ಕರ್ನಾಟಕ

ಬೆಂಗಳೂರಿನಲ್ಲಿ ಶೇ.30 ರಷ್ಟು ವಾಯುಮಾಲಿನ್ಯ ಇಳಿಕೆ ಗುರಿ

Pinterest LinkedIn Tumblr


ಮಿತಿ ಮೀರಿರುವ ನಗರದ ವಾಯುಮಾಲಿನ್ಯವನ್ನು 2024ರ ವೇಳೆಗೆ ಶೇ.30 ರಷ್ಟು ಇಳಿಸಬೇಕು ಎಂದು ಕೇಂದ್ರ ಪರಿಸರ ಸಚಿವಾಲಯ ಡೆಡ್‌ಲೈನ್‌ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಮೆಟ್ರೊ ಹಾಗೂ ಇತರೆ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಮೇಲೆ ತೀವ್ರ ನಿಗಾ ಇಡಲು ಹಾಗೂ ವಾಹನಗಳ ಮಾಲಿನ್ಯ ತಗ್ಗಿಸಲು 15 ವರ್ಷ ಮೇಲ್ಪಟ್ಟ ಹಳೆ ವಾಹನಗಳ ಸಂಚಾರ ನಿಷೇಧಿಸುವ ಪ್ರಸ್ತಾವನೆ ಮರು ಪರಿಶೀಲಿಸುವಂತೆ ಸರಕಾರವನ್ನು ಕೋರಲು ಸಿದ್ಧತೆ ನಡೆಸಿದೆ. ಈ ಸಂಬಂಧ ಕ್ರಿಯಾ ಯೋಜನೆ ರೂಪಿಸಲು ಮಂಡಳಿ ಮುಂದಾಗಿದೆ.

ಮಾಲಿನ್ಯ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆಯಾಗಿದೆ. ಈ ಸಮಿತಿಯು ಮಾಲಿನ್ಯ ನಿಯಂತ್ರಣ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಲಿದೆ.

ನಿಮ್ಹಾನ್ಸ್‌, ವಿಕ್ಟೋರಿಯ ಆಸ್ಪತ್ರೆ, ನಗರ ರೈಲು ನಿಲ್ದಾಣ ಸೇರಿದಂತೆ 21 ವಾಯುಗುಣಮಟ್ಟ ತಪಾಸಣಾ ಕೇಂದ್ರಗಳಲ್ಲಿ ಜನರ ಶ್ವಾಸಕೋಶಕ್ಕೆ ಹಾನಿಯಾಗುವ ಮಟ್ಟಿಗೆ ವಾಯುಮಾಲಿನ್ಯ ದಾಖಲಾಗುತ್ತಿದೆ. ಒಟ್ಟು ವಾಯುಮಾಲಿನ್ಯದಲ್ಲಿ ಶೇ.40 ರಷ್ಟು ಮಾಲಿನ್ಯ ವಾಹನಗಳ ಹೊಗೆಯಿಂದ ಆಗುತ್ತಿದೆ. ಶೇ.20 ಕ್ಕೂ ಅಧಿಕ ಮಾಲಿನ್ಯ ಕಾಮಗಾರಿಯಿಂದ ಎದ್ದೇಳುವ ಧೂಳಿನಿಂದಾಗುತ್ತಿದೆ. ವಾಹನಗಳಿಂದಾಗುವ ಮಾಲಿನ್ಯ ಕಡಿಮೆ ಮಾಡಲು ಬೇರೆ ಸಂಸ್ಥೆಗಳ ಸಹಕಾರವೂ ಬೇಕಿದೆ.

ಮೆಟ್ರೊದ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌, ಆರ್‌.ವಿ.ರಸ್ತೆ-ಬೊಮ್ಮನಹಳ್ಳಿ, ನಾಯಂಡಹಳ್ಳಿ-ಕೆಂಗೇರಿ ಮಾರ್ಗಗಳ ನಿರ್ಮಾಣಕ್ಕೆ ನಡೆಯುತ್ತಿರುವ ಕಾಮಗಾರಿಯಿಂದ ಧೂಳು ಏಳುತ್ತಿರುವುದರ ಕುರಿತು ಸಾರ್ವಜನಿಕರು ದೂರು ನೀಡಿದ್ದರು. ಈಗ ಪ್ರತಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ನೀರು ಹಾಯಿಸುವುದು, ರಸ್ತೆ ನಿರ್ವಹಣೆ, ಬ್ಯಾರಿಕೇಡ್‌ ಅಳವಡಿಕೆ ಮೊದಲಾದ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.

