ಕರ್ನಾಟಕ

ರೈತರಿಗೆ ಋಣಮುಕ್ತ ಪತ್ರ: ಚಾಲನೆಗೆ ಬಂದ ಸಾಲ ಮನ್ನಾ ಯೋಜನೆ

Pinterest LinkedIn Tumblr


ದೊಡ್ಡಬಳ್ಳಾಪುರ: ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಚುನಾವಣೆಗೂ ಮುನ್ನ ಆಶ್ವಾಸನೆ ಕೊಟ್ಟಿದ್ದ ಸಿಎಂ ಕುಮಾರಸ್ವಾಮಿ, ಅಧಿಕಾರಕ್ಕೆ ಬಂದ ನಂತರ ಅಳೆದು ತೂಗಿ ರೈತರ 48 ಸಾವಿರ ಕೋಟಿ ರೂ.ಗಳ ಸಾಲ ಮಾಡುವ ಘೋಷಣೆ ಹೊರಡಿಸಿದರು. ಇದನ್ನು ಕಾರ್ಯಗತಗೊಳಿಸಲು ಸಿಎಂ ಮುಂದೆ ಇದ್ದ ಸವಾಲುಗಳು, ಅಡ್ಡಿ ಆತಂಕಗಳು ಒಂದೆರಡಲ್ಲ. ಸಾಲ ಮನ್ನಾ ಘೋಷಣೆ ಕಾಗದದ ಮೇಲಿದೆಯಷ್ಟೇ, ರೈತರಿಗೆ ಯಾವ ದುಡ್ಡೂ ಸಿಕ್ಕಿಲ್ಲ ಎಂದು ವಿಪಕ್ಷಗಳ ನಿರಂತರ ಟೀಕೆಗೆ ನಡುವೆ ಇದೀಗ ಕುಮಾರಸ್ವಾಮಿ ತಾವು ಕೊಟ್ಟ ಮಾತನ್ನು ಅನುಷ್ಠಾನಗೊಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರಿಗೆ ಋಣಮುಕ್ತ ಪತ್ರ ನೀಡುವ ಮೂಲಕ ಸಾಲ ಮನ್ನಾವನ್ನು ಕಾರ್ಯಗತಗೊಳಿಸಿದರು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮೊದಲಾದವರೂ ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.

ಈ ವೇಳೆ, ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರಕಾರವನ್ನು ರೈತ ವಿರೋಧಿ ಎಂದು ಟೀಕಿಸಿದರು.

“ದೆಹಲಿಯಲ್ಲಿ ತಮಿಳುನಾಡಿನ ರೈತರು ಅರೆಬೆತ್ತಲೇ ಪ್ರತಿಭಟನೆ ಮಾಡಿ, ಅವರ ಮೂತ್ರವನ್ನ ಮೈಮೇಲೆ ಮುರಿದುಕೊಂಡು, ಪ್ರತಿಭಟಿಸಿದರು. ಅಲ್ಲದೆ, ಕಳೆದ ವಾರ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಸೌಜನ್ಯಕ್ಕೂ ಕೇಂದ್ರ ಸರಕಾರ ರೈತರನ್ನು ಕರೆಸಿ ಮಾತನಾಡಲಿಲ್ಲ. ಬಿಜೆಪಿಯವರು ರೈತರಿಗೆ ಏನು ಕಿತ್ತುಗುಡ್ಡೆ ಹಾಕಿದ್ದಾರೆ. ಯಾವ ಉದ್ದೇಶದಿಂದ ಬೆಳಗಾವಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ?” ಎಂದು ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇನ್ನು, ಇದೇ ವೇದಿಕೆಯಲ್ಲಿ ಮಾತನಾಡಿದ ಸಚಿವ ಡಿಕೆಶಿ, “ಇಡೀ ದೇಶ, ಕರ್ನಾಟಕ ಸರ್ಕಾರದತ್ತ ನೋಡುತ್ತಿದೆ. ಪಂಚ ರಾಜ್ಯ ಚುನಾವಣೆ ಎದುರಿಸಿದ ರಾಜ್ಯಗಳ ನಾಯಕರೆಲ್ಲಾ ನಮ್ಮ ಸಲಹೆ ಕೇಳಿದ್ದಾರೆ. ಹೇಗೆ ಸಾಲಮನ್ನಾ ಯೋಜನೆ ಮಾಡಿದ್ದೀರಿ..? ಎಂದು ನಮ್ಮನ್ನ ಕೇಳಿದ್ದಾರೆ” ಎಂದು ತಮ್ಮ ಸರಕಾರದ ಸಾಧನೆ ಬಗ್ಗೆ ತೃಪ್ತಿವ್ಯಕ್ತಪಡಿಸಿದರು.

ಒಟ್ಟಾರೆ ಸಾಲ ಮಾಡಿ ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಕೊನೆಗೂ ಸರ್ಕಾರ ಧಾವಿಸಿದೆ. ಬೆಂಗಳೂರು ಗ್ರಾಮಾಂತರವಷ್ಟೇ ಅಲ್ಲ, ಎಲ್ಲಾ ಜಿಲ್ಲೆಗಳಲ್ಲೂ ಸಾಲ ಮನ್ನಾ ಆದವರಿಗೆ ಶೀಘ್ರ ಋಣಮುಕ್ತ ಪತ್ರ ನೀಡಿ ರೈತರ ನೆರವಿಗೆ ಸರ್ಕಾರ ಬರಬೇಕಿದೆ.

Comments are closed.