಣೆ ಮಾಡಿದಲ್ಲಿ ತಮಗೆ ಸಮಸ್ಯೆ ಇಲ್ಲ. ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 80 ಸ್ಥಾನ ಬಂದಿದೆ ಎಂದರೆ ಅದಕ್ಕೆ ಅಲ್ಪಸಂಖ್ಯಾತ ಸಮುದಾಯವೂ ಕಾರಣ ಎಂದಿರುವ ಅವರು ಅಲ್ಪಸಂಖ್ಯಾತರಿಗೆ ಮಾನ್ಯತೆ ನೀಡಲು ಆಗ್ರಹಿಸಿದ್ದಾರೆ.

Comments are closed.