ಕಾಮಗಾರಿ ಜಾಗದಲ್ಲಿ ವಾಯುಗುಣಮಟ್ಟ ತಪಾಸಣಾ ಯಂತ್ರವನ್ನು ಅಳವಡಿಸಲು ಸೂಚನೆ ನೀಡಿದ್ದು, ಬಿಎಂಆರ್‌ಸಿಎಲ್‌ ಎಲ್ಲ ಮಾರ್ಗಗಳಲ್ಲಿ ಒಂದೊಂದು ಯಂತ್ರವನ್ನು ಇಟ್ಟಿದೆ. ಇದೇ ಮಾದರಿಯಲ್ಲಿ ಅಪಾರ್ಟ್‌ಮೆಂಟ್‌ ಮೊದಲಾದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಧೂಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಹಳೆಯ ವಾಹನಗಳ ನಿಷೇಧ
ನಗರದಲ್ಲಿ 74.06 ಲಕ್ಷ ವಾಹನಗಳು ನೋಂದಣಿಯಾಗಿವೆ. ಹೊರಭಾಗಗಳಿಂದ ಸಾವಿರಾರು ವಾಹನಗಳು ನಿತ್ಯ ಬರುತ್ತಿವೆ. ಈ ವಾಹನಗಳು ಬಿಡುವ ಹೊಗೆ ನಿಯಂತ್ರಿಸಲು ಮಂಡಳಿಯು ಸಾರಿಗೆ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಬೇಕಿದೆ. ಒಟ್ಟು ವಾಹನಗಳಲ್ಲಿ ಶೇ.22 ರಷ್ಟು ವಾಹನಗಳು 15 ವರ್ಷ ಹಳೆಯದಾಗಿವೆ. 10 ವರ್ಷಕ್ಕಿಂತ ಹಳೆಯದಾದ ಡೀಸೆಲ್‌ ವಾಹನ ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್‌ ವಾಹನ ನಿಷೇಧಿಸಬೇಕೆಂಬ ಪ್ರಸ್ತಾವವನ್ನು ಮಂಡಳಿಯು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ.

ಇದನ್ನು ಸರಕಾರ ಇನ್ನೂ ಪರಿಗಣಿಸಿಲ್ಲ. ಆದರೆ ಮಾಲಿನ್ಯ ನಿಯಂತ್ರಣಕ್ಕೆ ತರಲೇಬೇಕಿರುವುದರಿಂದ ಈ ಪ್ರಸ್ತಾವನೆ ಮರು ಪರಿಶೀಲಿಸುವಂತೆ ಕೋರಲು ಮಂಡಳಿ ನಿರ್ಧರಿಸಿದೆ. ಜತೆಗೆ ಸಾರಿಗೆ ಇಲಾಖೆ ಸಹಭಾಗಿತ್ವದಲ್ಲಿ ವಾಹನಗಳ ಮಾಲಿನ್ಯ ಪ್ರಮಾಣ ತಪಾಸಣೆಗೆ ಹೆಚ್ಚು ಒತ್ತು ನೀಡಲು ಗಮನಹರಿಸಿದೆ.

ಪರಿಸರ ಸಚಿವಾಲಯವು ದೇಶದ 102 ನಗರಗಳಿಗೆ ಮಾಲಿನ್ಯ ನಿಯಂತ್ರಿಸುವ ಗುರಿಯನ್ನು ನಿಗದಿಪಡಿಸಿದೆ. ಕೇವಲ 6 ವರ್ಷಗಳಲ್ಲಿ ಬೆಂಗಳೂರು ಮಹಾನಗರದ ಮಾಲಿನ್ಯ ಪ್ರಮಾಣವನ್ನು ಶೇ.30 ರಷ್ಟು ಇಳಿಕೆ ಮಾಡುವುದು ಹೇಗೆ ಎಂಬುದು ಮಂಡಳಿಗೆ ಸವಾಲಾಗಿದೆ.

ಕ್ರಿಯಾಯೋಜನೆ: ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆಯಾಗಿದೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಕ್ರಿಯಾಯೋಜನೆ ರೂಪಿಸಲು ಸೂಚನೆ ದೊರೆತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದ್ದಾರೆ.

