ಕರ್ನಾಟಕ

ಆಪರೇಷನ್ ಕಮಲದ ಪಟ್ಟಿಯಲ್ಲಿರುವ 18 ಕಾಂಗ್ರೆಸ್ ಶಾಸಕರು ಯಾರು?

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ಆಪರೇಷನ್ ಕಮಲದ್ದೇ ಮಾತು… ದೀಪಾವಳಿ ಹಬ್ಬದ ವೇಳೆ ಧಮಾಕ ಮಾಡುವುದಾಗಿ ಬಿಜೆಪಿ ನಾಯಕರು ಘಂಟಾಘೋಷವಾಗಿ ಹೇಳಿಕೊಂಡಿದ್ದರು. ದೀಪಾವಳಿ ಹಬ್ಬವೂ ಹೋಗಿ ಡಿಸೆಂಬರ್ ಚಳಿ ಬರುತ್ತಿದೆ. ಮೈತ್ರಿ ಸರಕಾರ ಬೆಚ್ಚಗೆ ರಗ್ಗು ಹೊದ್ದಿ ತನ್ನ ಪಾಡಿಗೆ ತಾನು ಸಾಗುತ್ತಿದೆ. ಸಿದ್ದರಾಮಯ್ಯ, ಡಿಕೆಶಿಯ ಹೆಬ್ಬಂಡೆಗಳನ್ನು ದಾಟಿ ಹೋಗಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಶತಪ್ರಯತ್ನ ಮಾತ್ರ ನಿಂತಿಲ್ಲ. ಯಡಿಯೂರಪ್ಪ ಹಾಗೂ ಅವರ ಕೆಲ ಸಹೋದ್ಯೋಗಿಗಳು ನಿನ್ನೆ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾದ ಘಟನೆ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿತು. ಬಿಜೆಪಿಯವ್ರು ನೇರಾನೇರ ಡಿಕೆಶಿಗೇ ಗಾಳ ಹಾಕಿದ್ದಾರೆಂಬ ಮಾತುಗಳು ಕೇಳಿಬಂದವು. ಹಿಂದೆ ಐಟಿ ದಾಳಿ ವೇಳೆ ಡಿಕೆಶಿಯನ್ನು ಸೆಳೆಯಲು ಬಿಜೆಪಿ ವಿಫಲಪ್ರಯತ್ನ ಮಾಡಿತೆಂಬ ಸುದ್ದಿ ಇತ್ತು. ಈ ಬಾರಿಯೂ ಬಿಜೆಪಿ ಅಂಥ ಪ್ರಯತ್ನಕ್ಕೆ ಕೈಹಾಕಿರಬಹುದೆಂಬ ಚರ್ಚೆಗಳು ನಡೆದವು. ಆದರೆ, ಡಿಕೆಶಿ-ಬಿಎಸ್​ವೈ ಅವರ ಈ ಭೇಟಿಯ ರಹಸ್ಯ ಹಾಗೂ ಅದರ ನಿಜವಾದ ಒಳವಿಚಾರ ನ್ಯೂಸ್18 ಕನ್ನಡಕ್ಕೆ ಸಿಕ್ಕಿದೆ.

ಆಪರೇಷನ್ ಕಮಲದ ಗಾಳಕ್ಕೆ 18 ಮಂದಿ?
ಬಿಜೆಪಿ ಆಪರೇಷನ್ ಕಮಲದ ಮೂಲಕ ಆಲೌಟ್ ವಾರ್​ಗೆ ಮುಂದಾಗಿದೆ. ಕಾಂಗ್ರೆಸ್​ನಿಂದ 18 ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ. ಅವರಲ್ಲಿ ಐವರು ಈಗಾಗಲೇ ಬಿಜೆಪಿಯತ್ತ ವಾಲಿದ್ದಾರೆಂಬ ಸುದ್ದಿ ಇದೆ. ಬೆಳಗಾವಿ, ಬಳ್ಳಾರಿ, ರಾಯಚೂರು, ಕೋಲಾರ ಭಾಗದ ಶಾಸಕರ ತಂಡ ಈಗಾಗಲೇ ರಾಜ್ಯ ಬಿಟ್ಟಿದ್ದಾರಂತೆ.. ಹೈದರಾಬಾದ್ ಮೂಲಕ ಐವರು ಪುಣೆಗೆ ಹೋಗಿದ್ದಾರೆ ಅನ್ನೋ ಸುದ್ದಿ ಇದೆ. ಇನ್ನು, ಉಳಿದವರು 2 ತಂಡಗಳಾಗಿ ಮುಂಬೈಗೆ ಶಿಫ್ಟ್ ಆಗ್ತಾರಂತೆ. ಸಂಪುಟ ವಿಸ್ತರಣೆಗೆ ಸದ್ಯಕ್ಕೆ ಡೌಟ್ ಅಂತ ಫಿಕ್ಸ್ ಆಗಿರೋ ಈ ಅತೃಪ್ತರು ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎನ್ನಲಾಗಿದೆ.. 18 ಜನರಲ್ಲಿ 8 ಶಾಸಕರಿಗೆ ಸಚಿವ ಸ್ಥಾನ, ಹಾಗೂ ಉಳಿದವ್ರಿಗೆ ಬೃಹತ್ ಆರ್ಥಿಕ ಸಹಾಯದ ಭರವಸೆ ಸಿಕ್ಕಿದ್ಯಂತೆ.

