ಕರ್ನಾಟಕ

 ಬಿಜೆಪಿ ನಾಯಕರಿಂದ ಆಪರೇಷನ್ ಸುಳಿವು 

Pinterest LinkedIn Tumblr


ಸಮ್ಮಿಶ್ರ ಸರಕಾರದ ವಿರುದ್ಧ ಮುನಿಸಿಕೊಂಡಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಭಿನ್ನಮತವನ್ನು ಮುಂದಿಟ್ಟುಕೊಂಡು, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಆಪರೇಷನ್ ಕಮಲ್ ನಡೆಸುವ ಸುಳಿವನ್ನು ಬಿಜೆಪಿ ನಾಯಕರೇ ನೀಡಿದ್ದಾರೆ.

ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಬೇರೆ ನಾಯಕರ ಹಸ್ತಕ್ಷೇಪ ಮಾಡುತ್ತಿರುವುದರಿಂದ ಸರಕಾರದ ವಿರುದ್ಧ ಸಚಿವ ರಮೇಶ ಜಾರಕಿಹೊಳಿ ಬಂಡಾಯದ ಬಾವುಟ ಹಾರಿಸಿದ್ದಾರೆ. ತಮ್ಮ ಹತ್ತಿರ ಜೆಡಿಎಸ್, ಕಾಂಗ್ರೆಸ್ ಶಾಸಕರು ಇದ್ದಾರೆ. ಅವರೊಂದಿಗೆ ಪಕ್ಷಾಂತರ ಮಾಡಲಿದ್ದಾರೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.

ಬೆಳಗಾವಿ ಜಿಲ್ಲೆಯ ರಾಜಕೀಯ ದಿಗ್ಗಜರಾದ ಜಾರಕಿಹೊಳಿ ಸಹೋದರರು ಸಮ್ಮಿಶ್ರ ಸರಕಾರವನ್ನು ಅತಂತ್ರಗೊಳಿಸುತ್ತಾರೆ ಎನ್ನುವ ಭೀತಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಎದುರಾಗಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿತ ಎಂಟು ಶಾಸಕರೊಂದಿಗೆ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ.

ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಬೆಳಗಾವಿಯಲ್ಲಿ ಡಿ.10 ರಿಂದ 21ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಮ್ಮಿಶ್ರ ಸರಕಾರದ ವಿರುದ್ಧ ತೊಡೆತಟ್ಟಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿಯ ಅಧಿವೇಶನದಲ್ಲಿಯೇ ಸಮ್ಮಿಶ್ರ ಸರಕಾರಕ್ಕೆ ಬಿಜೆಪಿ ಶಾಕ್ ನೀಡುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ.

ಡಿ.22 ರಂದು ಸಮ್ಮಿಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಚಿವ ರಮೇಶ ಜಾರಕಿಹೊಳಿ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಿ ಕಾಂಗ್ರೆೆಸ್‌ಗೆ ಬರಬೇಕಾದ ನಾಲ್ಕು ಸಚಿವ ಸ್ಥಾಾನದಲ್ಲಿ ಎರಡು ಸ್ಥಾಾನ ತಮ್ಮ ಬೆಂಬಲಿತ ಶಾಸಕರಿಗೆ ನೀಡಬೇಕೆಂದು ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ಬೆಳಗಾವಿ ಅಧಿವೇಶನ ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗಲಿದೆ.

ಪ್ರತ್ಯೇಕ ಬಜೆಟ್ ಬೇಡಿಕೆ:
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಾರತಮ್ಯ ನಿವಾರಣೆಗಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವಂತೆ ಅಧಿವೇಶನದಲ್ಲಿ ಒತ್ತಾಯಿಸಲಿದ್ದು, ಈ ಬೇಡಿಕೆಗೆ ಪಕ್ಷಾತೀತವಾಗಿ ಈ ಭಾಗದ 90 ಶಾಸಕರಿಗೆ ಪತ್ರ ಬರೆದಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವ ವಿಷಯವೂ ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ.

ಅಧಿವೇಶನ ನುಂಗಲಿದೆ ಕಬ್ಬು
ಚಳಿಗಾಲದ ಅಧಿವೇಶನವನ್ನು ಸಕ್ಕರೆ ನಾಡಿನ ಕಬ್ಬು ನುಂಗಲಿದೆ. ಕಬ್ಬಿನ ದರ ನಿಗದಿ, ಬಾಕಿ ಬಿಲ್ ಈ ಎರಡು ವಿಷಯಗಳನ್ನು ಮುಂದಿಟ್ಟುಕೊಂಡು ಸಮ್ಮಿಶ್ರ ಸರಕಾರದ ವಿರುದ್ಧ ಸಮರ ಸಾರಲು ಬಿಜೆಪಿ ರೈತ ಯಾತ್ರೆ ಎಂಬ ಹೋರಾಟದ ಹೆಸರಿನಲ್ಲಿ ಸರಕಾರವನ್ನು ಪೇಚಿಗೆ ಸಿಲುಕಿಸಲು ನಿರ್ಧರಿಸಿದೆ. ಈ ಬಾರಿಯ ಅಧಿವೇಶನ ಕಬ್ಬಿನ ಸಿಹಿಗೆ ಆಹುತಿಯಾಗುವುದು ಖಚಿತವಾಗಿದೆ. ಕಬ್ಬಿನ ಸಮಸ್ಯೆೆಯ ಜತೆಗೆ ರಾಜ್ಯದ ಸಮ್ಮಿಶ್ರ ಸರಕಾರ ರಾಜಕೀಯ ಸಮಸ್ಯೆೆಯನ್ನು ಎದುರಿಸುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ರೈತರ ಸಾಲಮನ್ನಾ ಕಬ್ಬಿನ ಬಾಕಿ ಬಿಲ್, ಕಬ್ಬ ದರ ನಿಗದಿ ಸೇರಿದಂತೆ ಹಲವಾರು ರೈತರ ಸಮಸ್ಯೆೆಗಳ ಪರಿಹಾರಕ್ಕಾಗಿ ರೈತ ಸಂಘಟನೆಗಳು ಹೋರಾಟ ನಡೆಸಲು ಸಜ್ಜಾಗಿವೆ.

ಎಂಇಎಸ್ ಪುಂಡಾಟಿಕೆ
ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಧಿವೇಶನಕ್ಕೆ ಪರ್ಯಾಯವಾಗಿ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದೆ. ಬೆಳಗಾವಿ ನಗರ ಹಾಗೂ ಜಿಲ್ಲೆೆಯ ಅಭಿವೃದ್ಧಿಯನ್ನು ಸಹಿಸಲಾಗದ ಎಂಇಎಸ್ ನಾಯಕರು ಪ್ರತಿ ವರ್ಷ ಅಧಿವೇಶನದ ಸಂದರ್ಭದಲ್ಲಿ ಕಾಲು ಕೇದರಿ ಜಗಳಕ್ಕೆ ನಿಲ್ಲುವುದು ರೂಢಿಯಾಗಿ ಬಿಟ್ಟಿದೆ. ಅದಕ್ಕೆ ಸರಕಾರ ಅನುಮತಿ ನೀಡುತ್ತ ಬಂದಿದ್ದು, ಈ ಬಾರಿಯೂ ಮೇಳಾವಗೆ ಅನುಮತಿ ಸಿಗಲಿದೆ.

Comments are closed.