ಕರ್ನಾಟಕ

ಅಂಬಿ ಹಣೆಗೆ ಮಂಡ್ಯದ ಮಣ್ಣಿನ ತಿಲಕವಿಟ್ಟ ಸುಮಲತಾ..!

Pinterest LinkedIn Tumblr


ಮಂಡ್ಯ,: ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್ ಇನ್ನು ನೆನಪು ಮಾತ್ರ. ಅತ್ತ ಮಂಡ್ಯದ ಲಕ್ಷಾಂತರ ಮಂದಿ ಇಹಲೋಕ ತ್ಯಜಿಸಿದ ಅಜಾತ ಶತ್ರುವಿನ ಅಂತಿಮ ದರ್ಶನ ಪಡೆಯುವ ಮೂಲಕ ಕಣ್ಣೀರ ಕಂಬನಿ ಹರಿಸಿದರೆ, ಇತ್ತ ಅಂಬಿ ಹಣೆಗೆ ಮಂಡ್ಯ ಮಣ್ಣಿನ ತಿಲಕವಿಟ್ಟು ಜಿಲ್ಲೆಯ ಋಣ ನಮ್ಮ ಮೇಲಿದೆ ಎನ್ನುವುದನ್ನು ಕುಟುಂಬ ವರ್ಗ ಸಾಬೀತು ಮಾಡಿತು.

ಮಣ್ಣಿನ ಋಣವೇ ಹಾಗೆ. ಎಲ್ಲಿದ್ದರೂ ಅದು ಬಿಡೋದಿಲ್ಲ. ಇದು ಅಕ್ಷರಶಃ ಸತ್ಯವೂ ಹೌದು. ಯಾಕೆಂದರೆ ಇಂದು ಮೃತ ಅಂಬಿ ಹಣೆಗೆ ಪತ್ನಿ ಮತ್ತು ಪುತ್ರ ಮಂಡ್ಯ ನೆಲದ ಮಣ‍್ಣನ್ನು ಹಚ್ಚುವ ಮೂಲಕ ಜಿಲ್ಲೆಯ ಜನರ ಋಣವನ್ನು ನೆನೆದರು. ಅಂಬಿ ಹಣೆಗೆ ಮಣ್ಣಿನ ತಿಲಕವಿಡುತ್ತಿದ್ದಂತೆ ಅಭಿಮಾನಿಗಳ ಜೈಕಾರ ಹೆಲಿಕಾಪ್ಟರ್ ಶಬ್ಧವನ್ನೂ ನಿಶ್ಯಬ್ಧ ಮಾಡಿತು. ಅಭಿಮಾನಿಗಳ ಕಣ‍್ಣೀರು, ಪತಿ ಸುಮಲತಾರ ಕಣ‍್ಣೀರು, ಪುತ್ರ ಅಭಿಷೇಕ್ ಜಿಲ್ಲೆಯ ಜನರಿಗೆ ತೋರಿದ ಗೌರವ ಇಡೀ ಜಿಲ್ಲೆಯ ಜನರ ಹೃದಯ ಮುಟ್ಟಿತು.

ಇನ್ನು ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಡ್ಯದ ಗಂಡು ಅಂಬರೀಶ್ ಪಾರ್ಥಿವ ಶರೀರವನ್ನು ಸೇನಾ ಹೆಲಿಕ್ಯಾಪ್ಟರ್ ಮೂಲಕ ನಿನ್ನೆ ಸಂಜೆ‌ 4 ಗಂಟೆಗೆ ತಂದಿದ್ದು ಸುಮಾರು 16 ಗಂಟೆಗಳ ಕಾಲ ಅಭಿಮಾನಿಗಳ ದರ್ಶನಕ್ಕೆ ಇಡಲಾಗಿತ್ತು. ಸುಮಾರು 3 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು. ಈ ವೇಳೆ ಎಲ್ಲರೂ ಅಂಬಿಗೆ ನಮನ ಸಲ್ಲಿಸುವ ಜೊತೆಗೆ, ಅಭಿಷೇಕ್ ಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಧೈರ್ಯವನ್ನು ದೂರದಿಂದಲೇ ತುಂಬುತ್ತಿದ್ದರು. ಅಲ್ಲದೇ ತಮ್ಮ ನೆಚ್ಚಿನ ನಟನ ಸಾವಿಗೆ ಕಂಬನಿ ಮಿಡಿದರು.

