ಕರ್ನಾಟಕ

ಪುಟ್ಟಣ್ಣ ಕಣಗಾಲರ ಸಿಟ್ಟನ್ನು ಹೋಗಲಾಡಿಸುತ್ತಿದ್ದ ಅಂಬಿ..!

Pinterest LinkedIn Tumblr


ಪುಟ್ಟಣ್ಣ ಅವರ ಮುಂದೆ ನಿಂತು ಮಾತನಾಡಲು ಸ್ಟಾರ್​ ನಟರೇ ಹೆದರುತ್ತಿದ್ದರು. ಅಂತಹ ನಿರ್ದೇಶಕನ ಸಿಟ್ಟನ್ನು ನಗುವಿನಲ್ಲಿ ಬಲಾಯಿಸುತ್ತಿದ್ದರು ಅಂಬರೀಷ. ಅದು ಹೇಗೆ ಅಂತೀರಾ… ಇದನ್ನೆಲ್ಲ ಕಣ್ಣಾರೆ ನೋಡುತ್ತಿದ್ದ ಪ್ರತ್ಯಕ್ಷದರ್ಶಿ ಒಬ್ಬರು ಇದ್ದಾರೆ. ಅವರು ಯಾರು, ಏನು ಅವರು ಕಂಡದ್ದು ಅಂತ ಈ ವರದಿ ಓದಿ ನಿಮಗೆ ತಿಳಿಯುತ್ತದೆ.

ಸಿನಿರಂಗ ಕಂಡ ಅತ್ಯುತ್ತಮ ನಿರ್ದೇಶಕ ಎಂದರೆ ಅದು ಪುಟ್ಟಣ್ಣ ಕಣಗಾಲರು. ಅವರ ಶಿಸ್ತು, ಚಿತ್ರೀಕರಣದ ಸೆಟ್​ನಲ್ಲಿ ಪುಟ್ಟಣ್ಣ ಇರುತ್ತಿದ್ದ ರೀತಿ ನೋಡಿದರೆ ಯಾರೊಬ್ಬರೂ ಅವರ ಬಳಿಯೂ ನಿಲ್ಲುತ್ತಿರಲಿಲ್ಲ.

ಆಗಿನ ಕಾಲಕ್ಕೆ ಬಾಲಿವುಡ್​ ನಟರೂ ಸಹ ಸೆಟ್​ಗಳಲ್ಲಿ ಪುಟ್ಟಣ್ಣ ಅವರ ಮೇಲಿನ ಭಯ-ಭಕ್ತಿಯಿಂದ ಚಿತ್ರೀಕರಣಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ಆದರೆ ಅಂಬಿ ಮಾತ್ರ ಮೊದಲ ಸಿನಿಮಾದಿಂದಲೇ ಒಂದು ದಿನವೂ ಚಿತ್ರೀಕರಣಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ.

ಹೀಗಿರುವಾಗ ಪ್ರತಿ ಸಲವೂ ಚಿತ್ರೀಕರಣಕ್ಕೆ ತಡವಾಗಿ ಬರುವುದಲ್ಲದೆ, ಅದಕ್ಕೆ ಒಂದೇ ಸುಳ್ಳನ್ನು ಕಾರಣವಾಗಿ ಕೊಡುತ್ತಿದ್ದರು ಅಂಬಿ. ಸತ್ಯ ತಿಳಿದಿದ್ದ ಪುಟ್ಟಣ್ಣ ಅಂಬಿಯನ್ನು ಗುರಾಯಿಸುತ್ತಿದ್ದರಂತೆ. ಆಗ ಅಂಬಿ ಏನು ಜಾದು ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಹಿರಿಯ ಸಿನಿಮಾ ಸ್ಟಿಲ್​ ಛಾಯಾಗ್ರಾಹಕ ಪ್ರಗತಿ ಅಶ್ವಥ್​ ನಾರಾಯಣ್​ ಅವರೇ ಹೇಳಿಕೊಂಡಿದ್ದಾರೆ.

