ಕರ್ನಾಟಕ

ಅಂಬಿಯ ಅಭಿಮಾನಿಗಳಿಗೆ ಸುಮಲತಾ ಬರೆದ ಭಾವನಾತ್ಮಕ ಪತ್ರ..!

Pinterest LinkedIn Tumblr


ಬೆಂಗಳೂರು: ಅಂಬರೀಶ್ ದೈವಾದೀನರಾದ ನಂತರದಿಂದ ಹಿಡಿದು ಅವರ ಅಂತಿಮ ಯಾತ್ರೆಯವರೆಗೆ ಎಲ್ಲಾ ಕಾರ್ಯಗಳನ್ನು ಸರಕಾರ ಅಚ್ಚುಕಟ್ಟಾಗಿ ನಿಭಾಯಿಸಿತು. ಲಕ್ಷಾಂತರ ಅಭಿಮಾನಿಗಳು ತಮ್ಮ ಆರಾಧ್ಯ ದೇವರಿಗೆ ಒಳ್ಳೆಯ ವಿದಾಯ ನೀಡಿದರು. ಹಲವು ನಟರು, ಅಭಿಮಾನಿಗಳು ಅಂಬರೀಶ್ ಕುಟುಂಬದ ಬೆನ್ನಿಗೆ ನಿಂತು ಕೆಲಸ ಮಾಡಿದರು. ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ತಮ್ಮ ಬೆನ್ನಿಗೆ ನಿಂತು ಸಾಂತ್ವನದ ಮಾತುಗಳನ್ನಾಡಿದ್ದು ತಮಗೆ ಶಕ್ತಿ ತುಂಬಿದವು ಎಂದು ಸುಮಲತಾ ಅಂಬರೀಷ್ ಅವರು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ ಸರಕಾರ, ಪೊಲೀಸ್ ಇಲಾಖೆ, ಭದ್ರತಾ ಸಿಬ್ಬಂದಿ, ಜಿಲ್ಲಾಡಳಿತ ವರ್ಗ ಹೀಗೆ ಹಲವರಿಗೆ ಸುಮಲತಾ ಅಂಬರೀಷ್ ಕೃತಜ್ಞತೆ ಸಲ್ಲಿಸಿದ್ದಾರೆ. ಅಂಬರೀಷ್ ಬದುಕಿದ್ದಾಗ ಅವರಿಗೆ ತೋರುತ್ತಿದ್ದ ಪ್ರೀತಿ, ವಿಶ್ವಾಸ, ಅಭಿಮಾನವನ್ನು ಅವರು ಸತ್ತ ನಂತರವೂ ತೋರುತ್ತಿರುವುದು ತಮ್ಮ ಭಾಗ್ಯವಾಗಿದೆ. ಕರ್ನಾಟಕದ ಪುಣ್ಯಭೂಮಿಯಲ್ಲಿ ಹುಟ್ಟಿದ್ದೇ ಅಂಬರೀಷ್ ಅವರಿಗೊಂದು ಅದೃಷ್ಟ ಎಂದು ಸುಮಲತಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಸುಮಲತಾ ಅಂಬರೀಷ್ ಬರೆದ ಪಠ್ಯದ ಪೂರ್ಣ ವಿವರ:

