ಬೆಂಗಳೂರು: ಹಿರಿಯ ನಟ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಅಂಬಿಗೆ ಕಣ್ಣೀರ ವಿದಾಯ ಹೇಳಿದರು.
ಇಂದು ಸಂಜೆ ಕಂಠೀರವ ಸ್ಟುಡಿಯೋದಲ್ಲಿ ಒಕ್ಕಲಿಗ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಿಯುಗದ ಕರ್ಣನ ಅಂತ್ಯಕ್ರಿಯೆ ನಡೆಯಿತು. ಅಂಬರೀಷ್ ಅವರ ಪುತ್ರ ಅಭಿಷೇಕ್ ಗೌಡ ಅವರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಶ್ರೀರಂಗಪಟ್ಟಣದ ವೈದಿಕ ಪಂಡಿತ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದ ತಂಡ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ವಿಧಿ ವಿಧಾನಗಳನ್ನು ನೆರವೇರಿಸಿತು.
ಇದಕ್ಕು ಮುನ್ನ ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗಡ, ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ, ಹಿರಿಯ ನಟಿಯರಾದ ಬಿ.ಸರೋಜಾದೇವಿ, ಜಯಂತಿ, ನಟರಾದ ಶಿವರಾಜ್ ಕುಮಾರ್, ಯಶ್, ದರ್ಶನ್, ರವಿಚಂದ್ರನ್, ಸುಮನ್, ಚಿರಂಜೀವಿ, ರಾಕ್ ಲೈನ್ ವೆಂಕಟೇಶ್, ಪುನೀತ್ ರಾಜ್ ಕುಮಾರ್, ತೆಲುಗು ನಟರಾದ ಮೋಹನ್ ಬಾಬು ಮತ್ತು ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ಅಂಬಿಗೆ ಅಂತಿಮ ನಮನ ಸಲ್ಲಿಸಿದರು.
ಇದಕ್ಕೂ ಮೊದಲು ಕಂಠೀರವ ಸ್ಟೇಡಿಯಂ ಹಾಗೂ ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಮಂದಿ ದರ್ಶನ ಮಾಡಿದರು.
ಅಂಬರೀಷ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಮಹಾಪೂರವೇ ಕಂಠೀರವ ಸ್ಟೇಡಿಯಂಗೆ ಹರಿದುಬಂದಿತ್ತು. ರಾಜ್ಯ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4 ಗಂಟೆಯಿಂದ ಸೋಮವಾರ ಬೆಳಗ್ಗೆ 10 ಗಂಟೆಯವರೆಗೆ ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಅಂಬಿ ವಿಕ್ರಮ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅಸುನೀಗಿದ್ದರು.
Comments are closed.