ಕರ್ನಾಟಕ

ದತ್ತಜಯಂತಿಗೆ ಚಾಲನೆ; 11 ದಿನಗಳ ಕಾಲ ಸಡಗರ ಮತ್ತು ಆತಂಕ

Pinterest LinkedIn Tumblr


ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಹಾಗೂ ಹಿಂದೂ-ಮುಸ್ಲಿಮರ ವಿವಾದಿತ ಕೇಂದ್ರವಾಗಿರುವ ಇನಾಂ ದತ್ತಾತ್ರೇಯ ಪೀಠದಲ್ಲಿ 11 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಇಂದು ಅಧಿಕೃತ ಚಾಲನೆ ದೊರೆತಿದೆ. ವಿಹೆಚ್​ಪಿ ಹಾಗೂ ಬಜರಂಗದಳ ನೇತೃತ್ವದ ದತ್ತಜಯಂತಿಗೆ ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ 5,000 ಕ್ಕೂ ಅಧಿಕ ಭಕ್ತರು ಮಾಲೆ ಧರಿಸಿದ್ದಾರೆ. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಬಜರಂಗದಳದ ಮುಖಂಡರು ಹಾಗೂ 150ಕ್ಕೂ ಹೆಚ್ಚು ಕಾರ್ಯಕರ್ತರು ಮಾಲಾಧಾರಿಗಳಾದರು. ಮಾಲೆ ಧರಿಸಿದ ಬಳಿಕ ಭಕ್ತರು ದೇವಾಲಯದಲ್ಲಿ ಹೋಮ-ಹವನ, ಭಜನೆ ನಡೆಸಿದ್ರು. ಡಿಸೆಂಬರ್ 20ರಂದು ನಗರದಲ್ಲಿ ಅನುಸೂಯ ಜಯಂತಿ, 12ರಂದು ಬೃಹತ್ ಶೋಭಾಯಾತ್ರೆ ಹಾಗೂ 22ರಂದು ದತ್ತಪೀಠಕ್ಕೆ ತೆರಳಿ ಪೂಜೆ ನಡೆಸಿ ಭಕ್ತರೆಲ್ಲಾ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

ಇಂದು ಚಿಕ್ಕಮಗಳೂರಿನಲ್ಲಿ ಮಾತ್ರವಲ್ಲದೇ ಹೊರ ಜಿಲ್ಲೆಗಳಲ್ಲೂ 5 ಸಾವಿರಕ್ಕೂ ಅಧಿಕ ಭಕ್ತರು ಮಾಲೆ ಧರಿಸಿದ್ದಾರೆ. ದತ್ತಭಕ್ತರು ಇಂದಿನಿಂದ 11 ದಿನಗಳ ಕಾಲ ವ್ರತಾಚರಣೆಯಲ್ಲಿರುತ್ತಾರೆ. ಇದೀಗ, ದತ್ತಪೀಠದ ವಿವಾದ ಸುಪ್ರೀಂ ಕೋರ್ಟ್‍ನಿಂದ ರಾಜ್ಯ ಸರ್ಕಾರದ ಅಂಗಕ್ಕೆ ಬಂದಿದ್ದು, ಕೂಡಲೇ ಸರ್ಕಾರ ದತ್ತಪೀಠವನ್ನು ಹಿಂದೂಗಳ ಪೀಠವೆಂದು ಘೋಷಿಸಬೇಕೆಂಬ ಕೂಗು ಎಂದಿನಂತೆಯೇ ಕೇಳಿಬಂದಿದೆ. ಕೂಡಲೇ ಸರ್ಕಾರ ವಿವಾದಕ್ಕೆ ಮುಕ್ತಿ ಹಾಡಬೇಕು. ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ಮಾಡಿ, ಹಿಂದೂ ಅರ್ಚಕರನ್ನ ನೇಮಿಸಬೇಕು ಹಾಗೂ ಪೀಠದಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕೆಂದು ದತ್ತಭಕ್ತರು ಒತ್ತಾಯಿಸ್ತಿದ್ದಾರೆ. ಇತ್ತ ಸರ್ಕಾರ ಹಾಗೂ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಿದೆ. ಕಳೆದ ವರ್ಷ ಗಲಾಟೆಯಾಗಿದ್ದರಿಂದ ಈ ವರ್ಷ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತಕ್ರಮ ಕೈಗೊಳ್ಳಲಾಗಿದೆ.

ಒಟ್ಟಾರೆ, ಇನ್ನು ಹನ್ನೊಂದು ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರು ಬೂದಿ ಮುಚ್ಚಿದ ಕೆಂಡದಂತಿರುತ್ತೆ. 16ನೇ ತಾರೀಖಿನಿಂದ ರಥಯಾತ್ರೆಗೂ ಜಿಲ್ಲಾಡಳಿತ ಅನುಮತಿ ನೀಡಿದ್ದು, ರಥಯಾತ್ರೆಯು ಜಿಲ್ಲೆಯ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾಗಿ ಸಭೆ ನಡೆಸಲಿದೆ. ಹಾಗಾಗಿ, ಪೊಲೀಸರು ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ. ಅದೇನೇ ಇದ್ದರು, ದತ್ತಜಯಂತಿ ಶಾಂತಿಯುತವಾಗಿ ಮುಗಿದರೆ ಸಾಕು ಅಂತಿದ್ದಾರೆ ಸ್ಥಳಿಯರು ಹಾಗೂ ಪೊಲೀಸರು.

Comments are closed.