ಎಷ್ಟಿದೆ ಮಾಲಿನ್ಯ?: ಏರ್‌ ಕ್ವಾಲಿಟಿ ಇಂಡೆಕ್ಸ್‌ ಮಟ್ಟ 50 ರೊಳಗಿದ್ದರೆ ವಾಯುಮಾಲಿನ್ಯದ ಪರಿಣಾಮ ಅತಿ ಕಡಿಮೆಯಾಗಿರುತ್ತದೆ. 50ಕ್ಕಿಂತ ಹೆಚ್ಚಿದ್ದರೆ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಆದರೆ ಒಂದೂ ಕೇಂದ್ರದಲ್ಲಿ ಎಕ್ಯೂಐ ಮಟ್ಟ 50ಕ್ಕಿಂತ ಕಡಿಮೆ ದಾಖಲಾಗುತ್ತಿಲ್ಲ. ಉದಾಹರಣೆಗೆ, ಕಳೆದ ತಿಂಗಳು ಆಮ್ಕೊ ಬ್ಯಾಟರೀಸ್‌ ಕೇಂದ್ರದಲ್ಲಿ 103 ಎಕ್ಯೂಐ, ವೈಟ್‌ಫೀಲ್ಡ್‌ನ ಐಟಿಪಿಎಲ್‌ ಕೇಂದ್ರದಲ್ಲಿ 104 ಎಕ್ಯೂಐ, ಯಲಹಂಕದ ರೈಲ್‌ ವೀಲ್‌ ಫ್ಯಾಕ್ಟರಿಯಲ್ಲಿ 97 ಎಕ್ಯೂಐ ದಾಖಲಾಗಿದೆ. ಈ ಪ್ರಮಾಣವನ್ನು ಶೇ.30 ರಷ್ಟು ಕೆಳಕ್ಕಿಳಿಸುವುದು ದೊಡ್ಡ ಸವಾಲೇ ಆಗಿದೆ.

ದಕ್ಷಿಣ ರಾಜ್ಯಗಳಲ್ಲೇ ಕರ್ನಾಟಕದಲ್ಲಿ ಅಧಿಕ ಮಾಲಿನ್ಯ
ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಮಾಲಿನ್ಯ ಇದೆ. ಜತೆಗೆ ದೇಶದಲ್ಲಿ ಪ್ರತಿ 1,00,000 ಮಂದಿಯಲ್ಲಿ 95 ಮಂದಿ ವಾಯುಮಾಲಿನ್ಯ ಸಂಬಂಧಿ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ. ರಾಜ್ಯದ ನಗರಗಳ ಮಾಲಿನ್ಯವು ಶ್ವಾಸಕೋಶ ಮತ್ತು ಉಸಿರಾಟ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತಿದ್ದು, ನಿಧಾನಗತಿಯ ವಿಷವಾಗಿ ಪರಿಣಮಿಸಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಧೂಳು ನಿಯಂತ್ರಣಕ್ಕೆ ಕೈಗೊಂಡ ಕ್ರಮ
ಕಟ್ಟಡ, ಮೆಟ್ರೊ ಕಾಮಗಾರಿಯಾಗುವಾಗ ಧೂಳು ಏಳದಂತೆ ಆಗಾಗ್ಗೆ ನೀರು ಸಿಂಪಡಣೆ

ಮೆಟ್ರೊ ಕಾಮಗಾರಿ ವೇಳೆ ಸುತ್ತಲಿನ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡುವುದು

ಮೆಟ್ರೊ ಕಾಮಗಾರಿಯ ಪ್ರದೇಶಗಳಲ್ಲಿ ವಾಯುಗುಣಮಟ್ಟ ತಪಾಸಣಾ ಯಂತ್ರದ ಅಳವಡಿಕೆ

ಮಣ್ಣು, ಮರಳನ್ನು ಲಾರಿಯಲ್ಲಿ ಒಯ್ಯುವಾಗ ಪ್ಲಾಸ್ಟಿಕ್‌ ಶೀಟ್‌ ಮುಚ್ಚುವುದು

ವಾಹನಗಳ ಹೊಗೆ ನಿಯಂತ್ರಣಕ್ಕೆ ಚರ್ಚೆಯಾಗಿರುವ ಕ್ರಮ
15 ವರ್ಷಕ್ಕಿಂತ ಹಳೆಯದಾದ ವಾಹನಗಳ ಸಂಚಾರ ನಿಷೇಧ

ವಾಹನಗಳ ವಾಯಗುಣಮಟ್ಟ ತಪಾಸಣೆ.

Comments are closed.