ಕರ್ನಾಟಕ

ಆಟೋ ಡ್ರೈವರ್ ಹೆಂಡತಿ ಶಿವಮೊಗ್ಗದ ಮಹಾನಗರ ಪಾಲಿಕೆಯ ನೂತನ ಮೇಯರ್

Pinterest LinkedIn Tumblr


ಶಿವಮೊಗ್ಗ: ಶಿವಮೊಗ್ಗದ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ನಿರೀಕ್ಷೆಯಂತೆ ಬಿಜೆಪಿಯ ಪಾಲಾಗಿದೆ. ಎಸ್​ಸಿ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನವನ್ನು ಬಿಜೆಪಿಯ ಲತಾ ಗಣೇಶ್ ಗಿಟ್ಟಿಸಿದ್ದಾರೆ. ಉಪಮೇಯರ್ ಆಗಿ ಚೆನ್ನಬಸಪ್ಪ ಆಯ್ಕೆಯಾಗಿದ್ದಾರೆ.

ಇಂದು ಮೇಯರ್ ಗದ್ದುಗೆಗೆ ನಡೆದ ಚುನಾವಣೆಯಲ್ಲಿ ಲತಾ ಗಣೇಶ್ ಅವರು 26 ಮತಗಳನ್ನ ಪಡೆದರು. ಸಮೀಪದ ಕಾಂಗ್ರೆಸ್​ನ ಮೇಯರ್ ಅಭ್ಯರ್ಥಿ ಮಂಜುಳಾ ಶಿವಣ್ಣ ಅವರು 12 ಮತ ಪಡೆದು ಸೋತರು. ಉಪಮೇಯರ್ ಸ್ಥಾನದ ಸ್ಪರ್ಧೆಯಲ್ಲೂ ಬಿಜೆಪಿ ಇಷ್ಟೇ ಮತಗಳ ಅಂತರದಿಂದ ಗೆದ್ದಿತು. ಮೈತ್ರಿ ಅಭ್ಯರ್ಥಿ ಯೋಗೀಶ್ ವಿರುದ್ಧ ಬಿಜೆಪಿಯ ಚೆನ್ನಬಸಪ್ಪ ಸುಲಭ ಗೆಲುವು ಪಡೆದರು.

35 ಪಾಲಿಕೆ ಸದಸ್ಯರ ಜೊತೆ ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಸೇರಿ ಒಟ್ಟು 40 ಮಂದಿ ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಪಾಲಿಕೆಯಲ್ಲಿ ಬಿಜೆಪಿ ಬರೋಬ್ಬರಿ 21 ಸದಸ್ಯರನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಮೇಯರ್ ಸ್ಥಾನ ಸಿಗುವುದು ಖಚಿತವಾಗಿತ್ತು.

ಆದರೆ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಮೇಯರ್ ಸ್ಥಾನವನ್ನು ಗಿಟ್ಟಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಪ್ರಯತ್ನಿಸಿ ಸೋತವು. ಬಿಜೆಪಿ ಇಬ್ಬರು ಬಂಡಾಯ ಸದಸ್ಯರನ್ನು ಸೆಳೆದುಕೊಳ್ಳಲೂ ಮೈತ್ರಿ ಪಕ್ಷಗಳು ವಿಫಲವಾದವು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿತ್ತು. ಪಾಲಿಕೆಯ 35 ಸ್ಥಾನಗಳ ಪೈಕಿ ಬಿಜೆಪಿ 21 ವಾರ್ಡ್​ಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು.

ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಲತಾ ಗಣೇಶ್ ಅವರು ಆಟೋಚಾಲಕರೊಬ್ಬರ ಪತ್ನಿಯಾಗಿದ್ದಾರೆ. ಗಾಡಿಕೊಪ್ಪದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಿದ ಲತಾ ಗಣೇಶ್ ಅವರು ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿಯ ಏಕೈಕ ಮಹಿಳೆಯಾಗಿದ್ದರು. ಚುನಾವಣೆಯಾದ ದಿನದಂದೇ ಸರಕಾರವು ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮೀಸಲು ಪ್ರಕಟಸಿತು. ಮೇಯರ್ ಸ್ಥಾನವು ಎಸ್​ಸಿ ಮಹಿಳೆಗೆ ಮೀಸಲಾಗಿದ್ದ ಹಿನ್ನೆಲೆಯಲ್ಲಿ ಲತಾ ಗಣೇಶ್ ಅವರು ಮೇಯರ್ ಆಗುವುದು ನಿರೀಕ್ಷಿತವೇ ಆಗಿತ್ತು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಲತಾ ಗಣೇಶ್ ಅವರು ಗಾಡಿಕೊಪ್ಪದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪಕ್ಷದಲ್ಲಿ ತಕ್ಕ ಮಟ್ಟಿಗೆ ದುಡಿದ ಹಿನ್ನೆಲೆಯಲ್ಲಿ ಅವರನ್ನ ಗಾಡಿಕೊಪ್ಪ ವಾರ್ಡ್ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ರಿಕ್ಷಾ ಚಾಲಕನ ಪತ್ನಿಯಾದ ತನಗೆ ಚುನಾವಣೆ ಎದುರಿಸುವಷ್ಟು ಹಣಕಾಸು ಸೌಲಭ್ಯ ಇಲ್ಲವಲ್ಲ ಎಂಬುದು ಲತಾ ಅವರನ್ನು ಚಿಂತೆಗೀಡು ಮಾಡಿತ್ತು. ಚುನಾವಣೆಗೆ ಹಣ ಹೊಂದಿಸುವ ತಲೆಬಿಸಿಯಲ್ಲಿದ್ದ ಲತಾ ಅವರಿಗೆ ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ನೆರವಿಗೆ ಬಂದು ಬಹುತೇಕ ಚುನಾವಣಾ ಪ್ರಚಾರ ಕಾರ್ಯದ ಹೊಣೆ ಹೊತ್ತು ಗೆಲ್ಲಿಸಿದರು.

Comments are closed.