ಅಂಬಿಯ ಮೊದಲ ಸಿನಿಮಾಗಾಗಿ ಅವರ ಫೋಟೋಶೂಟ್​ ಮಾಡಿದ್ದ ಅಶ್ವಥ್​ ಅವರು  ಮಾತನಾಡಿ, ‘ಅಂಬಿ ಸದಾ ಒಂದಲ್ಲ ಒಂದು ಕಾರಣಗಳಿಂದಾಗಿ ಚಿತ್ರೀಕರಣಕ್ಕೆ ತಡವಾಗಿ ಬರುತ್ತಿದ್ದರು. ಅದರಲ್ಲೂ ರಾತ್ರಿವೇಳೆ ಸ್ನೇಹಿತರೊಂದಿಗೆ ಸುತ್ತಾಡಿ ತಡವಾಗಿ ಮನೆಗೆ ಹೋಗುತ್ತಿದ್ದ ಅಂಬಿ ಬೆಳಿಗ್ಗೆ ನಿಧಾನವಾಗಿ ಎದ್ದು ಚಿತ್ರೀಕರಣದ ಸೆಟ್​ಗೆ ಎರಡು ಗಂಟೆ ಲೇಟಾಗಿ ಬರುತ್ತಿದ್ದರು. ಆಗ ಅವರಾಗಿಯೇ ಪುಟ್ಟಣ್ಣನ ಬಳಿ ಬಂದು ಕಾರು ಪಂಚರ್​ ಆಗಿ ಹೋಗಿತ್ತು. ಸರಿಮಾಡಿಸಿಕೊಂಡು ಬಂದೆ ಅಂತ ಒಮ್ಮೆ ಹೇಳಿದರೆ, ಮತ್ತೆ ಕೆಲವೊಮ್ಮೆ ಟೈರ್​ ಪಂಚರ್​ ಆದರೂ ಸಹ ವೀಲ್​ನಲ್ಲೇ ಚಾಲನೆ ಮಾಡಿಕೊಂಡು ಬಂದಿದ್ದೀನಿ ಎನ್ನುತ್ತಿದ್ದರು ಅಂಬಿ’ ಎಂದು ವಿವರಿಸುತ್ತಾರೆ ಅವರು.

‘ಅಷ್ಟೇ ಅಲ್ಲ, ಅಂಬಿಯ ಯಾವ ಮಾತಿಗೂ ಪ್ರತಿಕ್ರಿಯೆ ನೀಡದೆ ನಿಂತಿರುವ ಪುಟ್ಟಣ್ಣ, ಒಮ್ಮೊಮ್ಮೆ ಮಾತನಾಡುತ್ತಿದ್ದರು. ಹೋಗೋ ನಿನ್ನ ಕಾರಿನ ಟೈರ್​ ಟ್ಯೂಬ್​ಲೆಸ್​ ಅದು ಯಾವಾಗ ಪಂಚರ್​ ಆಗುತ್ತೆ ಎನ್ನುತ್ತಿದ್ದರಂತೆ. ಆಗ ಹತ್ತಿರಕ್ಕೆ ಬರುತ್ತಿದ್ದ ಅಂಬಿ ಅವರನ್ನು ಬಿಗಿದಪ್ಪಿ ನಗಿಸುತ್ತಿದ್ದರು. ಆಗ ಪುಟ್ಟಣ್ಣ ಅಂಬಿಯನ್ನು ‘ಫೋಲ್ಡಿಂಗ್ ಚೇರ್​​’ ತೆಗೆದುಕೊಂಡು ಅಟ್ಟಾಡಿಸುತ್ತಿದ್ದರಂತೆ. ಆಗ ಇಡೀ ಸೆಟ್​ನಲ್ಲೇ ನಗೆಯ ಹೂ ಚೆಲ್ಲುತ್ತಿತ್ತು’ ಎನ್ನುವಾಗ ಇಳಿವಯಸ್ಸಿನ ಜೀವ ಅಶ್ವಥ್​ ದನಿಯಲ್ಲಿ ಸಂತೋಷ ತುಂಬಿತ್ತು.

ಚಿತ್ರೀಕರಣಕ್ಕೆ ತಡವಾಗಿ ಬರುವ ಅಶಿಸ್ತಿನ ಉಡಾಫೆ ಮನುಷ್ಯನಾಗಿದ್ದ ಅಂಬಿ ಕೆಲಸದ ವಿಷಯದಲ್ಲಿ ಮಾತ್ರ ಪಕ್ಕಾ ಆಗಿದ್ದರು. ಇದೇ ಕಾರಣಕ್ಕೆ ಸಾಕಷ್ಟು ನಿರ್ದೇಶಕರು ಹಾಗೂ ನಿರ್ಮಾಪಕರು ಅಂಬಿಗೆ ಒಂದು ಮಾತೂ ಹೇಳುತ್ತಿರಲಿಲ್ಲ. ಎಲ್ಲರೊಂದಿಗೂ ಸ್ನೇಹದಿಂದ ನಿಷ್ಕಲ್ಮಶ ಪ್ರೀತಿ ತೋರಿಸುತ್ತಾ ಕೂಗಾಡಿದರೂ ಯಾರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ.

ಪುಟ್ಟಣ್ಣನ ಬಳಿ ಮಾತನಾಡಲು ಹೆದುರುತ್ತಿದ್ದ ದಿಗ್ಗಜ ನಟರು ಒಂದು ಕಡೆಯಾದರೆ, ಶಿಸ್ತಿನ ನಿರ್ದೇಶಕನನ್ನೇ ಮಕ್ಕಳಂತೆ ಆಟವಾಡಿಸುತ್ತಿದ್ದ ಅಂಬಿಯ ಮನಸ್ಸು ನಿಜಕ್ಕೂ ಮಗುವಿನಂತೆ ಎನ್ನಬಹುದು.

Comments are closed.