ಕರ್ನಾಟಕ

ರಾಮಮಂದಿರಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿ ವಿಎಚ್​​ಪಿಯಿಂದ ಜನಾಗ್ರಹ ಸಮಾವೇಶ

Pinterest LinkedIn Tumblr


ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ‘ದೇಶದ ಸ್ವಾಭಿಮಾನಕ್ಕಾಗಿ ಹೋರಾಡೋಣ’ ಎಂಬ ಶೀರ್ಷಿಕೆ ಅಡಿಯಲ್ಲಿ ದೇಶಾದ್ಯಂತ ಜನಾಭಿಪ್ರಾಯನ್ನು ಸಂಗ್ರಹ ಮಾಡಲಾಗುತ್ತಿದೆ. ಹೀಗಾಗಿಯೇ ಇಂದು ನಗರದ ಬಸವನಗುಡಿ ನ್ಯಾಷನಲ್​​ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್​ನಿಂದ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಹತ್ತಾರು ಸಾವಿರ ಜನರು ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲಾಗುತ್ತಿದೆ.

ಸಮಾವೇಶದಲ್ಲಿ ಹತ್ತರು ಸಾವಿರ ಸಂಖ್ಯೆಯಲ್ಲಿ ವಿಎಚ್​​ಪಿ ಕಾರ್ಯಕರ್ತರು, ರಾಮನ ಭಕ್ತರು ಭಾಗಿಯಾಗಿದ್ದಾರೆ. ಮಂದಿರ ನಿರ್ಮಾಣ ಆಗಲೇಬೇಕೆಂದು ಘೋಷಣೆ ಹಾಕಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಶಕ್ತಿ ಪ್ರದರ್ಶನಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿವೆ. ಸಮಾವೇಶಕ್ಕಾಗಿ ಬೆಂಗಳೂರು, ರಾಮನಗರ, ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ರಾಮಭಕ್ತರು ಆಗಮಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮಂದಿರ ನಿರ್ಮಾಣಕ್ಕೆಂದಲೇ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ವಿರುದ್ಧ ಜನಾಗ್ರಹ ಸಭೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗಿಯಾಗಿದ್ದಾರೆ. ಈಗಾಗಲೇ ಅಖಿಲೇಶ್ವರಾನಂದ ಸ್ವಾಮೀಜಿಗಳು, ರಾಮನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದ್ದಾರೆ. ಸಭೆಯನ್ನುದ್ದೇಶಿಸಿ ಆರ್​ಎಸ್​ಎಸ್​ ಸಹಸರ ಕಾರ್ಯವಾಹಕ ಭಾಗಯ್ಯಜೀ ಮಾತನಾಡಲಿದ್ದಾರೆ ಎನ್ನಲಾಗಿದೆ.

ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ ವಿಎಚ್ ಪಿ ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಅವರು, ಬೆಂಗಳೂರಿನ ಎಲ್ಲ ರಾಮಭಕ್ತರು ಇಲ್ಲಿದ್ದಾರೆ. ಸಂತರ ಆದೇಶದಂತೆ ಈ ರೀತಿಯ ಸಭೆಗಳು ದೇಶಾದ್ಯಂತ ನಡೆಯುತ್ತಿವೆ. ಅಯೋಧ್ಯೆ ಶ್ರೀರಾಮನ ಜನ್ಮಭೂಮಿಯಲ್ಲಿ ನವೆಂಬರ್ 25 ರಂದು ನಡೆದ ಧರ್ಮ ಸಂಸತ್​​ನಲ್ಲಿ ಅಸಂಖ್ಯಾತ ರಾಮ ಭಕ್ತರು ಭಾಗಿಯಾಗಿದ್ದರು. ಇದೇ ಡಿಸೆಂಬರ್​ನಲ್ಲಿ ದೆಹಲಿಯಲ್ಲಿ ನಡೆಯುವ ಸಭೆಗೂ 60-70 ಲಕ್ಷ ಜನ ಸೇರ್ತಾರೆ ಎಂದರು.