ಈ ಅತ್ಯಂತ ಕಷ್ಟದ ಮತ್ತು ದುಃಖದ ಹೊತ್ತಿನಲ್ಲಿ ನನ್ನನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ನಾನು ಈ ಮೂಲಕ ಧನ್ಯವಾದವನ್ನು ತಿಳಿಸುತ್ತೇನೆ. ನಿಮ್ಮ ಸಾಂತ್ವನದ ಮಾತುಗಳು ಮತ್ತು ನಿಮ್ಮ ಪ್ರೀತಿಯ ನಡೆಗಳು ಈ ಸಂಕಷ್ಟದ ಹೊತ್ತಿನಲ್ಲಿ ನಮಗೆ ಶಕ್ತಿ ತುಂಬಿದವು. ನಾನು, ಅಭಿಷೇಕ್ ಮತ್ತು ಅಂಬರೀಶ್ ಇಡೀ ಕುಟುಂಬವು ಕರ್ನಾಟಕದ ಜನತೆಗೆ ಸದಾ ಕಾಲ ಅಭಾರಿಯಾಗಿರುತ್ತೇವೆ. ವಿಶೇಷವಾಗಿ ಅಂಬರೀಶ್ ಅವರನ್ನು ತಮ್ಮ ರಾಜನಂತೆ ಗೌರವಸಿ ಅತ್ಯಂತ ಪ್ರೀತಿಯಿಂದ ಕಳಿಸಿಕೊಟ್ಟ ಮಂಡ್ಯದ ಅಭಿಮಾನಿಗಳು ಮತ್ತು ಎಲ್ಲ ಅಭಿಮಾನಿಗಳಿಗೆ ನಾವುಗಳು ಯಾವಾಗಲು ಚಿರಋಣಿ. ಅಂತ್ಯಕ್ರಿಯೆಗೆ ಬೇಕಾದ ಎಲ್ಲ ವ್ಯವಸ್ತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಡುವುದರ ಜೊತೆಗೆ ಅಂಬರೀಶ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಕಳುಹಿಸಿಕೊಟ್ಟ ಸನ್ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ, ಮಂಡ್ಯದ ಸಂಸದ ಸಿ ಎಸ್ ಪುಟ್ಟರಾಜು ಅವರಿಗೂ, ಇನ್ನಿತರ ಶಾಸಕರು ಮತ್ತು ಸಂಸದರಿಗೂ, ಕರ್ನಾಟಕ ಸರ್ಕಾರಕ್ಕೂ ನಾನು ಈ ಮೂಲಕ ಅಭಿನಂದನೆ ತಿಳಿಸುತ್ತೇನೆ. ಮೂರು ದಿನಗಳ ಕಾಲ ಸತತವಾಗಿ ಶ್ರಮವಹಿಸಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡ ಪೋಲಿಸ್ ಇಲಾಖೆಯವರಿಗೂ, ಅರ್ ಎ ಎಫ್ ಸಿಬ್ಬಂದಿಯವರಿಗೂ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಅಧಿಕಾರಿ ವರ್ಗದವರಿಗೂ ನಾನು ಈ ಮೂಲಕ ಅಭಿನಂದನೆ ತಿಳಿಸಲು ಇಚ್ಚಿಸುತ್ತೇನೆ. ಅಂಬರೀಶ್ ಅವರು ಮೇಲೆ ಸದಾ ಕಾಲ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಿದ ಮಂಡ್ಯ ಜನತೆಯ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ. ಅವರು ಬದುಕಿದ್ದಾಗ ಹೇಗೆ ಪ್ರೀತಿ ಅಭಿಮಾನ ತೋರಿಸಿದರೋ ಹಾಗೆಯೇ ಅವರು ಸತ್ತ ನಂತರವು ಪ್ರೀತಿ ಅಭಿಮಾನಕ್ಕೆ ಯಾವುದೇ ಕೊರತೆಯಾಗದಂತೆ ನಡೆದುಕೊಂಡ ಮಂಡ್ಯದ ಜನತೆಗೆ ನಾನು ಸದಾ ಅಭಾರಿ. ಅವರೊಬ್ಬ ನಟ, ಕೇಂದ್ರದ ಮಂತ್ರಿ, ರಾಜ್ಯದ ಮಂತ್ರಿ, ಒಬ್ಬ ಸೂಪರ್ ಸ್ಟಾರ್, ಎಲ್ಲರಿಗೂ ಒಬ್ಬ ಒಳ್ಳೆಯ ಗೆಳೆಯರಾಗಿದ್ದರು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ಅವರಿಗೆ ದೊಡ್ಡ ಕಳಶದಂತೆ. ಅಂಬರೀಶ್ ಅವರು ನಮ್ಮ ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅವರಿಗೊಂದು ಅದೃಷ್ಟ. ಹಾಗೆಯೇ ಮಂಡ್ಯದ ಮಣ್ಣಿನ ಮಗ ಎನಿಸಿಕೊಳ್ಳಲು ಅಷ್ಟೇ ಅದೃಷ್ಟ ಮಾಡಿದ್ದರು.

Comments are closed.