ಕರ್ನಾಟಕ

ಅಂಬಿ ಸಿಗರೇಟ್​ ಸೇದುವ ‘ಸ್ಟೈಲ್​ ಗೆ ಸೋತ ನಟರು!

Pinterest LinkedIn Tumblr


ಅಂಬಿ ಸಿಗರೇಟ್​ ಸೇದುವ ಸ್ಟೈಲ್​ಗೆ ಕೇವಲ ಹುಡುಗಿಯರೇ ಅಲ್ಲ ಹುಡುಗರೂ ಅಭಿಮಾನಿಗಳಾಗಿದ್ದಾರೆ. ಹೌದು ಅವರಿಗೆ ಅವರ ಮೊದಲ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದೂ ಅವರ ಈ ಸ್ಟೈಲ್​ನಿಂದಲೇ ಎಂದು ಹೇಳಲಾಗುತ್ತದೆ.

ಪುಟ್ಟಣ್ಣ ಕಣಗಾಲರಿಗೆ ರಾಜೇಂದ್ರ ಸಿಂಗ್​ ಬಾಬು ಅವರ ತಮ್ಮ ಸಂಗ್ರಾಮ್​ ಸಿಂಗ್​ ಅಂಬಿಯನ್ನು ಪರಿಚಯ ಮಾಡಿಸಿದ್ದರು. ‘ನಾಗರಹಾವು’ ಸಿನಿಮಾದಲ್ಲಿನ ಜಲೀಲನ ಪಾತ್ರಕ್ಕಾಗಿ ಅಂಬಿ ಆಡಿಷನ್​ ಕೊಟ್ಟಿದ್ದರು. ಆ ಆಡಿಷನ್​ನಲ್ಲಿ ಸ್ಟೈಲಿಶ್​ ಆಗಿ ನಡೆಯಬೇಕಿತ್ತು. ಇದಾದ ನಂತರ ಅವರು ಸಿಗರೇಟ್​ ಸೇದಿದ ರೀತಿಯನ್ನು ನೋಡಿಯೇ ಕಣಗಾಲರು ಓಕೆ ಎಂದಿದ್ದರಂತೆ.

ಅಂಬಿಗೆ ಕಾಲೇಜು ದಿನಗಳಿಂದಲೇ ಸಿಗರೇಟ್​ ಸೇದುವ ಚಟವಿತ್ತು. ಅದರಲ್ಲೂ ಅದನ್ನು ಸ್ಟೈಲಿಶ್​ ಆಗಿ ಸೇದುವುದೆಂದರೆ ತುಂಬಾ ಇಷ್ಟವಂತೆ. ಇನ್ನೂ ಅವರಿಗೆ ‘ಅಂತ’ ಸಿನಿಮಾದಲ್ಲಂತೂ ಅವರ ಇಷ್ಟ ಪಾತ್ರವೇ ಸಿಕಿತ್ತು. ಅದೇ ‘ಕನ್ವರ್​ ಲಾಲ್​’.

ಹೌದು ಕೈಯಲ್ಲಿ ಸಿಗರೇಟ್​ ಹಿಡಿದು ಧಮ್​ ಎಳೆದು ಹೊಗೆ ಬಿಡುತ್ತಾ ‘ಕುತ್ತೇ ಕನ್ವರ್​ ನಹೀ ಕನ್ವರ್​ ಲಾಲ್​ ಬೋಲೋ’ ಎಂದರೆ ಚಿತ್ರಮಂದಿರಗಳಲ್ಲಿ ಚಪ್ಪಾಳೆಯ ಸುರಿ ಮಳೆಯಾಗುತ್ತಿತ್ತು.

