ಕರ್ನಾಟಕ

ಬಾಲಿವುಡ್ ಚಿತ್ರ ಪ್ಯಾಡ್​ಮ್ಯಾನ್ ನಿಂದ ಬದಲಾದ ಈ ಮಹಿಳೆಯ ಜೀವನ

Pinterest LinkedIn Tumblr


ಕೊಪ್ಪಳ: ಸಿನಿಮಾ ಒಂದು ಪ್ರಬಲ ಮಾಧ್ಯಮ. ಹೀರೋಗಳನ್ನ ನೋಡಿ ಎಷ್ಟೋ ಜನ ಹೇರ್ ಸ್ಟೈಲ್‍ ಬದಲಾಯಿಸೋದನ್ನ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಬದುಕನ್ನೇ ಬದಲಾಯಿಸಿಕೊಂಡಿದ್ದಾರೆ. ಎಷ್ಟೋ ಜನರ ಬಾಳಿಗೆ ಬೆಳಕು ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡದ ಬಂಗಾರದ ಮನುಷ್ಯ ಸಿನಿಮಾ ನೋಡಿ ಕೃಷಿಯಿಂದ ವಿಮುಖರಾಗಿದ್ದ ಅದೆಷ್ಟೋ ಜನರು ಒಕ್ಕಲುತನದತ್ತ ಮುಖ ಮಾಡಿದ್ದರು. ಇತ್ತೀಚೆಗೆ ಜೀವನೋತ್ಸಾಹ ಮೂಡಿಸುವ ಸಿನಿಮಾಗಳು ಬರೋದು ತೀರಾ ಅಪರೂಪ. ಕಳೆದ ವರ್ಷ ಬಿಡುಗಡೆಗೊಂಡ ಅಕ್ಷಯಕುಮಾರ್ ಅಭಿನಯದ ಹಿಂದಿ ಸಿನಿಮಾ “ಪ್ಯಾಡ್ ಮ್ಯಾನ್” ಬದುಕಿನ ಭರವಸೆ ಮೂಡಿಸೋ ಸಿನಿಮಾ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಸದ್ದು ಮಾಡಿತು ಎಂಬುದನ್ನ ಬದಿಗಿಟ್ಟು ನೋಡೋದಾದ್ರೆ ಸಾಕಷ್ಟು ಜನರಿಗೆ ಬೆಳಕು ನೀಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಿನಿಮಾ ನೋಡಿದ ಕೊಪ್ಪಳದ ಮಹಿಳೆಯು ನ್ಯಾಪ್‍ಕಿನ್ ಉತ್ಪಾದನಾ ಘಟಕ ಶುರು ಮಾಡಿ, ಹೊಸ ಬದುಕು ರೂಪಿಸಿಕೊಂಡಿದ್ದಾರೆ.

ಏನಿದೆ ಪ್ಯಾಡ್​ಮ್ಯಾನ್​ನಲ್ಲಿ?

ಪ್ಯಾಡ್​ಮ್ಯಾನ್ ಸಿನಿಮಾದಲ್ಲಿ ನಾಯಕಪಾತ್ರಧಾರಿ ಅಕ್ಷಯ್ ಕುಮಾರ್ ತನ್ನ ಹೆಂಡತಿಯ ಮುಟ್ಟಿನ ಸಮಯದಲ್ಲಿ ಕೀಟಾಣುಗಳನ್ನು ಹರಡುವ ಬಟ್ಟೆ ಬಳಸುವಿಕೆ ಕಂಡು ತಾನೇ ಸಾನಿಟರಿ ನ್ಯಾಪಕಿನ್ ತಯಾರಿಸುತ್ತಾನೆ. ಪ್ರಯತ್ನ ಹಲವು ಬಾರಿ ವಿಫಲವಾದ್ರೂ, ಅವಮಾನವಾದ್ರೂ ತಲೆಕೆಡಿಸಿಕೊಳ್ಳದೇ ಮುಂದೊಂದು ದಿನ ಯಾವುದೇ ಅಡ್ಡಪರಿಣಾಮ ಇಲ್ಲದ, ಕೀಟಾಣುರಹಿತ ನ್ಯಾಪಕಿನ್‍ ತಯಾರಿಕೆಗೆ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಗಳಿಸುತ್ತಾನೆ. ಅದನ್ನು ಬಳಸುವಂತೆ ಮಹಿಳೆಯರಿಗೆ, ಸಂಬಂಧಿಕರಿಗೆ, ಸ್ವತಃ ಹೆಂಡತಿಗೆ ಹೇಳಲು ಪಡುವ ಪರಿಪಾಟಲು ಅಷ್ಟಿಷ್ಟಲ್ಲ. ಪ್ಯಾಡ್‍ಮ್ಯಾನ್‍ನ ವಿಚಿತ್ರ ಪ್ರಯತ್ನದಿಂದ ರೋಸಿ ಹೋಗಿ ಹೆಂಡತಿಯೇ ಮನೆ ಬಿಟ್ಟು ಹೋಗುತ್ತಾಳೆ. ಕೊನೆಗೂ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ತಯಾರಿಸಿದ ನ್ಯಾಪ್‍ಕಿನ್ ಎಂಬ ಜನಮನ್ನಣೆ ಗಳಿಸಿದ ಬಳಿಕ ಮೊದಲು ಶಪಿಸಿದವರೆಲ್ಲ ಶ್ಲಾಘಿಸುತ್ತಾರೆ.