ಇಂದು 10 ಗಂಟೆಗೆ ಮಿಲಿಟರಿ ಹೆಲಿಕಾಪ್ಟರ್ ಬರುತ್ತಿದ್ದಂತೆ ಪಾರ್ಥಿವ ಶರೀರವನ್ನು ಕಾಪ್ಟರ್ ಬಳಿ ತೆಗೆದುಕೊಂಡು ಹೋಗಲಾಯಿತು. ಈ ಸಂದರ್ಭ ಪಾರ್ಥೀವ ಶರೀರವನ್ನು ಕೆಳಗೆ ಇಳಿಸಿ ಅಂಬಿ ಪತ್ನಿ ಸುಮಲತಾ ಹಾಗೂ ಪುತ್ರ ಅಭಿಷೇಕ್ ಮಂಡ್ಯ ಮಣ‍್ಣನ್ನು ಅಂಬಿ ಹಣೆಗೆ ಹಚ್ಚಿ ಮಣ್ಣಿನ ಋಣಕ್ಕೆ ಋಣಿಯಾದರು.

ಅಂಬಿ ಪಾರ್ಥಿವ ಶರೀರವನ್ನ ಬೆಂಗಳೂರಿನತ್ತ ಕೊಂಡೊಯ್ಯುವ ವೇಳೆ ಅಭಿಷೇಕ್ ಕ್ರೀಡಾಂಗಣವನ್ನು ಒಂದು ಸುತ್ತು ಹಾಕಿ ತನ್ನ ತಂದೆಯ ಅಂತಿಮ ದರ್ಶನಕ್ಕೆ ಬಂದ ಅಭಿಮಾನಿಗಳಿಗೆ ಕೈ‌ ಮುಗಿದು ಕೃತಜ್ಣತೆ ಸಲ್ಲಿಸಿದರು. ಆ ಮೂಲಕ ಸ್ಟೇಡಿಯಂ ಸುತ್ತಲು ಕುಳಿತಿದ್ದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿಗೆ ನಮಸ್ಕಾರ ಮಾಡಿ ಗೌರವ ಸಲ್ಲಿಸಿದರು.

ಈ ವೇಳೆ ಅಭಿಮಾನಿಗಳು ಅಂಬಿಗೆ ಜೈಕಾರ ಹಾಕುವ ಮೂಲಕ ಅಂಬರೀಶ್ ಮೇಲಿನ ತಮ್ಮ ಪ್ರೀತಿ, ಅಭಿಮಾನ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ನಿನ್ನೆ ಪಾರ್ಥಿವ ಶರೀರದ ಜೊತೆಗೆ ಬಂದಿದ್ದ ಸಿಎಂ ಕುಮಾರಸ್ವಾಮಿ ಇಂದು ಕೂಡ ಆಗಮಿಸಿ ಅಂತಿಮ ದರ್ಶನ‌ ಪಡೆದು ಕಂಠೀರವ ಕ್ರೀಡಾಂಗಣದಲ್ಲಿ ರಾಜ್ ಪಕ್ಕದ ಸಮಾಧಿ ಸ್ಥಳದ ಬಳಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದರು. ಅಂಬಿ ಪುತ್ಥಳಿ ನಿರ್ಮಿಸುವ ಬಗ್ಗೆ ಚಿಂತನೆ‌ ಮಾಡಿರುವುದಾಗಿ ತಿಳಿಸಿದರು. ಮಂಡ್ಯ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದರು.

ಒಟ್ಟಿನಲ್ಲಿ ಅಂಬಿಯ ಅಂತಿಮ ದರ್ಶನ ಪಡೆಯಲು ಬಂದಿದ್ದ‌ ಸಾವಿರಾರು ಅಭಿಮಾನಿಗಳ ಅಂತಿಮವಾಗಿ ಭಾರವಾದ ಹೃದಯದಿಂದಲೇ ಅಂಬಿಯನ್ನು ಹೊತ್ತ ಹೆಲಿಕಾಪ್ಟರ್ ಗೆ ವಿದಾಯ ಹೇಳಲಾಯಿತು. ಅಂಬಿಗೆ ಜೈಕಾರ ಹಾಕಿ ಅಭಿಮಾನಿಗಳು ಅಂತಿಮ ವಿದಾಯದ ನುಡಿನಮನ ಸಲ್ಲಿಸಿದರೆ. ಮದ್ದೂರು ತಾಲೂಕಿನ ಇಬ್ಬರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಅಗಲಿಕೆ ಸಹಿಸದೆ ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ದುರಂತ.

Comments are closed.