ಈ ಸಿನಿಮಾವನ್ನು ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ರೀಮೇಕ್​ ಮಾಡಲಾಗಿತ್ತು. ತೆಲುಗಿನಲ್ಲಿ ‘ಅತಂ ಕಾದಿದಿ ಆರಂಭಂ’ ಸೂಪರ್​ ಸ್ಟಾರ್​ ಕೃಷ್ಣ ಹಾಗೂ ಹಿಂದಿಯಲ್ಲಿ ‘ಮೇರಿ ಆವಾಜ್​ ಸುನೋ’ ಜಿತೇಂದ್ರ ಅಭಿಯನಿಸಿದ್ದಾರೆ. ಆದರೆ ಈ ಇಬ್ಬರೂ ನಟರು ಸಿಗರೇಟ್​ ಹಿಡಿದು ಸೇದುವ ರೀತಿ ಅಂಬಿ ಸಿಗರೇಟ್​ ಸೇದುವ ಸ್ಟೈಲ್​ಗೆ ಹತ್ತಿರಕ್ಕೂ ಮ್ಯಾಚ್​ ಆಗುತ್ತಿರಲಿಲ್ಲ.

ಈ ಬಗ್ಗೆ ಖಾಸಗಿ ವಾಹಿನಿಯಲ್ಲಿ ನಿರೂಪಕರೊಬ್ಬರು ಪ್ರಶ್ನೆ ಕೇಳಿದಾಗ ಅಂಬಿ ಉತ್ತರಿಸಿದ್ದ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಹೌದು ನಟ ಕೃಷ್ಣ ಹಾಗೂ ಅಂಬಿ ಒಳ್ಳೆಯ ಸ್ನೇಹಿತರು. ಅದರಲ್ಲೂ ಪ್ರಿನ್ಸ್​ ಮಹೇಶ್​ ಬಾಬು ಸಹ ಅಂಬಿಯೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ.

‘ಅಂತ’ ಸಿನಿಮಾದಲ್ಲಿ ಕನ್ವರ್​ ಲಾಲ್​ ಪಾತ್ರದಲ್ಲಿ ಅಂಬಿ

‘ಕೃಷ್ಣ ಅವರಿಗೆ ಸಿಗರೇಟ್​ ಸೇದಲು ಬರುವುದಿಲ್ಲ ಅಂತ ನಾನು ಹೇಳಿದರೆ, ಮಹೇಶ್​ ಸುಮ್ಮನಿರುತ್ತಾನಾ..? ಇನ್ನೂ ನಾನು ಗಟ್ಟಿಯಾಗಿ ಹೊಗೆ ಒಳಗೆ ಎಳೆದರೆ, ಎಂದೂ ಸಿಗರೇಟ್​ ಮುಟ್ಟದ ಅವರು ಸುಮ್ಮನೆ ತುಟಿಗೆ ತಾಗಿಸಿ ಹೊಗೆ ಬಿಡುತ್ತಿದ್ದರು. ಇಂತಹ ವಿಷಯಗಳನ್ನು ಎಳೆಯ ಬಾರದು’ ನಿರೂಪಕರಿಗೆ ತಮ್ಮದೇ ಆದ ಶೈಲಿಯಲ್ಲಿ ನಗುತ್ತಾ ಮಾತು ಬದಲಿಸಿದ್ದರು ಅಂಬಿ.

ಅಂಬಿಗೆ ಯಾವ ಸಮಯದಲ್ಲಿ ಈ ಚಟ ಅಂಟಿಕೊಂಡಿತೋ ಗೊತ್ತಿಲ್ಲ. ಆದರೆ ಅವರು ಕೊನೆಯುಸಿರೆಳೆಯುವ ವರೆಗೂ ಅದು ಅವರನ್ನು ಬಿಡಲಿಲ್ಲ. ಯಾರಾದರೂ ಅದನ್ನು ಬಿಡುವಂತೆ ಕೇಳಿದರೆ ನಾಳೆ ಸಾಯುವವನು ಇವತ್ತು ಸಾಯುತ್ತೀನಿ ಅಷ್ಟೆ ಅಲ್ವಾ ಎಂದು ಉಡಾಫೆಯ ಉತ್ತರ ನೀಡುತ್ತಿದ್ದರು.

(ಧೂಮಪಾನಕ್ಕೆ ನಾವು ಉತ್ತೇಜನ ನೀಡುವುದಿಲ್ಲ…. ಧೂಮಪಾನ ಹಾನಿಕರ)

Comments are closed.