ಯಾರು ಈ 18 ಶಾಸಕರು?
ಹೊಸಕೋಟೆ MLA ಎಂಟಿಬಿ ನಾಗರಾಜ್, ಮುಳಬಾಗಿಲು ಶಾಸಕ ನಾಗೇಶ್, ಅರಣ್ಯ ಸಚಿವ ಶಂಕರ್, ಹಡಗಲಿ ಶಾಸಕ ಭೀಮಾನಾಯ್ಕ, ಬಳ್ಳಾರಿ ಗ್ರಾ. ಶಾಸಕ – ನಾಗೇಂದ್ರ, ವಿಜಯನಗರ ಶಾಸಕ – ಆನಂದಸಿಂಗ್ , ಕಂಪ್ಲಿ ಶಾಸಕ- ಗಣೇಶ್, ರಾಯಚೂರು ಗ್ರಾ. ಶಾಸಕ – ಬಸವರಾಜ್ ದದ್ದಲ, ಮಸ್ಕಿ ಶಾಸಕ- ಪ್ರತಾಪಗೌಡ ಪಾಟೀಲ, ಲಿಂಗಸಗೂರು ಶಾಸಕ- ಡಿಎಸ್ ಹುಲಗೇರಿ, ಕಾಗವಾಡ ಶಾಸಕ – ಶ್ರೀಮಂತ ಪಾಟೀಲ, ಅಥಣಿ ಶಾಸಕ – ಮಹೇಶ್​ ಕಮಟಹಳ್ಳಿ. , ಭದ್ರಾವತಿ ಶಾಸಕ- ಬಿ.ಕೆ ಸಂಗಮೇಶ್ವರ, ಹಿರೇಕೆರೂರು ಶಾಸಕ- ಬಿ.ಸಿ ಪಾಟೀಲ್, ಸಚಿವ ರಮೇಶ್ ಜಾರಕಿಹೊಳಿ‌, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಜೊತೆ ಬಿಜೆಪಿ ಸಂಪರ್ಕದಲ್ಲಿದೆ ಎನ್ನಲಾಗಿದೆ.

ಡಿಕೆಶಿ ತಿರುಮಂತ್ರಕ್ಕೆ ಬೆಚ್ಚಿದ ಬಿಜೆಪಿ:

ಆಪರೇಷನ್ ಕಮಲದ ಮಾಹಿತಿ ಸಿಗುತ್ತಿದ್ದಂತೆಯೇ ಸಚಿವ ಡಿಕೆಶಿ ಫುಲ್ ಅಲರ್ಟ್ ಆಗಿದ್ದಾರೆ. ಬಿಜೆಪಿ ಆಪರೇಷನ್‌ಗೆ ರಿವರ್ಸ್ ಆಪರೇಷನ್ ಶುರುಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಹಲವು ಶಾಸಕರ ಜೊತೆ ಡಿಕೆಶಿ ನಿರಂತರ ಸಂಪರ್ಕದಲ್ಲಿದ್ದಾರಂತೆ. ಹಿರಿಯೂರು ಶಾಸಕಿ ಪೂರ್ಣಿಮಾ, ದೇವದುರ್ಗ ಶಾಸಕ-ಶಿವನಗೌಡ ನಾಯಕ್, ಹಾಸನ‌ ಶಾಸಕ- ಪ್ರೀತಂ ಗೌಡ, ಹೊಸದುರ್ಗ ಶಾಸಕ- ಗೂಳಿಹಟ್ಟಿ ಶೇಖರ್, ವೀರಶೈವ ಶಾಸಕರ ಜೊತೆಯೂ ಡಿಕೆಶಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.. ಡಿಕೆಶಿಯ ಈ ರಿವರ್ಸ್ ಆಪರೇಷನ್‌ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ತಲ್ಲಣಗೊಳಿಸಿದೆ.. ನಿನ್ನೆ ದಿಢೀರ್ ಅಂತ ಡಿಕೆಶಿ ಮನೆಗೆ ತಾವೇ ಭೇಟಿ ಕೊಟ್ಟು ಈ ಬಗ್ಗೆ ಚರ್ಚಿಸಿದ್ದಾರಂತೆ. ನಿಮ್ಮ ಶಾಸಕರ ಸುದ್ದಿಗೆ ನಾವು ಬರಲ್ಲ. ನಮ್ಮ ಶಾಸಕರ ಸುದ್ದಿಗೆ ನೀವು ಬರಬೇಡಿ ಅಂತ ಮನವಿ ಮಾಡಿದ್ದಾರಂತೆ. ಇದೇ ಕಾರಣಕ್ಕೇ ನಿನ್ನೆ ಡಿಕೆಶಿಯನ್ನ ಬಿಎಸ್‌ವೈ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮ್ಮ ಪಕ್ಷದ ಶಾಸಕರನ್ನ ಕಟ್ಟಿಹಾಕಲು ಬಿಜೆಪಿಯವರು ಇಂದು ಸಭೆ ಕೂಡ ನಡೆಸಿದ್ದಾರೆ.

Comments are closed.