ಕರ್ನಾಟಕ

ಹಳ್ಳಿಯಿಂದ ದಿಲ್ಲಿಯವರೆಗೆ ಅಸಾಧ್ಯ ಪದ ಮಣಿಸಿದ ಜಾಫರ್​ ಷರೀಫ್​

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​​ ಪಾಲಿಗೆ ಇಂದು ಕರಾಳ ದಿನ. ನಟ, ಮಾಜಿ ಸಚಿವ ಅಂಬರೀಶ್​​ ಬೆನ್ನಲ್ಲೇ ​ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಾಫರ್​​ ಷರೀಫ್​​ ಅವರನ್ನು ಕಾಂಗ್ರೆಸ್​​ ಪಾಳೆಯ ಕಳೆದುಕೊಂಡಿದೆ. ಮುಸ್ಲಿಂ ಸಮುದಾಯದಲ್ಲಿ ಪ್ರಭಾವಿ ನಾಯಕರೆಂದೇ ಗುರುತಿಸಲ್ಪಡುವ ಜಾಫರ್​ ಷರೀಫ್​ ಕಳೆದ ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ಕೊಂಚ ದೂರವೇ ಉಳಿದಿದ್ದರು ಎಂದರೂ ತಪ್ಪಾಗಲಾರದು. ಇದೀಗ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಯಕ ನಮ್ಮನ್ನಗಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆ ಜಾರಿಫ್​​ ಷರೀಫ್​​ರ ಹುಟ್ಟೂರು. 1933 ನವೆಂಬರ್​​ 3 ರಂದು ಜನಿಸಿದ ಇವರು, ಅಂದಿನ ಸಿಎಂ ಎಸ್​​. ನಿಜಲಿಂಗಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್​ ಸೇರಿದರು. ಎಸ್​​.ನಿಜಲಿಂಗಪ್ಪನವರ ಕಾಲದಲ್ಲಿಯೇ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಜಾಫರ್​​ ಷರೀಫ್​​ರು ಕಾಂಗ್ರೆಸ್​​ ಹೈಕಮಾಂಡ್​​ಗೆ ಆಪ್ತರಾಗುವ ಮಟ್ಟಕ್ಕೆ ಬೆಳೆದರು. ಇಂದಿಗೂ ಕಾಂಗ್ರೆಸ್​ ಹೈಕಮಾಂಡ್​​ ಮಟ್ಟದಲ್ಲಿ ಜಾಫರ್​​ ಅವರು ಭಾರೀ ಪ್ರಭಾವ ಹೊಂದಿದ್ದಾರೆ.

ಕಾಂಗ್ರೆಸ್​​ ಪಾಲಿಗೆ 1960-70 ರ ದಶಕ ಮಹತ್ವದ ಕಾಲಘಟ್ಟವಾಗಿತ್ತು. ಮಾಜಿ ಸಿಎಂ ಎಸ್​​.ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರನ್ನಾಗಿ 1968 ರಲ್ಲಿ ಆಯ್ಕೆ ಮಾಡಲಾಯ್ತು. ಈ ವೇಳೆ ಕರ್ನಾಟಕದಿಂದ ಆಯ್ಕೆಯಾದ ಕಾಂಗ್ರೆಸ್‌ನ ಏಕೈಕ ಅಧ್ಯಕ್ಷರು ಎಂಬ ಕೀರ್ತಿ ಎಸ್‌.ನಿಜಲಿಂಗಪ್ಪವರಿಗೆ ಸಲ್ಲಿತು. ಆದರೆ, ಎಸ್​​.ನಿಜಲಿಂಗಪ್ಪ ಅವರು ಅಧ್ಯಕ್ಷರಾದ ಅವಧಿಯಲ್ಲೇ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ನಡೆಯಿತು. ಹೀಗಾಗಿ 1969ರಲ್ಲಿ ಇಂದಿರಾ ಗಾಂಧಿ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರಕ್ಕೆ ನಿಜಲಿಂಗಪ್ಪನವರು ಬಂದರು.

1959ರಲ್ಲಿ ಕಾಂಗ್ರೆಸ್‌ ವಿಶೇಷ ಅಧಿವೇಶನದ ಅಧ್ಯಕ್ಷೆಯಾಗಿ ಇಂದಿರಾ ಗಾಂಧಿಯವರನ್ನು ಆಯ್ಕೆ ಮಾಡಲಾಗಿತ್ತು. ನಂತರ ಪ್ರಧಾನಿಯಾಗಿದ್ದ ಲಾಲ್‌ಬಹದ್ದೂರ್‌ ಶಾಸ್ತ್ರಿ 1966ರಲ್ಲಿ ನಿಧನರಾದರು. ಬಳಿಕ ಸಂಸದೀಯ ಪಕ್ಷದ ನಾಯಕರಾಗಿ ಇಂದಿರಾ ಅವರನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ 1966ರಿಂದ 71ರವರೆಗಿನ ಆಡಳಿತಾವಧಿಯಲ್ಲಿ ಪಕ್ಷದ ಹಲವಾರು ಮುಖಂಡರನ್ನು ಇಂದಿರಾ ಎದುರು ಹಾಕಿಕೊಂಡರು. ಕಾಂಗ್ರೆಸ್‌ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ನೀಲಂ ಸಂಜೀವ ರೆಡ್ಡಿಯವರ ಬದಲು ವಿ.ವಿ.ಗಿರಿಯವರನ್ನು ಸೂಚಿಸಿದ್ದು, ಕಾಂಗ್ರೆಸ್​ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಬಳಿಕ ತಾನು ಕಾಂಗ್ರೆಸ್​​ ಹಿರಿಯ ನಾಯಕರಿಗಿಂತ ಬುದ್ದಿವಂತೆ ಎಂದು ಭಾವಿಸಿ ಅಂದಿನ ಕೇಂದ್ರ ಹಣಕಾಸು ಸಚಿವ ಮೊರಾರ್ಜಿಯವರ ಸಮ್ಮತಿಯಿಲ್ಲದೆ ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ಸೂಚನೆ ನೀಡಿದ್ದರು. ಇದರಿಂದ ಬೇಸತ್ತ ಎಸ್‌.ನಿಜಲಿಂಗಪ್ಪ ಅವರು ಇಂದಿರಾರನ್ನು ಪಕ್ಷದಿಂದ ಉಚ್ಚಾಟಿಸಿದರು. ಬಳಿಕ ಇಂದಿರಾ ಹೆಚ್ಚಿನ ಸಂಸದರನ್ನು ತಮ್ಮೊಂದಿಗೆ ಸೆಳೆದು ಪ್ರತ್ಯೇಕ ಕಾಂಗ್ರೆಸ್‌ ಬಣವನ್ನು ಸೃಷ್ಟಿಸಿದರು.