ಭಾರತಿ ಗುಡ್ಲಾನೂರು ಅವರಿಗೆ ಸ್ಪೂರ್ತಿಯಾಯ್ತು ಪ್ಯಾಡ್​ಮ್ಯಾನ್:
ಈ ಸಿನಿಮಾದಿಂದ ಪ್ರೇರಣೆ ಪಡೆದ ಕೊಪ್ಪಳದ ಭಾರತಿ ಗುಡ್ಲಾನೂರು ಅವರು ಸ್ವಂತ ಸ್ಯಾನಿಟರಿ ನ್ಯಾಪಕಿನ್‍ ತಯಾರಿಕಾ ಘಟಕ ತೆರೆದಿದ್ದಾರೆ. ಜೊತೆಗೆ ಹಲವರಿಗೆ ಉದ್ಯೋಗ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ. ಪ್ಯಾಡ್‍ ಮ್ಯಾನ್ ಸಿನಿಮಾ ಅವರ ಮೇಲೆ ಎಷ್ಟು ಗಾಢವಾದ ಪರಿಣಾಮ ಬೀರಿದೆ ಎಂದರೆ ಕೊಪ್ಪಳ ಜಿ.ಪಂ. ಸಿಇಒ ಅವರನ್ನು ಭೇಟಿ ಮಾಡಿ, ಜಿಲ್ಲೆಯ ಗ್ರಾಮೀಣ ಪರಿಸರದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮುಟ್ಟಿನ ಸಂದರ್ಭದಲ್ಲಿ ವಹಿಸುವ ಎಚ್ಚರಿಕೆ, ನ್ಯಾಪಕಿನ್ ಬಳಸುವ ರೀತಿ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕೊಪ್ಪಳದ ಗವಿಶ್ರೀನಗರದಲ್ಲಿ “ಸಂಜಿನೇ ಪಿಂಕ್ ಪ್ಯಾಡ್ಸ್”(Sangiene Pink Pads) ಹೆಸರಿನ ಘಟಕ ಆರಂಭಿಸಿ, ‘ಸ್ತ್ರೀ ಸ್ವಾಭಿಮಾನ’ ಹೆಸರಿನ ನ್ಯಾಪಕಿನ್‍ಗಳನ್ನು ತಯಾರಿಸುತ್ತಿರುವ ಭಾರತಿ ಗುಡ್ಲಾನೂರು ಅವರು, ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಮುಟ್ಟಿನ ಸಮಯದಲ್ಲಿ ಬಹಳಷ್ಟು ಮಹಿಳೆಯರು ಕೀಟಾಣು ಹರಡುವ ಬಟ್ಟೆಗಳನ್ನೇ ಬಳಸುವುದನ್ನು ತಡೆಗಟ್ಟಿ, ನ್ಯಾಪಕಿನ್ ಧರಿಸುವ ಶೇ.10ರ ಮಹಿಳೆಯರ ಸಂಖ್ಯೆಯನ್ನು ಶೇ.100ರಷ್ಟು ಮಾಡುವುದನ್ನೇ ಧ್ಯೇಯವಾಗಿರಿಸಿಕೊಂಡಿದ್ದಾರೆ.

