ಕರ್ನಾಟಕ

ರೈತರಿಗೆ ಬಾಕಿ ಹಿನ್ನೆಲೆ, ಸಕ್ಕರೆ ಕಾರ್ಖಾನೆಯ ಆಸ್ತಿ ಮಾರಾಟಕ್ಕೆ ನಿರ್ಬಂಧ

Pinterest LinkedIn Tumblr


ಬಳ್ಳಾರಿ: ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆಯು ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬೆಲೆಯನ್ನು ಪಾವತಿ ಮಾಡದೇ ಇರುವುದರಿಂದ ಮಾಲೀಕರು ಅದರ ಆಸ್ತಿಯನ್ನು ಮಾರಾಟ ಮಾಡದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಆದೇಶ ಹೊರಡಿಸಿದ್ದಾರೆ.

ಸಿರುಗುಪ್ಪ ತಾಲೂಕಿನ ದೇಶನೂರಿನಲ್ಲಿರುವ ಎನ್.ಎಸ್.ಎಲ್. ಶುಗರ್ಸ್ ಕಾರ್ಖಾನೆಗೆ ಕಾಯ್ದಿರಿಸಿದ ಪ್ರದೇಶದಲ್ಲಿ ಕಬ್ಬು ಬೆಳೆದ ರೈತರಿಗೆ 2017-18ನೇ ಸಾಲಿನಲ್ಲಿ ಸುಮಾರು 3.07 ಕೋಟಿ ರೂ.ಗಳ ಪಾವತಿ ಮಾಡಲು ಬಾಕಿ ಇದೆ. ಈ ಕಾರ್ಖಾನೆಯನ್ನು ರೈತರಿಗೆ ಸುಸ್ತಿ ಬಾಕಿದಾರನೆಂದು ಪರಿಗಣಿಸಲಾಗಿದೆ. ಆದ್ದರಿಂದ ಕಬ್ಬಿನ ಬಾಕಿ ಹಣವನ್ನು ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡಲು ಮತ್ತು ಕಬ್ಬು ನಿಯಂತ್ರಣ ಆದೇಶ 1966ರ ಕ್ಲಾಸ್(3)ರಂತೆ ಬಾಕಿ ಇರುವ ರೈತರಿಗೆ ಬಾಕಿ ಮೊತ್ತವನ್ನು ಪಾವತಿ ಮಾಡಲು ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಸಿರಗುಪ್ಪ ತಹಸೀಲ್ದಾರರಿಗೆ ಸೂಚಿಸಿದ್ದಾರೆ.

ಭೂ ಕಂದಾಯ ಕಾಯ್ದೆ 1964 ಕಲಂ 190ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, “3.07 ಕೋಟಿ ಬಾಕಿ ಮೊತ್ತ ಮತ್ತು ಸದರಿ ಬಾಕಿ ದಿನಾಂಕದಿಂದ ಅದರ ಮೇಲಿನ ಶೇ.15ರ ಬಡ್ಡಿ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಲಾಗಿದ್ದು, ಅದನ್ನು ಕಾರ್ಖಾನೆಯಿಂದ ವಸೂಲಿ ಮಾಡಿ ರೈತರಿಗೆ ಪಾವತಿ ಮಾಡಬೇಕು. ರೈತರಿಗೆ ಹಣ ಪಾವತಿಸಿದ ವಿವರಗಳನ್ನು ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು” ಎಂದು ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅನೇಕ ಸಭೆಗಳನ್ನು ನಡೆಸಿ, ಕಾರ್ಖಾನೆಯ ಆಡಳಿತ ಮಂಡಳಿಗೆ ಸದರಿ ಬಾಕಿ ಪಾವತಿಸುವಂತೆ ಎಷ್ಟೇ ಮನವೊಲಿಸಿದರೂ ಎನ್​ಎಸ್​.ಎಲ್. ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಹಣದ ಪಾವತಿಯಾಗಿಲ್ಲವೆನ್ನಲಾಗಿದೆ.

ಈ ಕಾರ್ಖಾನೆಯು ದೇಶನೂರು ಗ್ರಾಮದಲ್ಲಿ ಒಟ್ಟು 141.97 ಎಕರೆ ಜಮೀನುಗಳನ್ನು ಹೊಂದಿದ್ದು ಯಾವಾಗ ಬೇಕಾದರೂ ಈ ಜಮೀನು ಮಾರಾಟ ಮಾಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಹಾಗೂ ಆಯುಕ್ತರು ಈ ಬಾಕಿ ಮೊತ್ತವನ್ನು ಭೂ ಕಂದಾಯ ಬಾಕಿಯಂತೆ ಪರಿಗಣಿಸಿ ವಸೂಲಿ ಮಾಡಲು ಕ್ರಮ ಜರುಗಿಸುವಂತೆ ನಿರ್ದೆಶನ ನೀಡಿದ್ದು, ಅದರನ್ವಯ ಈ ಆದೇಶ ಹೊರಡಿಸಲಾಗಿದೆ.

Comments are closed.