ಎಸ್​​.ನಿಜಲಿಂಗಪ್ಪನವರ ಗರಡಿಯಲ್ಲಿಯೇ ರಾಜಕೀಯದಲ್ಲಿ ಪಳಗಿದ್ದ ಜಾಫರ್​​ ಶರೀಫ್​ ಅವರು, ಕಾಂಗ್ರೆಸ್​ ವಿಭಜನೆಯ ನಂತರದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡರು. ರೈಲ್ವೆ ಸಚಿವರಾಗಿ, ರಾಜ್ಯದಲ್ಲಿ ರೈಲ್ವೆಯ ಗೇಜ್ ಮಾರ್ಪಾಡು ಸಾಧನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು, ಆ ಸಂದರ್ಭದಲ್ಲಿ ರೈಲ್ವೆಯ ಎಲ್ಲಾ ಅಥವಾ ಹೆಚ್ಚಿನ ವಿವಿಧ ಗೇಜ್‍ಗಳನ್ನು ವಿಶಾಲ ಗೇಜ್‍ಗಳಾಗಿ ಪರಿವರ್ತಿಸಲಾಯಿತು. ಇದರಿಂದಾಗಿ ರೈಲ್ವೆಗೆ ಸಾಕಷ್ಟು ಹಣವನ್ನು ಉಳಿಸಿ ಕೊಟ್ಟರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಜಾಫರ್ ಷರೀಫ್, ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1980-84- ರೈಲ್ವೆ ಖಾತೆ ರಾಜ್ಯ ಸಚಿವ, 1984- ನೀರಾವರಿ ಖಾತೆ ರಾಜ್ಯ ಸಚಿವ, 1988-89- ಕಲ್ಲಿದ್ದಲು ಖಾತೆ ರಾಜ್ಯ ಸಚಿವ, 1991ರಿಂದ 1995ರ ವರೆಗೆ ಕೇಂದ್ರ ರೈಲ್ವೆ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು. ಪಕ್ಷನಿಷ್ಠೆಗೆ ಹೆಸರಾಗಿದ್ದ ಜಾಫರ್ ಷರೀಫ್ ಹೈಕಮಾಂಡ್‍ನಲ್ಲಿ ಅತ್ಯಂತ ಪ್ರಭಾವಿ ಮುಖಂಡರಾಗಿದ್ದರು. ಇಂದಿರಾಗಾಂಧಿ ಕಾಲದಿಂದಲೂ ಇಂದಿನವರೆಗೂ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು. ಆದರೆ, 2009ರಲ್ಲಿ ರಸ್ತೆ ಅಪಘಾತದಲ್ಲಿ ಹಿರಿಯ ಪುತ್ರನನ್ನು ಕಳೆದುಕೊಂಡ ಬಳಿಕ ಸಕ್ರಿಯ ರಾಜಕಾರಣದಿಂದಲೇ ದೂರವಾಗಿದ್ದರು.

ಎಂಟು ಬಾರಿ ಲೋಕಸಭಾ ಸಂಸದರಾಗಿದ್ದ ಷರೀಫ್ 2004ರಲ್ಲಿ ಸೋತ ನಂತರ ರಾಜಕೀಯದಿಂದ ತೆರೆಮರೆಗೆ ಸರಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಐದು ಬಾರಿ ಗೆಲುವು ಸಾಧಿಸಿದ್ದರು. 2004ರಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ.ಸಾಂಗ್ಲಿಯಾನ ವಿರುದ್ಧ ಸೋತ ನಂತರ ಯಾವುದೇ ಚುನಾವಣೆ ಗೆಲ್ಲಲಿಲ್ಲ.

ಬಳಿಕ ಉಸಿರಾಟ ತೊಂದರೆಯಿಂದ ಅನಾರೋಗ್ಯಕ್ಕೀಡಾದರು. 85 ವರ್ಷದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಮಾಜಿ ಕೇಂದ್ರ ಸಚಿವ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳದಿದ್ದಾರೆ. ಸಂಸದರಾಗಿ, ರೈಲ್ವೇ ಸಚಿವರಾಗಿ, ಅಲ್ಪಸಂಖ್ಯಾತ ಪ್ರಭಾವಿ ನಾಯಕರಾಗಿ ಸೇವೆ ಸಲ್ಲಿಸಿದ್ದ ನಾಯಕರನ್ನು ಇಂದು ಕಾಂಗ್ರೆಸ್​​ ಕಳೆದುಕೊಂಡು ಬಡವಾಗಿದೆ.

Comments are closed.