ಹಳ್ಳಿಗಳಲ್ಲಿ ಒಂದು ನ್ಯಾಪಕಿನ್ ಕಿಟ್‍ನ ಬೆಲೆ 40 ರೂಪಾಯಿ ಇದ್ದು, ಅದರಲ್ಲಿ 8 ಪ್ಯಾಡ್‍ಗಳಿರುತ್ತವೆ. ಇದನ್ನೇ ಪಟ್ಟಣಪ್ರದೇಶದಲ್ಲಿ 65 ರೂ.ಗೆ ಒಂದರಂತೆ ಮಾರುತ್ತಾರೆ. ನಿತ್ಯ 1,600 ರಿಂದ 2,000 ಕಿಟ್‍ಗಳನ್ನು ತಯಾರಿಸುವ ಭಾರತೀ ಅವರು 8 ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಿ, ಹಲಗೇರಿ, ಓಜಿನಹಳ್ಳಿ ಹಾಗೂ ಕಾಮನೂರು ಹೀಗೆ ನಾಲ್ಕು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮಹಿಳೆಯರಿಗೆ ನ್ಯಾಪ್‍ಕಿನ್ ಬಳಕೆ ಕುರಿತು ಜಾಗೃತಿ ಮೂಡಿಸುವ ಮೂಲಕ ಆರೋಗ್ಯಯುತ ಬದುಕು ರೂಪಿಸಿಕೊಳ್ಳಲು ಕೊಪ್ಪಳ ಜಿಲ್ಲಾ ಪಂಚಾಯಿತಿಯು ಭಾರತಿ ಗುಡ್ಲಾನೂರು ಅವರನ್ನು ಪ್ರೇರಣಾದಾರರನ್ನಾಗಿ ನಿಯೋಜಿಸಿದೆ.

ಮಾರ್ಕೆಟ್‍ಗಳಲ್ಲಿ ಸಿಗುವ ವಿವಿಧ ಕಂಪನಿಗಳ ನ್ಯಾಪ್‍ಕಿನ್‍ಗಳ ಬಳಕೆಯಿಂದ ಕೆಲ ಮಹಿಳೆಯರ ಆರೋಗ್ಯದ ಮೇಲೆ ಅಡ್ಡಪರಿಣಾಮ, ಕೀಟಾಣುಗಳು ಹರಡುವಿಕೆ ಜಾಸ್ತಿ ಇರುವ ಸಾಧ್ಯತೆ ಇರುತ್ತದೆ. ಆದ್ರೆ ಸಂಜಿನೇ ಪಿಂಕ್ ಪ್ಯಾಡ್ಸ್ ಘಟಕದಲ್ಲಿ ವೈಜ್ಞಾನಿಕವಾಗಿ ಪರೀಕ್ಷಿಸಿ ನ್ಯಾಪ್​ಕಿನ್ ಸಿದ್ಧಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಪ್ರೌಢಶಾಲಾ ಮಕ್ಕಳಿಗೆ ಉಚಿತವಾಗಿ ನ್ಯಾಪ್​ಕಿನ್‍ ವಿತರಿಸುವುದು ಮಾತ್ರವಲ್ಲ, ಹಲವರಿಗೆ ಉದ್ಯೋಗ ನೀಡುವ ಭಾರತಿಯವರು ಅಂತಾರಾಷ್ಟ್ರೀಯಮಟ್ಟದಲ್ಲೂ ಹೆಸರು ಗಳಿಸಲಿ ಅಂತಾರೆ ಸ್ಥಳೀಯ ಯುವತಿಯರು.

ಹೀಗೆ, ಒಂದು ಸಿನಿಮಾ ಹೇಗೆ ಬದುಕು ಕಟ್ಟಿಕೊಡುತ್ತೆ ಎಂಬುದಕ್ಕೆ ಭಾರತಿ ಅವರು ಒಂದು ಒಳ್ಳೆಯ ಉದಾಹರಣೆ. ಹೊಡಿ-ಬಡಿ-ಕಡಿ ಸಜ್ಬೆಕ್ಟ್‍ನ ಮನರಂಜನೆಯ ಸಿನಿಮಾಗಳಿಗಿಂತ ಮನಃ ಪರಿವರ್ತನೆಯ ಸಿನಿಮಾಗಳ ಸಂಖ್ಯೆ ಹೆಚ್ಚಾದ್ರೆ ಭಾರತ ದೇಶದ ಪ್ರತಿ ಪ್ರಜೆಯ ಸ್ವಾವಲಂಬಿ ಬದುಕಿಗೆ ಖಂಡಿತವಾಗಿ ಪ್ರೇರಣೆ ಸಿಗುತ್ತೆ. ಕೊಪ್ಪಳದ ಭಾರತಿಯಂಥ ನೀರೆಯರ ಸಂಖ್ಯೆ ಹೆಚ್ಚಾಗಲಿ ಅಂತ ಹಾರೈಸೋಣ.

Comments are closed.