ಕರ್ನಾಟಕ

ಕುಮಾರಸ್ವಾಮಿ ಸಹೋದರ ಬಾಲಕೃಷ್ಣ ಕುಟುಂಬದ ಅಕ್ರಮದ ವಿರುದ್ಧ ಸಿಎಂ ಬಳಿಯೇ ದೂರು

Pinterest LinkedIn Tumblr


ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯದಿಂದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂಕಬಳಿಕೆಯ ಗಂಭೀರ ಆರೋಪ ಕೇಳಿ ಬಂದಿದೆ. ಸಿಎಂ ಕುಟುಂಬದವರು ಭೂಕಬಳಿಕೆ ಮಾಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ರವೀಂದ್ರ ದಾಖಲೆ ಬಿಡುಗಡೆ ಮಾಡಿದ್ದು, ಶ್ರೀರಂಗಪಟ್ಟಣ ತಾಲೂಕಿನ ಕೆ. ಶೆಟ್ಟಹಳ್ಳಿ ಮೀಸಲು ಅರಣ್ಯದ ಬಳಿಯ ಶ್ರೀಗಂಧ ಪ್ಲಾಂಟೇಷನ್ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕುಮಾರಸ್ವಾಮಿ ಸಹೋದರ ಬಾಲಕೃಷ್ಣ ಅವರ ಕುಟುಂಬದ ವಿರುದ್ಧ ಸಿಎಂಗೆ ದೂರು ನೀಡಿದ್ದು, ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ವ್ಯಾಪ್ತಿ ಮೀಸಲು ಅರಣ್ಯ ಪ್ರದೇಶದ ಭೂಕಬಳಿಕೆ ಬಗ್ಗೆ ಆರೋಪ ಮಾಡಿದ್ದಾರೆ. ಮೀಸಲು ಅರಣ್ಯದಲ್ಲಿ ಸುಮಾರು 70-80 ಎಕರೆ ಭೂಕಬಳಿಕೆ ಮಾಡಿದ್ದು, ಅರಣ್ಯ ಪ್ರದೇಶದಲ್ಲಿದ್ದ ಗಿಡ-ಮರ, ಬೆಟ್ಟ-ಗುಡ್ಡಗಳ ನಾಶ, ಕಾಲುವೆಗಳನ್ನ ಮುಚ್ಚಿರುವ ಆರೋಪ ಮಾಡಿದ್ದಾರೆ.

ಸಿಎಂ ಹೆಚ್​ಡಿಕೆ ಸಹೋದರನ ಪತ್ನಿ ಕುಟುಂಬದವರ ಹೆಸರಲ್ಲಿ ಭೂಮಿ ಕಬಳಿಸಿ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಗೆ ಬಾಡಿಗೆ ನೀಡಲಾಗಿದೆ ಎಂದು ಹೇಳಿರುವ ದೂರುದಾರರು, ಅಕ್ರಮದ ವಿರುದ್ಧ ತನಿಖೆ ಹಾಗೂ ಕಾನೂನು ಕ್ರಮಕ್ಕೆ ಆಗ್ರಹ ಮಾಡಿ, 16 ಪುಟಗಳ ದಾಖಲೆ ಸಹಿತ 3 ಪುಟಗಳ ದೂರು ನೀಡಿದ್ದಾರೆ.

ಅಲ್ಲದೆ, ನಾಳೆ ಸಿಎಂ ಕುಮಾರಸ್ವಾಮಿ ಅವರು ಪಾಂಡವಪುರ ಕ್ಷೇತ್ರಕ್ಕೆ ಆಗಮಿಸ್ತಿದ್ದಾರೆ. ಅಕ್ರಮವಾಗಿ ತಮ್ಮ ಕುಟುಂಬವರ್ಗ ಅರಣ್ಯ ಭೂಮಿ ಕಬಳಿಸಿರೋ ಸ್ಥಳಕ್ಕೆ ಕುಮಾರಸ್ವಾಮಿ ಅವರು ಈ ನಾಡಿನ ಒಬ್ಬ ಮುಖ್ಯಮಂತ್ರಿಯಾಗಿ ಭೇಟಿ ನೀಡಬೇಕು. ಈ ಅಕ್ರಮವನ್ನ ಖುದ್ದು ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್. ರವೀಂದ್ರ ಅವರು ಮುಖ್ಯಮಂತ್ರಿಗಳನ್ನ ಒತ್ತಾಯಿಸಿದ್ಧಾರೆ.

ಒಟ್ಟಾರೆ, ಸಾಮಾಜಿಕ ಕಾರ್ಯಕರ್ತ ರವೀಂದ್ರ ಅವರು ದೇವೇಗೌಡರ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಿಎಂ ಹೆಚ್​ಡಿಕೆ ಮತ್ತು ಅವರ ಕುಟುಂಬ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Comments are closed.