ನೂರಾರು ವರ್ಷಗಳ ಹಿಂದೆ ರಾಮಮಂದಿರವನ್ನು ಕೆಡವಲಾಗಿದೆ. ಬಾಬರ್ ಎಂಬ ಹಿಂದೂ ವಿರೋಧಿ ರಾಮಮಂದಿರ ಕೆಡವಿ ಮಸೀದಿ ಕಟ್ಟಿಸಿದ್ದ. ರಾಮಮಂದಿರ ನಿರ್ಮಾಣ ವಿಚಾರ ಕೋರ್ಟ್​ಗೆ ಆಧ್ಯತೆಯ ವಿಷಯವಲ್ಲವಂತೆ. ಇದು ನಿಜಕ್ಕೂ ಆಘಾತದ ವಿಷಯವಾಗಿದೆ. 490 ವರ್ಷಗಳ ಹಿಂದೂಗಳ ಹೋರಾಟಕ್ಕೆ ಬೆಲೆ ಇಲ್ಲವೇ?, ಮಂದಿರ ನಿರ್ಮಾಣ ವಿಚಾರಕ್ಕೆ ನ್ಯಾಯಾಲಯದ ಮೊಹರು ಬೇಕಿಲ್ಲ. ಇದರ ವಿರುದ್ಧ ಹಲವರು ಷಡ್ಯಂತ್ರ ಹೂಡಲಾಗುತ್ತಿದೆ. ರಾಮಮಂದಿರ ವಿರೋಧಿಗಳ ಪೈಕಿ ಅಜರ್ ಮಸೂದ್ ಸಹಾ ಒಬ್ಬ. ಆತ ಭಯೋತ್ಪಾದಕ, ಪಾಕ್​ನಲ್ಲಿಯೇ ಕೂತು ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ ಎಂದು ಹೇಳಿದರು.

ಇದೆ ವೇಳೆ ಮಾತನಾಡಿದ ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮಿಜಿ ಅವರು, ರಾಮ ಮಂದಿರ ನಿರ್ಮಾಣಕ್ಕೆ ಬಹಳ ಅಡಚಣೆಗಳು ಬರುತ್ತಿವೆ. ದೇಶದಲ್ಲಿ‌ ಬಹಳ ಮಂದಿರಗಳು ನಿರ್ಮಾಣವಾಗುತ್ತಿವೆ. ಆದರೆ ದೈವ ಸಂಭೂತ ರಾಮನ ಮಂದಿರ ನಿರ್ಮಾಣ ಆಗುತ್ತಿಲ್ಲ. ದೇಶದ ಎಲ್ಲರೂ ರಾಮಮಂದಿರ ನಿರ್ಮಾಣಕ್ಕೆ ಪ್ರಯತ್ನ ಹಾಕುತ್ತಿದ್ದರು ಅಡಚಣೆಯಾಗುತ್ತಿದೆ. ಈಗ ರಾಮ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಕಾಲ ಸನ್ನಿಹಿತವಾಗಿದ್ದು, ಮಂದಿರಕ್ಕೆ ಇನ್ಮುಂದೆ ವಿಳಂಬವಾಗಬಾರದು. ಕೇಂದ್ರ ಸರಕಾರ ಬೇಗ ಮಂದಿರ ನಿರ್ಮಾಣದ ಸಂಕಲ್ಪ ಮಾಡಲಿ ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನವೇ ನಗರದಲ್ಲಿ ರಾಮ ಮತ್ತು ಹನುಮಂತನ ಬೃಹತ್ ಪ್ರತಿಮೆಗಳ ರಥಯಾತ್ರೆ ಮಾಡಲಾಗಿದೆ. ರಾಮಜನ್ಮಭೂಮಿ ಇತಿಹಾಸ ಸಾರುವ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಹೊತ್ತು ತರಲಾಯ್ತು. ಸಭೆಯ ವೀಕ್ಷಣೆಗಾಗಿ ಸಾರ್ಜನಿಕರಿಗೆ ಅನುಕೂಲವಾಗುವಂತೆ ಎಲ್‍ಸಿಡಿ ಪರದೆಗಳನ್ನು ಅಳವಡಿಸಲಾಗಿದೆ. ಸಮಾವೇಶದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತ್​​​ ಮಾಡಲಾಗಿದೆ. ಮೆರವಣಿಗೆ ನಡೆಯುವ ದಾರಿಯುದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ ಎನ್ನುತ್ತಿವೆ ಮೂಲಗಳು.

ಏನಿದು ಕೇಸ್​​: ಒಂದು ಕಾಲದಲ್ಲಿಮೊಘಲ್ ದೊರೆ ಬಾಬರ್ ಅವರು ಅಯೋಧ್ಯಾದಲ್ಲಿ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದರು. ಆದರೆ, ಹಿಂದೂ ಸಂಘಟನೆಗಳು ಡಿಸೆಂಬರ್ 06, 1992 ರಂದು ಬಾಬ್ರಿ ಮಸೀದಿಯನ್ನು ಕೆಡವಿದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಅಲಹಬಾದ್​​ ಹೈಕೋರ್ಟ್​​ ತೀರ್ಪು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಅಯೋಧ್ಯೆಯಲ್ಲಿನ ವಿವಾದಿತ ಜಾಗ(2.77 ಎಕರೆ)ದ ಮೇಲೆ ಹಿಂದೂ(ರಾಮ್ ಲಲ್ಲಾ), ಮುಸ್ಲಿಂ(ಸುನ್ನಿ ವಕ್ಫ್ ಮಂಡಳಿ) ಹಾಗೂ ನಿರ್ಮೋಹಿ ಅಖಾರಕ್ಕೆ ಸಮಾನವಾದ ಅಧಿಕಾರವಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ಧಾರೆ.

Comments are closed.