ಬೆಂಗಳೂರು: ನಾಲ್ಕು ದಿನಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕರನ್ನು ಟೀಕಿಸುವ ಭರದಲ್ಲಿ ಸೋನಿಯಾ ಗಾಂಧಿಯಂತಹ ವಿಧವೆಯ ಬೊಕ್ಕಸಕ್ಕೆ ಬಡವರ ಹಣ ಹೋಗುತ್ತಿತ್ತು ಎಂದಿದ್ದರು. ಆ ಹೇಳಿಕೆಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಇದೀಗ ಆ ಟೀಕೆಗೆ ರಾಜ್ಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ತಿರುಗೇಟು ನೀಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ನ ವಿಧವಾ ವೇತನ ಯೋಜನೆಯ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ ವಿಧವೆಯರ ಹಣ ಕಾಂಗ್ರೆಸ್ನ ಯಾವ ವಿಧವಾ ಮಹಿಳೆಗೆ ಹೋಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ವಿಧವಾ ಮಹಿಳೆಯೊಬ್ಬಳು ವಿಧವಾ ವೇತನದ ಹಣವನ್ನೂ ಲೂಟಿ ಮಾಡಿದ್ದರು. ಇದೇ ರೀತಿ, ವೃದ್ಧಾಪ್ಯ, ವಿದ್ಯಾರ್ಥಿ ವೇತನ, ಮಧ್ಯಾಹ್ನ ಬಿಸಿಯೂಟ ಯೋಜನೆ ಮುಂತಾದವುಗಳಿಗೆ ಸಂಬಂಧಿಸಿದ ಹಣವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿತ್ತು ಎಂದು ಹೇಳಿದ್ದರು.
ಮೋದಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ‘ವಿಧವೆ’ ಎಂಬ ಪದ ಬಳಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಇಂದು ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ. ಮೋದಿ ಅವರ ತಾಯಿಯೂ ವಿಧವೆ ಎಂಬುದನ್ನು ಮರೆತು ಮತ್ತೋರ್ವ ಮಹಿಳೆಯ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರೀಕುಲವನ್ನು ಅವಮಾನಿಸಿದ್ದಾರೆ. ತಮ್ಮ ತಾಯಿ ಕೂಡ ವಿಧವೆ ಎನ್ನುವುದನ್ನು ಮರೆತಿರುವ ಮೋದಿ ಅವರು ದ್ವೇಷಾಸೂಯೆಯ ರಸಾತಲ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ವಿಧವೆಯರನ್ನು ಹೀಯಾಳಿಸುವ ಮೂಲಕ ಸಮಸ್ತ ಸ್ತ್ರಿಕುಲವನ್ನು ಅವಮಾನಿಸಿದ್ದಾರೆ. ಮಾಡಿದ್ದಾರೆ. ತನ್ನ ತಾಯಿ ಕೂಡಾ ವಿಧವೆ ಎನ್ನುವುದನ್ನು ಮರೆತಿರುವ ಮೋದಿಯವರು ದ್ವೇಷಾಸೂಯೆಯ ರಸಾತಲ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ.
ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದ ಮೋದಿ, ಎನ್ಡಿಎ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನಾಯಕರು ಸರಿಯಾಗಿ ನಿದ್ರೆಯನ್ನೂ ಮಾಡುತ್ತಿಲ್ಲ. ನಾನು ಪ್ರಧಾನಿಯಾದ ನಂತರ ಅವರ ಒಂದೊಂದು ಅಕ್ರಮವನ್ನೂ ಹೊರಗೆ ತೆಗೆಯುತ್ತಿದ್ದೇನೆ. ಹುಟ್ಟದೇ ಇರುವ ಹೆಣ್ಣುಮಕ್ಕಳನ್ನು ಕಾಂಗ್ರೆಸ್ ಸರ್ಕಾರದ ದಾಖಲೆಗಳಲ್ಲಿ ವಿಧವೆ ಎಂದು ಕಾಂಗ್ರೆಸ್ ಸರ್ಕಾರ ದಾಖಲಿಸಿತ್ತು. ಈ ಮೂಲಕ ವಿಧವಾ ವೇತನದ ಹಣವನ್ನು ತನ್ನ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತಿತ್ತು. ಈ ಹಣ ಕಾಂಗ್ರೆಸ್ನ ಯಾವ ವಿಧವೆಯ ಬ್ಯಾಂಕ್ ಖಾತೆಗೆ ಹೋಗಿ ಬೀಳುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಮೋದಿ ಹೇಳಿದ್ದರು.
Comments are closed.