ಕರ್ನಾಟಕ

ಸಿದ್ದಗಂಗಾ ಶ್ರೀಗಳ ಮಾತು ಕೇಳಿ ವಿಸ್ಮಿತರಾದ ಚೆನ್ನೈ ಆಸ್ಪತ್ರೆಯ ಮಾಲೀಕರು

Pinterest LinkedIn Tumblr


ಚೆನ್ನೈ: ಸಿದ್ದಗಂಗಾ ಶ್ರೀಗಳ ವ್ಯಕ್ತಿತ್ವ ಮತ್ತು ಜೀವನವೇ ಒಂದು ಅದ್ಭುತ ಪ್ರಪಂಚ. ಅವರ ಜೀವನಪ್ರೀತಿ, ಆಧ್ಯಾತ್ಮಪ್ರೀತಿ, ಸೇವಾಪ್ರೀತಿ ನಿಜಕ್ಕೂ ಅನನ್ಯ. 111 ವರ್ಷದ ಪ್ರಾಯದಲ್ಲೂ ಅವರ ಲವಲವಿಕೆಯು ಎಂಥವರನ್ನೂ ದಂಗುಬಡಿಸುತ್ತದೆ. ಇವತ್ತು ಡಾ. ಶಿವಕುಮಾರ ಸ್ವಾಮಿಗಳನ್ನ ಚೆನ್ನೈನಲ್ಲಿರುವ ಡಾ. ರೇಲಾ ಇನ್ಸ್​ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಏರ್ಪಾಡು ಮಾಡಲಾಗಿದೆ. ಲಿವರ್ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆ ಇದೆ. ಹೆಚ್ಚೂಕಡಿಮೆಯಾದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆಯಂತೂ ಇದೆ. ಇಂಥ ಹೊತ್ತಲ್ಲೂ ಸ್ವಾಮೀಜಿ ಅವರು ಕ್ಷಣವೂ ಆತಂಕಕ್ಕೆ ಒಳಗಾಗದೆ ಸಹಜವಾಗಿಯೇ ಇದ್ದಾರೆ. ಅವರನ್ನು ಭೇಟಿ ಮಾಡಲು ಬಂದ ಆಸ್ಪತ್ರೆಯ ಸಂಸ್ಥಾಪಕ ಡಾ. ಮೊಹಮ್ಮದ್ ರೇಲಾ ಜೊತೆ ಅವರು ಹಾಸ್ಯ ಚಟಾಕಿ ಕೂಡ ಹಾರಿಸಿದರೆನ್ನಲಾಗಿದೆ. “ನೀವು ಚೆನ್ನೈನಲ್ಲಿ ತುಂಬಾ ಖ್ಯಾತ ಡಾಕ್ಟರ್ ಅಂತ ಕೇಳಿಪಟ್ಟೆ,” ಎಂದು ರೇಲಾ ಜೊತೆ ಸ್ವಾಮೀಜಿ ಮಾತಿಗಿಳಿದರು. ಸ್ವಾಮೀಜಿ ಅವರಿಂದ ಇದನ್ನು ನಿರೀಕ್ಷಿಸದ ವೈದ್ಯರಿಗೆ ಸಖೇದಾಶ್ಚರ್ಯವಾಗಿ ನಕ್ಕು ಸುಮ್ಮನಾದರಂತೆ. ಹಾಗಂತ ಸ್ವಾಮೀಜಿ ಅವರ ಆಪ್ತ ವೈದ್ಯ ಡಾ. ಪರಮೇಶ್ ಅವರು ನ್ಯೂಸ್18 ಕನ್ನಡ ವಾಹಿನಿಗೆ ತಿಳಿಸಿದ್ದಾರೆ.

ನಿನ್ನೆ ಕೂಡ ತುಮಕೂರಿನಲ್ಲಿರುವ ಸಿದ್ದಗಂಗಾ ಹಳೆಮಠದಲ್ಲಿ ಸ್ವಾಮೀಜಿ ಬಳಿ ಹೋದ ಭಕ್ತರ ಬಳಿಯೂ ಹಾಸ್ಯಚಟಾಕಿಯ ಸವಿ ಸಿಕ್ಕಿತ್ತು. ಭಕ್ತರ ವಯಸ್ಸನ್ನು ಕೇಳಿದ ಸ್ವಾಮೀಜಿ, ನೀವಿನ್ನೂ ಬಹಳ ವರ್ಷ ಬದುಕಬೇಕಿದೆ ಎಂದು ತಮಾಷೆ ಮಾಡಿದ್ದರು. ಹಾಗೆಯೇ, ತಮ್ಮ ಆರೋಗ್ಯ ವಿಚಾರಿಸಲು ಬಂದ ಸಚಿವ ಜಿ. ಪರಮೇಶ್ವರ್ ಅವರ ಆರೋಗ್ಯದ ಬಗ್ಗೆಯೇ ಸ್ವಾಮೀಜಿ ವಿಚಾರಿಸಿದ್ದುಂಟು. ಎಷ್ಟೇ ವಯೋಮಾನದ ಭಕ್ತರು ಬರಲಿ, ಅವರ ವಯಸ್ಸಿಗನುಗುಣವಾಗಿ ಸಿದ್ದಗಂಗಾ ಶ್ರೀಗಳು ಮಾತಿಗಿಳಿಯುತ್ತಾರೆ. ಮುಖ್ಯಮಂತ್ರಿಗಳು ಹೋಗಲಿ, ಸಣ್ಣ ರೈತನು ಹೋಗಲಿ ಎಲ್ಲರಿಗೂ ಸ್ವಾಮೀಜಿಯದ್ದು ಒಂದೇ ಸ್ಪಂದನೆ. ಕಿರಿಯ ವಯಸ್ಸಿನ ಜನರು ಕೂಡ ತಮಗೆ ಅನಾರೋಗ್ಯ ಬಂದಾಗ ಆಕಾಶ ಕಳಚಿಬಿದ್ದಂತೆ ವರ್ತಿಸುವ ಉದಾಹರಣೆಗಳಿರುವಾಗ ಶತಾಯುಷಿ ಸ್ವಾಮೀಜಿ ಅವರ ಚಿಲುಮೆಯಂತಹ ವ್ಯಕ್ತಿತ್ವ ನಿಜಕ್ಕೂ ಮಾದರಿಯಾದುದು.

ಡಾ. ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಸಿದ್ದಗಂಗಾ ಮಠವು ಈಗ ತ್ರಿವಿಧ ದಾಸೋಹಗಳನ್ನ ಮಾಡುತ್ತಾ ಬಂದಿದೆ. ಮಠಕ್ಕೆ ಬರುವ ಭಕ್ತರೆಲ್ಲರಿಗೂ ಯಾವ ಹೊತ್ತಿನಲ್ಲಾದರೂ ಉಚಿತ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತಿದೆ. ಹಾಗೆಯೇ ಇಲ್ಲಿ ಉಚಿತ ವಸತಿ ವ್ಯವಸ್ಥೆಯೂ ಇದೆ. ಸಿದ್ದಗಂಗಾ ಮಠ ಹಾಗೂ ಅದರ ಶ್ರೀಗಳ ಸಾಮಾಜಿಕ ಕಾರ್ಯಗಳ ಬಗ್ಗೆ ಅಪಸ್ವರ ಎತ್ತಿದವರಿಲ್ಲ.

Comments are closed.